ನವದೆಹಲಿ: ಭಾರತದ ಅತಿದೊಡ್ಡ ಸಿಮೆಂಟ್ ಉತ್ಪಾದಕ ಕಂಪನಿ ಅಲ್ಟ್ರಾಟೆಕ್ ಸಿಮೆಂಟ್, ರಷ್ಯಾದಿಂದ ಕಲ್ಲಿದ್ದಲನ್ನು ಆಮದು ಮಾಡಿಕೊಳ್ಳುತ್ತಿದೆ. ವಿಶೇಷವೆಂದರೆ, ಈ ಆಮದಿಗೆ ಕಂಪನಿಯು ಚೀನಾದ ಯುವಾನ್ ಕರೆನ್ಸಿಯಲ್ಲಿ ಹಣ ಪಾವತಿಸುತ್ತಿದೆ. ಈ ರೀತಿಯ ಪಾವತಿ ವ್ಯವಸ್ಥೆಯು ಮುಂದಿನ ದಿನಗಳಲ್ಲಿ ಹೆಚ್ಚು ಚಾಲ್ತಿಗೆ ಬರುವ ಸಾಧ್ಯತೆಯಿದೆ ಎಂದು ಭಾರತದ ಕಸ್ಟಮ್ಸ್ ದಾಖಲೆಗಳನ್ನು ಉಲ್ಲೇಖೀಸಿ ರಾಯಿಟರ್ಸ್ ವರದಿ ಮಾಡಿದೆ.
ಅಲ್ಟ್ರಾಟೆಕ್ ಸಿಮೆಂಟ್ ಕಂಪನಿಯು ರಷ್ಯಾದ ಎಸ್‌ಯುಇಕೆ ಕಂಪನಿಯಿಂದ 1.57 ಲಕ್ಷ ಟನ್ ಕಲ್ಲಿದ್ದಲನ್ನು ಆಮದು ಮಾಡಿಕೊಳ್ಳುತ್ತಿದೆ. ರಷ್ಯಾದ ಬಂದರಿನಿಂದ ಎಂವಿ ಮಂಗಾಸ್ ಹಡಗಿನ ಮೂಲಕ ಅದನ್ನು ತರಲಾಗುತ್ತಿದೆ. ಅದಕ್ಕೆ ಸಂಬಂಧಿಸಿದ ರಶೀದಿಯಲ್ಲಿ ಈ ಸರಕಿನ ಒಟ್ಟು ಮೌಲ್ಯ 17,26,52,900 ಯುವಾನ್(25.81 ದಶಲಕ್ಷ ಡಾಲರ್) ಎಂದು ಉಲ್ಲೇಖೀಸಲಾಗಿದೆ.
ಯುವಾನ್ ಬಳಕೆ ಏಕೆ? :
ಕೇವಲ ಅಲ್ಟ್ರಾಟೆಕ್ ಮಾತ್ರವಲ್ಲದೇ ಇತರೆ ಹಲವು ಕಂಪನಿಗಳೂ ಯುವಾನ್ ಮೂಲಕವೇ ರಷ್ಯಾ ಕಲ್ಲಿದ್ದಲನ್ನು ಆರ್ಡರ್ ಮಾಡಿವೆ ಎಂದು ಮೂಲಗಳು ತಿಳಿಸಿವೆ. ಪಾವತಿಗೆ ಚೀನಾದ ಕರೆನ್ಸಿಯನ್ನು ಬಳಸುವುದರಿಂದ ರಷ್ಯಾದ ಮೇಲೆ ಪಾಶ್ಚಿಮಾತ್ಯ ದೇಶಗಳು ಹೇರಿರುವ ಆರ್ಥಿಕ ನಿರ್ಬಂಧದಿಂದ ರಷ್ಯಾವನ್ನು ಉಳಿಸಲು ಸಹಾಯವಾಗುತ್ತದೆ. ಅಲ್ಲದೇ, ಚೀನಾದ ಕರೆನ್ಸಿಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತಷ್ಟು ಪ್ರಬಲಗೊಳ್ಳಲು ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿ ಅಮೆರಿಕನ್ ಡಾಲರ್‌ನ ಪ್ರಭಾವ ತಗ್ಗಿಸುವುದು ಕೂಡ ಇದರ ಉದ್ದೇಶವಾಗಿದೆ ಎಂದು ಹೇಳಲಾಗಿದೆ.
ಇದೇ ವೇಳೆ, ಕಂಪನಿಗಳು ರಷ್ಯಾಗೆ ಚೀನಾದ ಕರೆನ್ಸಿ ಮೂಲಕ ಪಾವತಿಸುತ್ತಿರುವುದು ಕೇಂದ್ರ ಸರ್ಕಾರಕ್ಕೂ ಗೊತ್ತಿರುವ ವಿಚಾರ ಎಂದು ಸರ್ಕಾರದ ಅಧಿಕಾರಿಯೊಬ್ಬರು ಹೇಳಿದ್ದಾರೆ.