ಚಿಕ್ಕಬಳ್ಳಾಪುರ: ಅನರ್ಹ ಶಾಸಕರು ಹಣ, ಅಧಿಕಾರಕ್ಕಾಗಿ ಬಿಜೆಪಿಗೆ ಮಾರಾಟವಾಗಿದ್ದಾರೆಂದು ಮಾಜಿ ಸಚಿವೆ ಉಮಾಶ್ರೀ ಟೀಕಿಸಿದರು.
ಚಿಕ್ಕಬಳ್ಳಾಪುರ ನಗರದಲ್ಲಿ ಮಂಗಳವಾರ ಕಾಂಗ್ರೆಸ್ ಅಭ್ಯರ್ಥಿ ನಂದಿ ಅಂಜನಪ್ಪ ಪರ ಮತಯಾಚನೆ ನಡೆಸಿ ಮಾತನಾಡಿದ ಅವರು, ಐದು ವರ್ಷಕ್ಕೆ ಒಮ್ಮೆ ಬರುವ ಚುನಾವಣೆ ಒಂದುವರೆ ವರ್ಷಕ್ಕೆ ಬರಲು ಬಿಜೆಪಿ ಕಾರಣ, ರಾಜ್ಯದ ಅಭಿವೃದ್ಧಿಗಿಂತ ಅಧಿಕಾರ ಮಖ್ಯವಾಗಿದೆ ಎಂದರು.
ಅನರ್ಹ ಶಾಸಕರು ಸೋತರೆ ಮಾತ್ರ ಪ್ರಜಾಪ್ರಭುತ್ವ ಉಳಿಯಲು ಸಾಧ್ಯ. ಅನರ್ಹ ಶಾಸಕ ಸುಧಾಕರ್ ರಾಜಕಾರಣಕ್ಕೆ ಅತ್ಯಂತ ಅಪಾಯಕಾರಿ, ಕ್ಷೇತ್ರದ ಅಭಿವೃದ್ಧಿಗಿಂತ ತನ್ನ ಅಭಿವೃದ್ಧಿಗೆ ಕ್ಷೇತ್ರದ ಮತದಾರರು ಕೊಟ್ಟು ಜನಾದೇಶವನ್ನು ಬಿಜೆಪಿ ಕೊಟ್ಟಿರುವ ಹಣ, ಅಧಿಕಾರಕ್ಕೆ ಮಾರಾಟ ಮಾಡಿದ್ದಾರೆ. ಇತಂಹ ಅನರ್ಹ ಶಾಸಕರು ಮತ್ತೆ ಚುನಾವಣೆಯಲ್ಲಿ ಗೆದ್ದರೆ ಪ್ರಜಾಪ್ರಭುತ್ವಕ್ಕೆ ಅಪಾಯ ತಪ್ಪಿದ್ದಲ್ಲ ಎಂದರು.
ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ವೇಳೆ ಚಿಕ್ಕಬಳ್ಳಾಪುರ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ, ಕಾಂಗ್ರೆಸ್ ನಿಂದ ಮಾತ್ರ ಎಲ್ಲ ವರ್ಗದ ಜನರ ಅಭಿವೃದ್ಧಿ ಮಾಡಲು ಸಾಧ್ಯ, ಬಿಜೆಪಿ ಕೇವಲ ಅಧಿಕಾರಕ್ಕಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡಲು ಹೊರಟಿದೆ, ಬಿಜೆಪಿ ಅನೈತಿಕ ರಾಜಕಾರಣಕ್ಕೆ ರಾಜ್ಯದ ಜನ ತಕ್ಕಪಾಠ ಈ ಉಪ ಚುನಾವಣೆಯಲ್ಲಿ ಕಲಿಸಲಿದ್ದಾರೆಂದರು.