ಬೆಂಗಳೂರು: ಬಿಜೆಪಿ ಅತೃಪ್ತ ಶಾಸಕರ ಸರಣಿ ಸಭೆ ನಡೆಸುವ ಮೂಲಕ ಪಕ್ಷದಲ್ಲಿ ಸಂಚಲನ ಮೂಡಿಸಿದ್ದ ಮಾಜಿ ಸಚಿವ ಉಮೇಶ್ ಕತ್ತಿ ಬುಧವಾರ ಬೆಳಗ್ಗೆ ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಚರ್ಚಿಸಿರುವುದು ಕುತೂಹಲ ಮೂಡಿಸಿದೆ. ತಮ್ಮ ಸೂಚನೆ ಮೇರೆಗೆ ಭೇಟಿಯಾಗಿದ್ದ ಉಮೇಶ್ ಕತ್ತಿಯವರಿಗೆ ಸಚಿವ ಸ್ಥಾನದ ಖಾತರಿ ನೀಡಿರುವ ಯಡಿಯೂ ರಪ್ಪ ಅವರು ರಮೇಶ್ ಕತ್ತಿಗೆ ರಾಜ್ಯಸಭಾ ಟಿಕೆಟ್ ನೀಡುವ ವಿಚಾರದ ಬಗ್ಗೆ ಪಕ್ಷದ ವರಿಷ್ಠರ ನಿರ್ಧಾ ರವೇ ಅಂತಿಮ ಎಂಬುದಾಗಿ ಸ್ಪಷ್ಟ ವಾಗಿ ತಿಳಿಸಿದ್ದಾರೆ ಎನ್ನಲಾಗಿದೆ.
ಹಾಗಾಗಿ ಉಮೇಶ್ ಕತ್ತಿ ಅವರ ಮುಂದಿನ ನಡೆ ಏನು ಎಂಬ ಕುತೂಹಲ ಮೂಡಿದೆ. ಸಹೋದರ ರಮೇಶ್ ಕತ್ತಿಯವರಿಗೆ ರಾಜ್ಯಸಭಾ ಟಿಕೆಟ್ ನೀಡುವುದು ಹಾಗೂ ತಮಗೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿ ಉಮೇಶ್ ಕತ್ತಿ 15 ದಿನಗಳಲ್ಲಿ ಎರಡು ಬಾರಿ ಅತೃಪ್ತ ಶಾಸಕರ ಸಭೆ ನಡೆಸಿದ್ದು, ಬಿಜೆಪಿಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ವೈಯಕ್ತಿಕ ಸ್ಥಾನಮಾನಕ್ಕಾಗಿ ಒತ್ತಡ ಹೇರಲು ಸಭೆ ನಡೆಸಿದ್ದಾರೆ ಎನ್ನಲಾದರೂ ಕ್ರಮೇಣ ಈ ರೀತಿಯ ಸಭೆಗಳು ನಾಯಕತ್ವದ ಬಗ್ಗೆಯೇ ಅಪಸ್ವರ ವ್ಯಕ್ತವಾಗುವ ಮಾತುಗಳೂ ಕೇಳಿಬಂದಿದ್ದವು. ಈ ಮಧ್ಯೆ ಯಡಿಯೂರಪ್ಪ ಅವರ ಸೂಚನೆ ಮೇರೆಗೆ ಉಮೇಶ್ ಕತ್ತಿ ಬುಧವಾರ ಭೇಟಿಯಾಗಿದ್ದರು.
ತಮಗೆ ಸಚಿವ ಸ್ಥಾನದ ಜತೆಗೆ ಸಹೋದರನಿಗೆ ರಾಜ್ಯಸಭಾ ಟಿಕೆಟ್ ನೀಡುವಂತೆ ಅವರು ಮತ್ತೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಸದ್ಯದಲ್ಲೇ ಸಂಪುಟ ವಿಸ್ತರಣೆಯಾಗಲಿದ್ದು, ತಮ್ಮನ್ನು ಚಿವರನ್ನಾಗಿ ಮಾಡುವುದು ಖಚಿತ. ಆದರೆ ಸಹೋದರನಿಗೆ ರಾಜ್ಯಸಭಾ ಟಿಕೆಟ್ ನೀಡುವ ಬಗ್ಗೆ ವರಿಷ್ಠರ ನಿರ್ಧಾರವೇ ಅಂತಿಮ. ಆ ಬಗ್ಗೆ ಯಾವುದೇ ಖಾತರಿ ನೀಡಲಾಗದು ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಉಮೇಶ್ ಕತ್ತಿಯವರು ಇತ್ತೀಚೆಗೆ ನಡೆದ ಶಾಸಕರ ಸಭೆ ಬಗ್ಗೆಯೂ ಸ್ಪಷ್ಟನೆ ನೀಡಿದರು. ಅಲ್ಲಿ ಪ್ರಸ್ತಾಪವಾದ ವಿಚಾರದ ಬಗ್ಗೆಯೂ ಯಡಿಯೂರಪ್ಪ ಅವರಿಗೆ ಮಾಹಿತಿ ನೀಡಿದರು ಎಂದು ಹೇಳಲಾಗಿದೆ.
ಬೆಳಗಾವಿ ಜಿಲ್ಲೆಯಲ್ಲಿ ಉಮೇಶ್ ಕತ್ತಿ ಕುಟುಂಬ ಹಿಡಿತ ಹೊಂದಿದೆ. ಆದರೆ ಕಳೆದ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಲಕ್ಷ್ಮಣ ಸವದಿಅವರನ್ನು ಡಿಸಿಎಂ ಮಾಡಲಾಗಿದೆ. ಶಶಿಕಲಾ ಜೊಲ್ಲೆ ಸಚಿವರಾಗಿದ್ದಾರೆ. ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ರಮೇಶ್ ಜಾರಕಿಹೊಳಿ ಕೊನೆಗೂ ಬೆಳಗಾವಿ ಉಸ್ತುವಾರಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಸಹೋದರನಿಗೆ ರಾಜ್ಯಸಭಾ ಟಿಕೆಟ್ ಕೂಡ ಕೈತಪ್ಪಿದರೆ ಜಿಲ್ಲೆಯಲ್ಲಿ ತಮ್ಮ ಪ್ರಭಾವ ಕುಗ್ಗುವ ಆತಂಕದಿಂದ ಉಮೇಶ್ ಕತ್ತಿಯವರು ಸಹೋದರನಿಗೆ ಟಿಕೆಟ್ ಕೊಡಿಸಲು ಇನ್ನಿಲ್ಲದ ಕಸರತ್ತು ನಡೆಸಿದ್ದು, ಎಷ್ಟರ ಮಟ್ಟಿಗೆ ಕೈ ಹಿಡಿಯಲಿದೆ ಎಂಬುದನ್ನು ಕಾದುನೋಡಬೇಕಿದೆ.