ಪಂ|ಭೀಮ್‌ಸೇನ್ ಜೋಷಿಯವರು ಹಾಡಿರುವಂತಹ ಮಾಝೇ ಮಾಹೇ ರಾಪಂಡರೀ ಅಭಂಗ್ ಮಿಶ್ರ ಮಾಂಡ್‌ನಲ್ಲಿ , ಕೃಷ್ಣಾನೀ ಬೇಗನೆ ಬಾರೋ, ಪಾಯೋಜೀ ಮೈನೆ, ಕೊನೆಯಲ್ಲಿ ಭೈರವಿ ನುಡಿಸಿದರು.
ಭೈರವಿಯಲ್ಲಿ ನುಡಿಸಿದ ಸೂಕ್ಷ್ಮಾತಿಸೂಕ್ಷ್ಮ ಭಾವಗಳು ಹೃದ್ಯವಾಗಿದ್ದುವು.
ಈ ಬಾರಿಯ ಪರ್ಯಾಯೋತ್ಸವದಲ್ಲಿ ಸಂಗೀತ ಕ್ಷೇತ್ರದಲ್ಲಿ ಹೆಸರು ಮಾಡಿರುವ ಸಾಧಕರ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಜ.18ರಂದು ಪದ್ಮಶ್ರೀ ಡಾ| ಎನ್.ರಾಜಮ್ , ಮಗಳು ಸಂಗೀತಾ ಶಂಕರ್ ಹಾಗೂ ಮೊಮ್ಮಕ್ಕಳು ರಾಗಿಣಿ ಶಂಕರ್ ಹಾಗೂ ನಂದಿನಿ ಶಂಕರ್ ಅವರ ಹಿಂದುಸ್ಥಾನಿ ವಯೊಲಿನ್ ವಾದನದ ಕಛೇರಿ ನಡೆಯಿತು. ಟಿ.ಎನ್. ಕೃಷ್ಣನ್ ಸಹೋದರಿಯಾಗಿರುವ ಡಾ| ರಾಜಮ್ ಸಂಪೂರ್ಣವಾಗಿ ಹಿಂದುಸ್ಥಾನಿಯಲ್ಲಿ ತೊಡಗಿಸಿಕೊಂಡವರು. ಮಗಳು ಹಾಗೂ ಮೊಮ್ಮಕ್ಕಳಿಗೆ ತನ್ನ ಜ್ಞಾನವನ್ನು ಸಂಪೂರ್ಣವಾಗಿ ಧಾರೆಯೆರೆದದ್ದು ಕಛೇರಿಯಲ್ಲಿ ಶ್ರುತಪಟ್ಟಿತು. ಗಾಯಕೀ ಅಂಗ್‌ಗೆ ಪ್ರಸಿದ್ಧರಾಗಿರುವ ವಾದಕಿ ಬಾಗೇಶ್ರೀ ರಾಗದಿಂದ ವಾದನವನ್ನು ಆರಂಭಿಸಿದರು. ಈ ನಾಲ್ವರೂ ಬೇರೆ ಬೇರೆಯಾಗಿ ಅವರವರ ಕಲ್ಪನೆಗಳಿಗನುಗುಣವಾಗಿ ನುಡಿಸಿ ತಾಳದ ಸಮ್ ಬರುವಾಗ ಒಟ್ಟಿಗೇ ಸೇರಿ ಒಂದೇ ತೆರನಾಗಿ ನುಡಿಸುತ್ತಿದ್ದರು. ಮುಂದೆ ನುಡಿಸಿದ ದೇಶ್‌ನ ನಂತರ ಕಮಾಚ್‌ನಲ್ಲಿ ಗೋಪಿಯರ ಬಗ್ಗೆ ಹೇಳುವಂತಹ ಸೊಗಸಾದ ಠುಮ್ರಿಯನ್ನು ನುಡಿಸಿದರು. ಪಂ|ಭೀಮ್‌ಸೇನ್ ಜೋಷಿಯವರು ಹಾಡಿರುವಂತಹ ಮಾಝೇ ಮಾಹೇ ರಾಪಂಡರೀ ಅಭಂಗ್ ಮಿಶ್ರ ಮಾಂಡ್‌ನಲ್ಲಿ , ಕೃಷ್ಣಾನೀ ಬೇಗನೆ ಬಾರೋ, ಪಾಯೋಜೀ ಮೈನೆ, ಕೊನೆಯಲ್ಲಿ ಭೈರವಿ ನುಡಿಸಿದರು. ಭೈರವಿಯಲ್ಲಿ ನುಡಿಸಿದ ಸೂಕ್ಷ್ಮಾತಿಸೂಕ್ಷ್ಮ ಭಾವಗಳು ಹೃದ್ಯವಾಗಿದ್ದುವು. ತಬಲಾ ಸಾಥಿ ನೀಡಿದ ಸೌರಭ ಕರಿಕರ್‌ಪರಿಣಾಮಕಾರಿ ವಾದನದಿಂದ ಮನ ಗೆದ್ದರು.
