Advertisement
ಮಳೆ ಬರಲಿ, ಬಿಸಿಲೇ ಇರಲಿ, ಜೊತೆಗೊಂದು ಕೊಡೆ ಇದ್ದರೆ ಬಹಳ ಸೇಫ್. ಪ್ರತಿದಿನ ಹೊರಗೆ ಓಡಾಡುವ ಬಹುತೇಕರು ಈ ಮಾತನ್ನು ಮರೆಯದೇ ಪಾಲಿಸುತ್ತಾರೆ. ವರ್ಷಪೂರ್ತಿ ನಮ್ಮ ಜೊತೆಗಿರುವ ಈ ವಸ್ತು ಸ್ಟೈಲಿಶ್ ಆಗಿ, ವರ್ಣಮಯವಾಗಿ ಇದ್ದರೆ ಚೆಂದ ತಾನೇ? ಹಾಗಾಗಿಯೇ, ವಿಭಿನ್ನ ಬಗೆಯ ಛತ್ರಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿರುವುದು.
Related Articles
Advertisement
ಡ್ರೆಸ್‌ಗೆ ಮ್ಯಾಚ್ ಮಾಡಬಹುದು: ಪ್ಲಾಸ್ಟಿಕ್‌ನ ಪದರ ಇರುವ ಕಾರಣ, ಕೆಳಗಿರುವ ಬಟ್ಟೆ ಒದ್ದೆ ಆಗುವುದಿಲ್ಲ. ಉಟ್ಟ ಉಡುಪಿಗೆ ಮ್ಯಾಚ್ ಆಗುವಂತೆ, ವಾಶೆಬಲ್ ಪೇಂಟ್ (ತೊಳೆದರೆ ಹೋಗುವಂಥ ಬಣ್ಣ) ಬಳಸಿ ಪಾರದರ್ಶಕ ಛತ್ರಿಗಳ ಒಳಭಾಗದಲ್ಲಿ ಚಿತ್ತಾರ ಮೂಡಿಸಬಹುದು. ಒಳಭಾಗದಲ್ಲಿ ನಿಮಗೆ ಇಷ್ಟವಾದ ಬಣ್ಣದಿಂದ ಕೇವಲ ಬಾರ್ಡರ್ ಅನ್ನು ಬಿಡಿಸಿದರೂ, ಟ್ರೆಂಡಿಯಾಗಿ ಕಾಣುತ್ತದೆ. 3 ಫೋಲ್ಡ್/ 4 ಫೋಲ್ಡ್ ಛತ್ರಿ, ರಾಜಸ್ಥಾನಿ ಕೊಡೆ ಮತ್ತು ಚೈನೀಸ್ ಛತ್ರಿಗಳಲ್ಲೂ ಮೇಲೆ ಹೇಳಿದ ಆಯ್ಕೆಗಳಿವೆ. ಚೈನೀಸ್ ಛತ್ರಿ ಮುಖ ವನ್ನು ಮುಚ್ಚದ ಕಾರಣ, ಬಿಡಿಸಿದಾಗ ಒಳಭಾಗದ ಚಿತ್ರ ಎಲ್ಲರ ಕಣ್ಣಿಗೆ ಬೀಳುವುದು ಖಚಿತ.
ಏನೆಲ್ಲಾ ಬಂದಿವೆ!: ಮಳೆ-ಬಿಸಿಲಿಗೆ ಯಾವುದೋ ಒಂದು ಛತ್ರಿಯಿದ್ದರೆ ಸಾಕು ಅನ್ನುವ ಕಾಲ ಇದಲ್ಲ. ಹಾಗಾಗಿ, ಛತ್ರಿಗಳ ಮೇಲೆ ನಡೆಯುತ್ತಿರುವ ಪ್ರಯೋಗಗಳೂ ಒಂದೆರಡಲ್ಲ. ಒಳಭಾಗದಲ್ಲಿ ಚಿತ್ತಾರ, ಅಪ್‌ಸೆçಡ್ ಡೌನ್ ಛತ್ರಿಗಳು, ಗೊಮ್ಮಟದಂತೆ ಇಡೀ ಮೈಯನ್ನು ರಕ್ಷಿಸುವ ಬಬಲ್ ಅಂಬ್ರೆಲಾ, ಕತ್ತಲೆಯಲ್ಲಿಯೂ ಸುಲಭವಾಗಿ ಕಾಣಿಸುವಂಥ ಎಲ್‌ಇಡಿ ಬಲ್ಬ್ಗಳನ್ನು ಹೊಂದಿರುವ ಛತ್ರಿಗಳು… ಅಬ್ಬಬ್ಟಾ, ಎಷ್ಟೊಂದು ಆಯ್ಕೆಗಳಿವೆ!
