ಹುಬ್ಬಳ್ಳಿ: ತಾಲೂಕಿನ ಬಂಡಿವಾಡ ಗ್ರಾಮದ ಬಳಿ ನ. 21ರಂದು ನಡೆದಿದ್ದ ಮಾಜಿ ಸಚಿವ ಉಮಾಶ್ರೀ ಅವರಿಗೆ ಸೇರಿದ ಇನ್ನೋವಾ ಮತ್ತು ಬೊಲೆನೋ ಕಾರುಗಳ ನಡುವಿನ ಮುಖಾಮುಖಿ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ನವಲಗುಂದ ತಾಲೂಕ ಬೆಳೆಹಾರ ಗ್ರಾಮದ ಆರೋಗ್ಯಾಧಿಕಾರಿ ಡಾ. ಸ್ಮಿತಾ ಕಟ್ಟಿದ ಚಿಕಿತ್ಸೆ ಫಲಿಸದೆ ಶನಿವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಆ ಮೂಲಕ ಈ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ ಮೂರಕ್ಕೆ ಏರಿದೆ.
ಗದಗನಿಂದ ಹುಬ್ಬಳ್ಳಿಗೆ ಬರುತ್ತಿದ್ದ ಬೊಲೆನೋ ಕಾರಿಗೆ ಉಮಾಶ್ರೀ ಮಾಲಿಕತ್ವದ ಇನ್ನೋವಾ ಕಾರು ಡಿಕ್ಕಿ ಹೊಡೆದಿತ್ತು. ಈ ಘಟನೆಯಲ್ಲಿ ಸ್ಥಳದಲ್ಲಿಯೇ ಡಾ. ಸ್ಮಿತಾ ತಾಯಿ ಶೋಭಾ (ಶಾರದಾ) ಕಟ್ಟಿ ಹಾಗೂ ಇವರ ವಾಹನ ಚಾಲಕ ಸಂದೀಪ ವಿಭೂತಿಮಠ ಮೃತಪಟ್ಟಿದ್ದರು. ಸ್ಮಿತಾ ಸೇರಿದಂತೆ ಇನ್ನೊವಾ ಚಾಲಕ ಶಿವಕುಮಾರ ಬಿಡನಾಳ ಗಾಯಗೊಂಡಿದ್ದರು.
ಇದನ್ನೂ ಓದಿ:ಸಿಎಂ ರಾಜಕೀಯ ಕಾರ್ಯದರ್ಶಿ ಸಂತೋಷ್ ಆತ್ಮಹತ್ಯೆ ಯತ್ನ ಪ್ರಕರಣದ ಸಮಗ್ರ ತನಿಖೆ: ಬೊಮ್ಮಾಯಿ
ತೀವ್ರ ಗಾಯಗೊಂಡು ಪ್ರಜ್ಞಾಹೀನವಾಗಿದ್ದ ಡಾ. ಸ್ಮಿತಾ ಕಟ್ಟಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಫಲಿಸದೇ ಸಾವಿಗೀಡಾಗಿದ್ದಾರೆ. ಆ ಮೂಲಕ ಮಾರುತಿ ಸುಜುಕಿ ಬೊಲೆನೋ ಕಾರಿನಲ್ಲಿದ್ದ ಮೂವರು ಮೃತಪಟ್ಟಂತಾಗಿದೆ. ಶಿವಕುಮಾರ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಜಿ ಸಚಿವೆ ಉಮಾಶ್ರೀ ಅವರು ಅಪಘಾತ ನಡೆದ ಮರುದಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಡಾ. ಸ್ಮಿತಾ ಮತ್ತು ಚಾಲಕ ಶಿವಕುಮಾರ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದರು. ಅಲ್ಲದೆ ಘಟನೆ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿ, ಕಣ್ಣೀರು ಹಾಕಿದ್ದರು.