ಜ.19ರಂದು ರಂಜನಿ -ಗಾಯತ್ರಿ ಸಹೋದರಿಯರ ಹಾಡುಗಾರಿಕೆ ನಡೆಯಿತು. ನಾಟದ ಸ್ವಾಮಿನಾಥ ಪರಿಪಾಲಯಾಶುಮಾಂ ಕೃತಿಗೆ ವಾಮದೇವ ಪಾರ್ವತಿ ಸುಕುಮಾರದಲ್ಲಿ ಕ್ಷಿಪ್ರಗತಿಯಲ್ಲಿ ಹಾಕಿದ ಸ್ವರಪ್ರಸ್ತಾರದಿಂದ ಮೊದಲ್ಗೊಂಡು ಮುಂದೆ ಶೋಭಿಲ್ಲು ಸಪ್ತಸ್ವರ, ಧರರುಕ್ಸಾಮಾದುಲಲೋ ಎಂಬಲ್ಲಿ ಬಹಳ ಕರಾರುವಾಕ್ಕಾದ ನೆರೆವಲ್ ಮಾಡಿದರು. ಬೃಂದಾವನಿಯ ರಂಗಪುರವಿಹಾರದ ಬಳಿಕ ಪುರಂದರದಾಸರ ಕೀರ್ತನೆ ಆಡಿದನೋ ರಂಗವನ್ನು ಆರಭಿಯ ವಿಸ್ತಾರವಾದ ರಾಗಾಲಾಪನೆ, ಕಲ್ಪನಾ ಸ್ವರಗಳೊಂದಿಗೆ ವಿಸ್ತರಿಸಿದರು. ಆಮೇಲೆ ವನಜಮುಖೀಯರ ಮನದಿಷ್ಟಾರ್ಥವ ಎಂಬ ಕನಕದಾಸರ ಕೃತಿಯನ್ನು ಕಾನಡ ರಾಗದಲ್ಲಿ ಸಂಯೋಜಿಸಿ ಹಾಡಿದರು. ಅನಂತರ ಷಣ್ಮುಖಪ್ರಿಯ ರಾಗದ ಬೇರೆ ಬೇರೆ ರೀತಿಯ ಸಾಧ್ಯತೆಗಳನ್ನು ತೋರಿಸುವಂತಹ ಉತ್ಕೃಷ್ಟ ಮಟ್ಟದ ರಾಗಾಲಾಪನೆಯನ್ನು ಮಾಡಿ ರಾಗಂ ತಾನಂ ಪಲ್ಲವಿಯನ್ನು ನಿರೂಪಿಸಿ ಭೇಷ್ ಎನಿಸಿಕೊಂಡರು. ಭೈರವಿ ರಾಗದ ಮುದ್ರೆಯನ್ನೊತ್ತಿಕೊಡಿರುವ “ಓಡಿ ಬಾರಯ್ನಾ’ವನ್ನು ಪಲ್ಲವಿಗಾಗಿ ಬಳಸಿಕೊಂಡು, ಖಂಡ ಜಾತಿ ತ್ರಿಪುಟ ತಾಳದಲ್ಲಿ ಪ್ರಸ್ತುತಿ ಪಡಿಸಿದರು. ಬೌಳಿ ಹಾಗೂ ಮಾಂಡ್ ರಾಗದಲ್ಲಿ ರಾಗಮಾಲಿಕಾ ಸ್ವರಗಳನ್ನು ಹಾಡಿದರು. ಪತ್ರಿ ಸತೀಶ್ ಕುಮಾರ್ (ಮೃದಂಗ) ಹಾಗೂ ಉಳ್ಳೂರು ಗಿರಿಧರ ಉಡುಪ (ಘಟಂ) ಅವರ ಭರ್ಜರಿ ತನಿ ಆವರ್ತನ ನಡೆಯಿತು. ನಾಥಹರೇ (ಮಧುವಂತಿ) ಉಗಾಭೋಗಗಳೊಂದಿಗೆ ಆಡಿಸಿದಳೆಶೋದ, ಮರಾಠಿ ಅಭಂಗ್‌ನೊಂದಿಗೆ ಕಛೇರಿ ಮುಕ್ತಾಯವಾಯಿತು. ಈ ಕಛೇರಿಗೆ ಎಚ್. ಎಮ್. ಸ್ಮಿತಾ ಒಳ್ಳೆಯ ವಯೊಲಿನ್ ಪಕ್ಕವಾದ್ಯವನ್ನು ನೀಡಿದರು.
