ಕೆಲವೊಮ್ಮೆ ಕೊಡೆಯ ಬಟ್ಟೆಯನ್ನು ಹೆಗ್ಗಣಗಳು, ಯಾವುದೋ ಜನ್ಮದ ದ್ವೇಷ ತೀರಿಸುವಂತೆ ತುಂಡು ತುಂಡು ಮಾಡುತ್ತಿದ್ದವು. ಜಿರಳೆ, ಇರುವೆಗಳು ಕೊರೆದ ತೂತುಗಳಲ್ಲಿ ಆಕಾಶದ ನಕ್ಷತ್ರ ಮಂಡಲ ಕಾಣುತ್ತಿತ್ತು.
ಮಳೆಗಾಲ ಹತ್ತಿರ ಬರುತ್ತಿದೆ. ಮನೆಯಲ್ಲಿರುವ ಹಳೆಯ ಕೊಡೆಗಳು ಸುಸ್ಥಿತಿಯಲ್ಲಿವೆಯಾ ನೋಡಬೇಕು. ಆದರೆ, ಕೊರೊನಾದಿಂದಾಗಿ ಹೊರಗಿನ ಓಡಾಟವೇ ಕಡಿಮೆಯಾಗಿದೆ. ಮನೆಯೇ ಆಫೀಸಾಗಿದೆ. ಮಕ್ಕಳೂ ಶಾಲೆಗೆ ಹೋಗುತ್ತಿಲ್ಲ. ದೇವಸ್ಥಾನಕ್ಕೆ ಹೋಗೋಣ ಎಂದರೆ, ಅದೂ ಬಾಗಿಲು ಹಾಕಿದೆ. ಶಾಪಿಂಗಿಗೆ ಮಾಲ್‌ಗಳು ತೆರೆದಿಲ್ಲ. ತರಕಾರಿ, ಹಾಲು, ಹಣ್ಣು ಎಂದು ತಿರುಗಾಡಲು ಕೊಡೆ ಬೇಕಾಗಬಹುದು, ಅಷ್ಟೇ. ನಾನು ಹುಟ್ಟಿ ಬೆಳೆದ ಕರಾವಳಿಯಲ್ಲಿ ವರ್ಷದಲ್ಲಿ 300 ದಿನವಾದರೂ ಕೊಡೆ ಜೊತೆಗಿರಬೇಕಿತ್ತು. ಒಂದೋ ವಿಪರೀತ ಮಳೆ, ಇಲ್ಲವಾದರೆ ತಲೆ ಸುಡುವ ಬಿಸಿಲು. ಎರಡಕ್ಕೂ ಕೊಡೆಯ ಆಸರೆ ಬೇಕು.
ಹಾಗಾಗಿ, ಮನೆಯಲ್ಲಿ ನಾಲ್ಕು ಜನರಿದ್ದರೆ, ನಾಲ್ಕು ಕೊಡೆ ಬೇಕು. ಹಿರಿಯರಿಗೆ ದೊಡ್ಡ ಮರದ ಹಿಡಿಯ ಕೊಡೆ, ಉಳಿದವರಿಗೆ ಮಧ್ಯಮ, ಚಿಕ್ಕ ಗಾತ್ರದ ಕೊಡೆಗಳು, ಹಳತಾದ ಕೊಡೆ, ಮನೆ ಕೆಲಸದವಳ ಕೈ ಸೇರುತ್ತಿತ್ತು. ಕೊಡೆಯೆಂದ ಕೂಡಲೇ ಬಾಲ್ಯದ ಕಪ್ಪು ಕೊಡೆ ಕಣ್ಣೆದುರು ಬಿಚ್ಚಿಕೊಳ್ಳುತ್ತದೆ. ಬೇಸಿಗೆ ರಜಾ ಮುಗಿದು, ಮಳೆಯ ಒಂದೆರಡು ಹನಿ ಬೀಳುತ್ತಿದ್ದಂತೆ, ಮೂಲೆ ಸೇರಿದ ಕೊಡೆಗಳು ಹೊರಗೆ ಬರುತ್ತಿದ್ದವು. ಅದು ಕೊಡೆ ದುರಸ್ತಿಯ ಸಮಯ. ಹರಿದ ಬಟ್ಟೆ, ಬಗ್ಗಿದ ಕಡ್ಡಿ, ಕಡ್ಡಿಗೆ ಸಿಕ್ಕಿಕೊಳ್ಳದೆ ಸ್ವತಂತ್ರವಾಗಿ ಹಾರಾಡುವ ಬಟ್ಟೆ ಎಲ್ಲವನ್ನೂ ಸರಿ ಮಾಡಬೇಕಿತ್ತು.
