Advertisement

ವರಿಷ್ಠರಲ್ಲಿ ಸಚಿವ ಸ್ಥಾನಕ್ಕೆ ಮನವಿ ಮಾಡಿದ ಉಮೇಶ್‌ ಕತ್ತಿ

09:59 AM Dec 20, 2019 | Team Udayavani |

ಬೆಂಗಳೂರು: ಸಚಿವ ಸ್ಥಾನಕ್ಕಾಗಿ ದೆಹಲಿಯಲ್ಲಿನ ವರಿಷ್ಠರನ್ನು ಭೇಟಿಯಾಗಿ ಮನವಿ ಮಾಡಿ ಲಾಬಿ ಮುಂದುವರಿಸಿರುವ ಬಿಜೆಪಿ ಹಿರಿಯ ಶಾಸಕ ಉಮೇಶ್‌ ಕತ್ತಿ ತಾವು ಎಂಟು ಬಾರಿ ಶಾಸಕನಾಗಿದ್ದು, ಮುಖ್ಯಮಂತ್ರಿ ಸ್ಥಾನ ಕೇಳುವುದರಲ್ಲಿ ತಪ್ಪಿಲ್ಲ ಎಂದು ಹೇಳುವ ಮೂಲಕ ಚರ್ಚೆಗೆ ಗ್ರಾಸವಾಗಿದ್ದಾರೆ.

Advertisement

ದೆಹಲಿಯಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಪ್ರತಿಕ್ರಿಯಿಸಿದ ಅವರು, ನನಗೂ ಮುಖ್ಯಮಂತ್ರಿಯಾಗುವ ಆಸೆ ಇದೆ. ನನಗೆ ಯಾವ ಅರ್ಹತೆ ಇಲ್ಲ ಹೇಳಿ. ಜನ ಆಶೀರ್ವಾದ ಮಾಡಿದರೆ ಇನ್ನೂ ಹೆಚ್ಚು ಧೈರ್ಯ ಬರುತ್ತದೆ.

ಅಖಂಡ ಕರ್ನಾಟಕಕ್ಕೆ ನಾನು ಮುಖ್ಯಮಂತ್ರಿಯಾಗಲೇ ಬೇಕು ಎಂದು ಪುನರುಚ್ಚರಿಸಿದರು.

ಕೇಂದ್ರ ಗೃಹ ಸಚಿವರಾದ ಅಮಿತ್‌ ಶಾ, ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅವರನ್ನು ಭೇಟಿಯಾಗಿ ಸಚಿವ ಸ್ಥಾನ ನೀಡುವಂತೆ ಮನವಿ ಮಾಡಿದ್ದೇನೆ. ನಾನೂ ಮಂತ್ರಿಯಾಗಬೇಕು ಎಂದು ಕೋರಿದ್ದೇನೆ. ಎಂಟು ಬಾರಿ ಗೆದ್ದಿರುವ ನಾನು ಬಿಜೆಪಿಯಲ್ಲಿ ಹಿರಿಯ ಶಾಸಕನಾಗಿದ್ದು, ನಾನು ಮುಖ್ಯಮಂತ್ರಿ ಸ್ಥಾನ ಕೇಳುವುದರಲ್ಲಿ ತಪ್ಪಲ್ಲ ಎಂದು ಹೇಳಿದ್ದಾರೆ.

ಇನ್ನೊಂದೆಡೆ ಬೆಂಗಳೂರಿನಲ್ಲಿ ಸಚಿವಕಾಂಕ್ಷಿಗಳು ಗುರುವಾರವೂ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಸಚಿವ ಸ್ಥಾನಕ್ಕಾಗಿ ಮನವಿ ಮಾಡಿದರು. ಶಾಸಕ ಮುರುಗೇಶ್‌ ನಿರಾಣಿ ಅವರು ಡಾಲರ್ ಕಾಲೋನಿ ನಿವಾಸದಲ್ಲಿ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಚರ್ಚಿಸಿದರು. ಹಾಗೆಯೇ ಮಾಜಿ ಸಚಿವ ಎಂ.ಟಿ.ಬಿ. ನಾಗರಾಜ್‌ ಅವರು ಯಡಿಯೂರಪ್ಪ ಅವರ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದರು.

Advertisement

ಉಪಚುನಾವಣೆಯಲ್ಲಿ ಗೆದ್ದವರಿಗಷ್ಟೇ ಸಚಿವ ಸ್ಥಾನ ಎಂದು ಯಡಿಯೂರಪ್ಪ ಅವರು ಹೇಳಿರುವ ಬೆನ್ನಲ್ಲೇ ಎಂ.ಟಿ.ಬಿ. ನಾಗರಾಜ್‌ ಭೇಟಿಯಾಗಿರುವುದು ಕುತೂಹಲ ಮೂಡಿಸಿದೆ.

ಸಂಪುಟ ವಿಸ್ತರಣೆ ವಿಳಂಬವಾಗುತ್ತಿದ್ದಂತೆ ಮೂಲ ಬಿಜೆಪಿಗರಲ್ಲಿ ಸಚಿವಾಕಾಂಕ್ಷಿಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಜಾತಿ, ಜಿಲ್ಲೆ, ಪ್ರಾದೇಶಿಕ, ಹಿರಿತನದ ಆಧಾರದಡಿ ಸ್ಥಾನಮಾನಕ್ಕಾಗಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾರಂಭಿಸಿದ್ದಾರೆ.

ಡಿ.22ರ ಬಳಿಕ ದೆಹಲಿಗೆ
ಸಂಪುಟ ವಿಸ್ತರಣೆ ಕುರಿತು ಗುರುವಾರ ನಗರದಲ್ಲಿ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಸಂಪುಟ ವಿಸ್ತರಣೆ ಸಂಬಂಧ ಡಿ.22ರ ಬಳಿಕ ದೆಹಲಿಗೆ ತೆರಳುತ್ತೇನೆ. ವರಿಷ್ಠರನ್ನು ಭೇಟಿಯಾಗಿ ಚರ್ಚಿಸಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಮುಖ್ಯಮಂತ್ರಿಗಳು ಡಿ.22ರ ನಂತರ ದೆಹಲಿಗೆ ತೆರಳುವುದಾಗಿ ಹೇಳಿದ್ದರೂ ಡಿ. 22ರ ಹೊತ್ತಿಗೆ ಅವರು ಶಿವಮೊಗ್ಗಕ್ಕೆ ತೆರಳಿ ಕೆಲವು ದಿನ ಅಲ್ಲೇ ವಾಸ್ತವ್ಯ ಹೂಡಲಿದ್ದಾರೆ ಎಂಬ ಮಾತಿದೆ. ಹಾಗಾಗಿ ಸಂಕ್ರಾಂತಿ ಬಳಿಕವಷ್ಟೇ ಸಂಪುಟ ವಿಸ್ತರಣೆ ಎಂಬ ಮಾತು ಕೇಳಿಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next