ಜ.20ರಂದು ಮಹೇಶ್ ಕಾಳೆಯವರ ಹಿಂದುಸ್ಥಾನಿ ಗಾಯನವಿತ್ತು. ಮಾರೋ ಬೇಹಾಗ್ ರಾಗದ ಸೊಬಗನ್ನು ಕೇಳಿಸುವುದರೊಂದಿಗೆ ಗಾಯನ ಶುರುವಾಯಿತು. ಅಲ್ಲಲ್ಲಿ ಕೇಳುಗರೊಂದಿಗೆ ತನ್ನ ಗಾಯನ ಸರಿಯಾಯಿತೇ? ಕೇಳುಗರು ಖುಷಿ ಪಡುತ್ತಿದ್ದಾರಾ? ಮುಂತಾದ ಪ್ರಶ್ನೆಗಳನ್ನು ಕೇಳುತ್ತಾ ಅವರಿಂದ ಉತ್ತರವನ್ನು ನಿರೀಕ್ಷಿಸುತ್ತಾ ಕೇಳುಗರ ಭಾವನೆಗಳಿಗೆ ಸ್ಪಂದಿಸುತ್ತಾ ಅವರ ಜೊತೆಗೆ ಆನಂದವನ್ನು ಸವಿದ ಒಂದು ವಿಶಿಷ್ಟ ಗಾಯನ ಇದಾಗಿತ್ತು. ಮುಂದೆ ಅವರೇ ಹೇಳಿರುವಂತೆ “Garland on the feet of the god’ ಒಂದು ಹಾರವಾಗಿ ರಾಗ ಮಾಲಿಕೆಯನ್ನು ಹಾಡಿದರು. ಈ ಹಾರ ಬಹಳ ಉದ್ದವಾಗಿಯೇ ಇದ್ದು ಇದರಲ್ಲಿ ಸೋಹನಿ. ಭೂಪ್, ಛಾಯಾನಟ್, ಬಿಲಾವಲ್, ಶಂಕರ, ದೇಶ್, ತಿಲಕ್‌ಕಾಮೋದ್, ಬಸಂತ್, ಶ್ರೀ, ಪೂರಿಯಾ, ಭೈರವ್, ಗುರ್ಜರಿ, ಸಾರಂಗ, ಖರಹರಪ್ರಿಯ ಹೀಗೆ ಅನೇಕ ರಾಗಗಳ ಬಳಕೆ ಇತ್ತು. ಒಂದೊಂದು ರಾಗಗಳನ್ನೂ ವಿಸ್ತರಿಸಿಕೊಂಡೇ ಮುಂದಿನ ರಾಗಕ್ಕೆ ಹೋಗುತ್ತಿ¤ದ್ದುದ್ದು ವಿಶೇಷ. ಬಳಿಕ ಯಾರೂ ನಿರೀಕ್ಷಿಸದ ಪರಿಯಲ್ಲಿ ಹಂಸಧ್ವನಿಯ ವಾತಾಪಿಗಣಪತಿಂಭಜೇಯನ್ನು ಕ್ಷಿಪ್ರವಾಗಿ ಹಾಡಿದರು.
ಇದು ತಬ್ಲಾ, ಫಕ್ವಾಜ್ ಹಾಗೂ ತಾಳಗಳೊಂದಿಗೆ ಭಜನೆಯಂತೆ ಧ್ವನಿಸಿತು. ಕೆಲ ಭಜನ್ ಹಾಗೂ ಅಭಂಗಗಳಿಂದ ರಂಜಿಸಿ, ಕೊನೆಯಲ್ಲಿ ಕಳಲಾ ವಿಠಲಾ ಕಾನಡಾನಾಥಾ ಎಂಬ ಹಾಡಿನಲ್ಲಿ ಸಭಿಕರನ್ನು ವಿಠಲಾ ವಿಠಲಾ ಎಂದು ಹಾಡುವಂತೆ ಮಾಡಿದರು. ಹಾರ್ಮೋನಿಯಂನಲ್ಲಿ ಸತೀಶ್ ಕೊಳ್ಳಿ, ತಬಲಾದಲ್ಲಿ ಜಗದೀಶ್ ಕುರ್ತುಕೋಟಿ, ಪಕ್ವಾಜ್‌ನಲ್ಲಿ ಸತ್ಯಮೂರ್ತಿ, ತಾಳದಲ್ಲಿ ರಾಜೇಶ್ ಪಡಿಯಾರ್ ಸಹಕರಿಸಿದರು.
ವಿದಾಲಕ್ಷ್ಮೀ ಕಡಿಯಾಳಿ