ಬೇಸಿಗೆ ಕೊಡೆ: ಮಳೆಗಾಲದಲ್ಲಿ ರಕ್ಷಣೆಗೆಂದು ಹಿಡಿಯುವ ಛತ್ರಿಯನ್ನು ಫ್ಯಾಷನ್ ಆ್ಯಕ್ಸೆಸರಿ ಅಂತ ಹೇಳಲಾಗದಿದ್ದರೂ, ಬೇಸಿಗೆಯಲ್ಲಿ ಬಳಸುವ ಛತ್ರಿಗಳನ್ನು ಫ್ಯಾಷನ್‌ನ ದೃಷ್ಟಿಯಲ್ಲಿ ನೋಡಲೇಬೇಕು. ಯಾಕೆಂದ್ರೆ, ಸ್ಟೈಲಿಶ್ ಆಗಿ ಡ್ರೆಸ್ ಮಾಡಿಕೊಂಡಿರುವಾಗ, ಕೈಯಲ್ಲಿ ಕಪ್ಪು ಬಣ್ಣದ 3 ಫೋಲ್ಡ್ ಛತ್ರಿ ಇದ್ದರೆ ಹೇಗೆ ಕಾಣುತ್ತದೆ ಯೋಚಿಸಿ? ಆದರೆ, ಹೆಚ್ಚು ಚಿತ್ತಾರಗಳಿರುವ, ಬಣ್ಣಬಣ್ಣದ ಛತ್ರಿಗಳು ಕೂಡಾ ಎಲ್ಲ ದಿರಿಸಿಗೂ ಒಪ್ಪುವುದಿಲ್ಲ.
ಹಾಗಾಗಿ, ಒಳಭಾಗದಲ್ಲಿ ಚಿತ್ತಾರವಿರುವ ಕೊಡೆಗಳೇ ಎಲ್ಲ ದೃಷ್ಟಿಯಿಂದಲೂ ಉತ್ತಮ ಅನ್ನಬಹುದು. ನ್ಯೂಟ್ರಲ್ ಕಲರ್‌ಗಳಾದ ಬೂದು, ಕಂದು, ಕಪ್ಪು, ಬಿಳಿ, ಗಾಢ ನೀಲಿ ಬಣ್ಣದ ಕೊಡೆಗಳ ಒಳಗೆ ಚಂದದ ಚಿತ್ತಾರವಿದ್ದರೆ, ಎಲ್ಲ ಬಣ್ಣದ ಡ್ರೆಸ್ ಜೊತೆಗೂ ಆರಾಮಾಗಿ ಕೊಂಡೊಯ್ಯ ಬಹುದು. ಅದರಲ್ಲೂ, ಒಳಗಡೆ ಹೂವು, ಗೊಂಬೆ, ಪೋಲ್ಕಾ ಡಾಟ್ಸ್‌ನಂಥ ಚಿತ್ತಾರಗಳು ಮಕ್ಕಳಿಗೆ ಹೆಚ್ಚು ಸೂಕ್ತವಾದರೆ, ಪ್ರಕೃತಿ ಸೌಂದರ್ಯವನ್ನು ಬಿಂಬಿಸುವ ಹಾಗೂ ಕಣ್ಣಿಗೆ ಹಿತವೆನಿಸುವ ಚಿತ್ತಾರಗಳ ಛತ್ರಿಗಳು ಪ್ರೌಢರಿಗೆ ಹೊಂದುತ್ತವೆ.
* ಅದಿತಿಮಾನಸ ಟಿ.ಎಸ್.