ಆ ಸಮಯದಲ್ಲಿ, ಕೊಡೆ ರಿಪೇರಿ ಮಾಡುವವನಿಗೂ ಡಿಮ್ಯಾಂಡು. ಕೊಡೆಗೆ ಶತ್ರುಗಳು ಇಲ್ಲದಿಲ್ಲ. ಕೆಲವೊಮ್ಮೆ ಕೊಡೆಯ ಬಟ್ಟೆಯನ್ನು ಹೆಗ್ಗಣಗಳು, ಯಾವುದೋ ಜನ್ಮದ ದ್ವೇಷ ತೀರಿಸುವಂತೆ ತುಂಡು ತುಂಡು ಮಾಡುತ್ತಿದ್ದವು. ಜಿರಳೆ, ಇರುವೆಗಳು ಕೊರೆದ ತೂತುಗಳಲ್ಲಿ ಆಕಾಶದ ನಕ್ಷತ್ರ ಮಂಡಲ ಕಾಣುತ್ತಿತ್ತು. ಕೊಡೆಯ ಕಳ್ಳತನವಾಗದಂತೆ ನೋಡಿಕೊಳ್ಳುವುದೇ ಬಹುದೊಡ್ಡ ಕಷ್ಟವಾಗುತ್ತಿತ್ತು. ಒದ್ದೆ ಕೊಡೆಯನ್ನು ಕ್ಲಾಸಿನ ಹೊರಗೆ ಇಟ್ಟು ಒಳಗೆ ಬಂದರೆ, ಸಂಜೆ ಬರುವಾಗ ಅದು ಮಾಯವಾಗಿರುತ್ತಿತ್ತು. ಅಂಗಡಿ, ದೇವಸ್ಥಾನಕ್ಕೆ ಹೋದಾಗಲೂ ಅಷ್ಟೇ; ಒದ್ದೆ ಕೊಡೆಗಳನ್ನು ಒಳಗೆ ಒಯ್ಯುವಂತಿಲ್ಲ,
ಹೊರಗಿಟ್ಟರೆ, ಅವು ವಾಪಸ್ ಸಿಗುವ ಗ್ಯಾರಂಟಿ ಇಲ್ಲ. ಕೊಡೆಯ ಕಳ್ಳತನ ತಪ್ಪಿಸಲು, ಕೊಡೆಯ ಮೇಲೆ ಹೆಸರನ್ನು ಹೊಲಿಯುತ್ತಿದ್ದೆವು. ಈ ಮೂರು- ನಾಲ್ಕು ದಶಕಗಳಲ್ಲಿ ಕೊಡೆಯಲ್ಲೂ ಎಷ್ಟೊಂದು ಬದಲಾವಣೆಗಳು! ಬಾಲ್ಯದ ದಿನಗಳನ್ನು ನೆನೆಸಿಕೊಂಡರೆ ಕೊಡೆ ಇಲ್ಲದೆ ಗೋಣಿ ಚೀಲ ಹೊದ್ದು ಶಾಲೆಗೆ ಬರುವವರೂ ಇದ್ದರು. ಓಲಿ ಕೊಡೆ ತರುತ್ತಿದ್ದವರೂ ಇದ್ದರು (ಕೇದಿಗೆ ಗಿಡದ ಉದ್ದದ ಎಲೆ ಮತ್ತು ಬಿದಿರು ಸೇರಿಸಿ ಮಾಡಿದ ಕೊಡೆ ಅದು, ಮಡಚಲಾಗುವುದಿಲ್ಲ) ಕ್ರಮೇಣ ಆ ಕೊಡೆ ಕಣ್ಮರೆಯಾಯಿತು. ಕಬ್ಬಿಣ ಮತ್ತು ಮರದ ಜಲ್ಲಿನ ಬಟ್ಟೆಯ ಕೊಡೆಗಳು ಸಾಕಷ್ಟು ಮೆರೆದಾಡಿದವು.
