Advertisement

ಮತ ಪ್ರಮಾಣ ಹೆಚ್ಚಿಸಲು ಶಾಮಿಯಾನ, ಫ್ಯಾನು, ನೀರು…!

12:44 AM May 06, 2024 | Team Udayavani |

ಬೆಂಗಳೂರು: ತೀವ್ರ ಬಿಸಿಲ ಝಳದ ನಡುವೆಯೇ ಮೇ 7ರಂದು ಮತದಾನ ನಡೆಯುವ ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಅಗತ್ಯವಿದ್ದಲ್ಲಿ ಮತದಾರರಿಗೆ ಶಾಮಿಯಾನ, ಫ್ಯಾನ್‌ ಮತ್ತು ಕುಳಿತುಕೊಳ್ಳುವ ವ್ಯವಸ್ಥೆ ಕಲ್ಪಿಸುವಂತೆ ಜಿಲ್ಲಾ ಚುನಾವಣಾಧಿಕಾರಿಗಳಿಗೆ ರಾಜ್ಯದ ಮುಖ್ಯ ಚುನಾವಣಾಧಿಕಾರಿ ಮನೋಜ್‌ ಕುಮಾರ್‌ ಮೀನಾ ಸೂಚನೆ ನೀಡಿದ್ದಾರೆ.

Advertisement

ಬಿಸಿಲು, ಉಷ್ಣ ಗಾಳಿಯ ಹೊಡೆತಕ್ಕೆ ಅಂಜಿ ಮತದಾನಕ್ಕೆ ಮತದಾರರು ಹಿಂಜರಿಯಬಾರದು ಎಂಬ ಉದ್ದೇಶದಿಂದ ಮತಕೇಂದ್ರಗಳಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಮನೋಜ್‌ ಕುಮಾರ್‌ ಮೀನಾ ನಿರ್ದೇಶನ ನೀಡಿದ್ದಾರೆ.

ಮತಗಟ್ಟೆಯ ಸಮೀಪದಲ್ಲಿರುವ ಕೊಠಡಿಯನ್ನು ಕಾಯುವ ಕೊಠಡಿಯನ್ನಾಗಿ ಪರಿವರ್ತಿಸಣಬೇಕು. ಅಗತ್ಯವಿದ್ದರೆ ಮತಗಟ್ಟೆಯ ಮುಂಭಾಗದಲ್ಲಿ ಟೆಂಟ್‌ ಹಾಕಿ, ಫ್ಯಾನ್‌ ಅಳವಡಿಸಬಹುದು. ಜತೆಗೆ ನಿರ್ಜಲೀಕರಣ, ಸನ್‌ಸ್ಟ್ರೋಕ್‌ ಮುಂತಾದ ಸಮಸ್ಯೆಗಳನ್ನು ನಿಭಾಯಿಸಲು ವಿಶೇಷ ವೈದ್ಯಕೀಯ ಕಿಟ್‌ಗಳನ್ನು ಸಿದ್ಧಪಡಿಸಿಕೊಳ್ಳಬೇಕು ಎಂದು ಮುಖ್ಯ ಚುನಾವಣಾಧಿಕಾರಿ ಸೂಚನೆ ನೀಡಿದ್ದಾರೆ. ಆರೋಗ್ಯ ಇಲಾಖೆ ಜತೆಗೆ ಸಮನ್ವಯ ಸಾಧಿಸಿ ಶುಶ್ರೂಶಕರು ಮತ್ತು ತರಬೇತಿ ಹೊಂದಿದ ಆಶಾ ಕಾರ್ಯಕರ್ತರನ್ನು ಮತಕೇಂದ್ರಗಳಲ್ಲಿ ನಿಯೋಜಿಸಿ ಒಆರ್‌ಎಸ್‌, ವೈದ್ಯಕೀಯ ಕಿಟ್‌ಗಳನ್ನು ನೀಡುವಂತೆಯೂ ಸೂಚನೆ ನೀಡಲಾಗಿದೆ.

ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ತುರ್ತು ಸಂದರ್ಭದ ನಿರ್ವಹಣೆಗಾಗಿ ಆ್ಯಂಬುಲೆನ್ಸ್‌ ವ್ಯವಸ್ಥೆಯನ್ನು ಮಾಡಲಾಗಿದೆ. ಮತಗಟ್ಟೆಗಳಲ್ಲಿ ಕನಿಷ್ಠ ಸೌಲಭ್ಯಗಳಾದ ರ್‍ಯಾಂಪ್‌ ಸೌಲಭ್ಯ, ಕುಡಿಯುವ ನೀರು, ವಿದ್ಯುತ್‌, ಪೀಠೊಪಕರಣಗಳು, ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಮತ್ತು ಸಂಕೇತ ಫ‌ಲಕಗಳನ್ನು ಅಳವಡಿಸಲಾಗಿದೆ. ವಿಶೇಷ ಚೇತನರು ಮತ್ತು ಹಿರಿಯ ನಾಗರಿಕರಿಗೆ ಮತದಾನಕ್ಕೆ ನೆರವು ನೀಡಲು ಮತಗಟ್ಟೆಯಲ್ಲಿ ಸಹಾಯಕರು ಲಭ್ಯರಿರುತ್ತಾರೆ.

