ಮಣಿಪಾಲ: ಮನೆಯು ಮಂತ್ರಾಲಯ, ದೇವಾಲಯ, ವಿದ್ಯಾ ಲಯ, ಆದರಾಲಯ ಆಗ ಬೇಕಾ ದರೆ ಮಕ್ಕಳಿಗೆ ಉತ್ತಮ ಸಂಸ್ಕಾರ, ಸಂಸ್ಕೃತಿಯನ್ನು ಹಿರಿಯರು ತಿಳಿಸಿಕೊಡಬೇಕಾಗಿದೆ.
ಮನೆಯಲ್ಲಿ ನಿತ್ಯವೂ ಮಕ್ಕಳಿಗೆ ಸದ್ವಿಚಾರಗಳ ಬಗ್ಗೆ ಬೋಧನೆ ನಡೆಯುತ್ತಿರಬೇಕು ಎಂದು ಮಂಗಳೂರು ಅಖೀಲ ಭಾರತೀಯ ಜ್ಞಾನ ಭಾರತಿ ಪ್ರಕಾಶನದ ಅಧ್ಯಕ್ಷ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಅಭಿಪ್ರಾಯಪಟ್ಟರು.
ಶಿವಪಾಡಿ ಶ್ರೀ ಉಮಾಮಹೇಶ್ವರ ದೇಗುಲದಲ್ಲಿ ಸೋಮವಾರ ನಡೆದ ಅತಿರುದ್ರ ಮಹಾಯಾಗದ ಧಾರ್ಮಿಕ ಸಭೆಯಲ್ಲಿ ಅವರು ಉಪನ್ಯಾಸ ನೀಡಿದರು.
ಜಗತ್ತಿಗೆ ಭಾರತ ದೇಶ ಅನೇಕ ವಿಷಯಗಳನ್ನು ಕೊಟ್ಟಿದೆ. ಅದರಲ್ಲಿ ಪ್ರಮುಖವಾದುದು ಕೌಟುಂಬಿಕ ಪದ್ಧತಿ. ಅಂತಹ ಪವಿತ್ರ ಪದ್ಧತಿ ಪ್ರಸ್ತುತ ದಾರಿ ತಪ್ಪುತ್ತಿದೆ. ಮಕ್ಕಳಿಗೆ ಸಂಸ್ಕಾರ, ಸಂಸ್ಕೃತಿಯನ್ನು ಹೇಳಿ ಕೊಡದೇ ಇರುವುದಕ್ಕೆ ಹೀಗಾಗುತ್ತಿದೆ. ಕೌಟುಂಬಿಕ ಪದ್ಧತಿಯಲ್ಲಿ ಎಲ್ಲರಿಗೂ ಒಳಿತನ್ನು ಬಯಸುವುದೇ ಆಗಿದೆ. ಪ್ರತೀ ಮನೆಯಲ್ಲೂ ವಾರಕ್ಕೆ ಒಮ್ಮೆಯಾದರೂ ಎಲ್ಲರೂ ಒಟ್ಟಾಗಿ ಕುಳಿತು ಊಟ, ಭಜನೆ ಮಾಡುವ ಸಂಪ್ರದಾಯ ಬೆಳೆಸಿಕೊಳ್ಳಬೇಕು. ಭೋಜನ ಮಾಡುವಾಗ ಟಿವಿ ನೋಡುವುದು ಭಾರತೀಯ ಸಂಸ್ಕಾರದ ಭಾಗವಲ್ಲ ಎಂದು ಅಭಿ ಪ್ರಾಯ ವ್ಯಕ್ತಪಡಿಸಿದರು.
Related Articles
ಕುಟುಂಬದಲ್ಲಿ ನಿರಂತರ ದೇವರ ಸ್ಮರಣೆ, ಶ್ಲೋಕ ಪಠನ ನಡೆಯುತ್ತಿರಬೇಕು. ಭಾರತೀಯ ಭಾಷೆಗಳ ವಿಸ್ತಾರ ವಿಕಸಿತವಾದುದು. ಅದನ್ನು ಗೌರವಿಸುವ ಸಂಸ್ಕಾರವನ್ನು ಮಕ್ಕಳಿಗೆ ಕಲಿಸಬೇಕು. ಸಂಬಂಧ ವಾಚಕ ಶಬ್ಧಗಳನ್ನು ಬಳಸುವಂತೆ ಮಕ್ಕಳಿಗೆ ತಿಳಿಹೇಳಬೇಕು ಎಂದರು.
ಮಣಿಪಾಲ್ ಸ್ಟೋರ್ನ ಮಾಲಕ ಆತ್ಮಾರಾಮ ನಾಯಕ್ ಧಾರ್ಮಿಕ ಸಭೆ ಉದ್ಘಾಟಿಸಿದರು. ಆರೆಸ್ಸೆಸ್ ಮುಖಂಡ ಶಂಭು ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಮುಂಬಯಿ ಉದ್ಯಮಿ ಬಾಲಕೃಷ್ಣ ಭಂಡಾರಿ, ಕಾಂಗ್ರೆಸ್ ಮುಖಂಡ ಮುರಳಿ ಶೆಟ್ಟಿ, ಉದ್ಯಮಿ ಸೀತಾರಾಮ ಪ್ರಭು, ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮನೋಹರ ಎಸ್. ಕಲ್ಮಾಡಿ, ನಗರಸಭೆ ಸದಸ್ಯೆಯರಾದ ಕಲ್ಪನಾ ಸುಧಾಮ, ವಿಜಯಲಕ್ಷ್ಮೀ, ಸ್ವದೇಶಿ ಔಷಧ ಭಂಡಾರದ ಕೀರ್ತಿ ವಿ. ಪ್ರಭು, ಶ್ರೀರಾಮ ಪ್ರಭು, ಶಕುಂತಲಾ ಶ್ಯಾನುಭಾಗ್, ಮಾಧುರಿ ಪಾಟೀಲ್, ಯಾಗ ಸಮಿತಿ ಅಧ್ಯಕ್ಷ ಶಾಸಕ ಕೆ. ರಘುಪತಿ ಭಟ್, ದೇವಸ್ಥಾನ ಅಭಿವೃದ್ಧಿ ಟ್ರÓr…ನ ಅಧ್ಯಕ್ಷ ಮಹೇಶ್ ಠಾಕೂರ್, ಮೊಕ್ತೇಸರರಾದ ದಿನೇಶ್ ಪ್ರಭು, ಶುಭಕರ ಸಾಮಂತ್, ದೇಗುಲದ ಶಾಶ್ವತ ಟ್ರಸ್ಟಿ ದಿನೇಶ್ ಶ್ರೀಧರ ಸಾಮಂತ್, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕುಕ್ಕೆಹಳ್ಳಿ, ಕೋಶಾಧಿಕಾರಿ ನಿತೇಶ್ ಪಾಟೀಲ್ ಮೊದಲಾದವರು ಉಪಸ್ಥಿತರಿದ್ದರು.
ಸಮಿತಿ ಸಂಚಾಲಕ ಡಾ| ನಾರಾಯಣ ಶೆಣೈ ಸ್ವಾಗತಿಸಿ, ಡಾ| ವತ್ಸಲಾ ನಿರೂಪಿಸಿದರು. ಡಾ| ಆಶಾ ಪಾಟೀಲ್ ವಂದಿಸಿದರು.