ಕಾಲಿಗೆ ಚಪ್ಪಲಿ ಇಲ್ಲದಿದ್ದರೂ ಗಂಡಸರಿಗೆ ಕೈಯಲ್ಲಿ ಕೊಡೆ ಬೇಕಿತ್ತು. ಹೆಣ್ಣು ಮಕ್ಕಳಿಗೆ ಮದುವೆ ಮಾಡಿ ಕೊಡುವಾಗ ಬಳುವಳಿ ಯಾಗಿ ಕೊಡೆಯನ್ನೂ ಕೊಡುತ್ತಿದ್ದರು. ನಂತರ, ಮಡಚಿದರೆ ಒಂದು ಅಡಿಯಷ್ಟು ಉದ್ದವಾಗುವ ನೈಲಾನ್ ಬಟ್ಟೆಯ ಕೊಡೆ ಬಂತು. ಅದಕ್ಕೊಂದು ಬಟನ್ ಬೇರೆ, ಬಟನ್ ಒತ್ತಿದರೆ ಸಾಕು, ತಟ್ಟಂತ ಹರಡಿಕೊಳ್ಳುತ್ತಿತ್ತು. ಕೊಡೆಗಳಗೆ ನೈಲಾನ್ ಬಟ್ಟೆ ಬರುತ್ತಿದ್ದಂತೆ ಕೊಡೆಯ ಬಣ್ಣ ಬದಲಾಯಿತು. ಬಣ್ಣದ ಕೊಡೆಗಳಲ್ಲಿ ಚಿತ್ರಗಳೂ ಮೂಡಿದವು. ಕೆಲವೇ ವರ್ಷಗಳಲ್ಲಿ ಕೊಡೆ ಇನ್ನೂ ಚಿಕ್ಕದಾಯಿತು. ಮಡಚಿದರೆ ಅರ್ಧ ಅಡಿಯೂ ಇಲ್ಲ, ಸುಲಭದಲ್ಲಿ ಅದನ್ನು ಬ್ಯಾಗಿನಲ್ಲಿ ಇಟ್ಟುಕೊಳ್ಳಬಹುದು.
ಅಷ್ಟರಲ್ಲಿ, ಜನರ ಆರ್ಥಿಕ ಸ್ಥಿತಿ ಉತ್ತಮವಾಯಿತೋ ಏನೋ ಕೊಡೆ ಕಳ್ಳತನವಾಗುವುದು ನಿಂತು ಹೋಯಿತು. ಕೊಡೆಯಲ್ಲೂ ಫ್ಯಾಷನ್ ಬಂತು, ಫ್ಯಾಷನ್ನಿ ಗಾಗಿ ಕೊಡೆ ಹಿಡಿವ ಕಾಲವೂ ಬಂತು. ಪಾರದರ್ಶಕ ಕೊಡೆಗಳು, ಬಿಳಿ ಕೊಡೆಗಳು, ಕುಟುಂಬದವರೆಲ್ಲಾ ಹಿಡಿಸುವಷ್ಟು ದೊಡ್ಡ ಕೊಡೆ, ಟೊಪ್ಪಿಗೆ ಅಂಟಿಕೊಂಡಿರುವ ಪುಟ್ಟ ಕೊಡೆ… ಇಷ್ಟೆಲ್ಲಾ ಬಗೆ ಇದ್ದರೂ ಈಗ ಕೊಡೆ ಅಪರೂಪವಾಗುತ್ತಿದೆ. ಎಲ್ಲರೂ ಎರಡು, ನಾಲ್ಕು, ಆರು ಚಕ್ರದ ವಾಹನಗಳಲ್ಲೇ ತಿರುಗಾಡುವಾಗ ಕೊಡೆಯ ಹಂಗಾದರೂ ಯಾಕೆ ಬೇಕು?
* ಗೀತಾ ಕುಂದಾಪುರ