ಜತೆಗೆ ಮತದಾರರಿಗೆ ನೀಡಲಾಗಿರುವ ಮತದಾರರ ಚೀಟಿಗಳಲ್ಲಿ ಮತದಾನ ಮತ್ತು ಮತಗಟ್ಟೆಗಳ ಕುರಿತ ಸೂಚನೆಗಳು ಮತ್ತು ಗೂಗಲ್‌ ನಕ್ಷೆಗಳ ಕ್ಯೂ ಆರ್‌ ಕೋಡ್‌ ಅಳವಡಿಸಲಾಗಿದ್ದು, ಮತದಾರರಿಗೆ ತಮ್ಮ ಸಮೀಪದ ಮತಗಟ್ಟೆಯ ಮಾಹಿತಿ ತಿಳಿಯಲಿದೆ. ನಗರ ಪ್ರದೇಶದಲ್ಲಿ ಮತದಾರರ ಮಾಹಿತಿ ಸ್ಲಿಪ್‌ಗ್ಳು ಕ್ಯೂಆರ್‌ ಕೋಡ್‌ ಒಳಗೊಂಡಿದ್ದು ಇದನ್ನು ಸ್ಕ್ಯಾನ್‌ ಮಾಡಿದಾಗ ಗೂಗಲ್‌ ನಕ್ಷೆಗಳು ಮತದಾನ ಕೇಂದ್ರ ತಲುಪಲು ಮತದಾರರಿಗೆ ನೆರವು ನೀಡಲಿದೆ.

Advertisement

ಮುನ್ನೆಚ್ಚರಿಕೆ ಕ್ರಮಗಳು?
– ಜಿಲ್ಲೆ, ತಾಲೂಕು ಮಟ್ಟದ ಮತಗಟ್ಟೆಗಳಲ್ಲಿ ಆ್ಯಂಬ್ಯುಲೆನ್ಸ್‌ ವ್ಯವಸ್ಥೆ.
– ಮತಗಟ್ಟೆ ಸಮೀಪದ ಕೊಠಡಿಗಳು ಕಾಯುವ ಕೊಠಡಿಗಳಾಗಿ ಪರಿವರ್ತನೆ.
– ಶುಶ್ರೂಶಕರು, ತರಬೇತಿ ಹೊಂದಿದ ಆಶಾ ಕಾರ್ಯಕರ್ತೆಯರ ನಿಯೋಜನೆ
– ಒಆರ್‌ಎಸ್‌, ವೈದ್ಯಕೀಯ ಕಿಟ್‌ ನೀಡಲು ಕ್ರಮ
– ಕುಡಿವ ನೀರು, ವಿದ್ಯುತ್‌, ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆಗೆ ಕ್ರಮ

ಉಷ್ಣ ಅಲೆ ಅಥವಾ ಬಿಸಿಲಿನ ಬೇಗೆಯಿಂದ ಸಂಭವಿಸಬಹುದಾದ ಅನಾಹುತಗಳನ್ನು ನಿಭಾಯಿಸಲು ಚುನಾವಣ ಆಯೋಗ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಮತದಾರರಿಗೆ ಸುರಕ್ಷಿತವಾಗಿ ಮತದಾನ ಮಾಡಲು ಅಗತ್ಯ ಸೌಲಭ್ಯಗಳನ್ನು ಒದಗಿಸುವುದು ನಮ್ಮ ಕರ್ತವ್ಯ. ಚುನಾವಣ ಕರ್ತವ್ಯ ನಿರತರು, ಹಿರಿಯ ನಾಗರಿಕರು, ವಿಶೇಷ ಚೇತನರು ಸಹಿತ ಸಾಮಾನ್ಯ ಮತದಾರರನ್ನು ಗಮನದಲ್ಲಿರಿಸಿಕೊಂಡು ನಾವು ಕ್ರಮ ಕೈಗೊಂಡಿದ್ದೇವೆ.
-ಮನೋಜ್‌ ಕುಮಾರ್‌ ಮೀನಾ,
ರಾಜ್ಯ ಮುಖ್ಯ ಚುನಾವಣಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next