ಉಳ್ಳಾಲ: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಂತಾರಾಷ್ಟ್ರೀಯ ಮಟ್ಟದ ಅಂಗವಿಕಲ ಕ್ರೀಡಾಪಟು ಡಾ| ಮಾಲತಿ ಹೊಳ್ಳ ಮತ್ತು ಸಾಹಿತಿ ಡಾ| ಪ್ರಮೀಳಾ ಮಾಧವ್ ಅವರಿಗೆ 2023-2024ನೇ ಸಾಲಿನ ಉಳ್ಳಾಲ ವೀರರಾಣಿ ಅಬ್ಬಕ್ಕ ಪ್ರಶಸ್ತಿಯನ್ನು ಘೋಷಿಸಲಾಗಿದೆ.
ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಸ್ವಾಗತಾಧ್ಯಕ್ಷ ಹಾಗೂ ಮಾಜಿ ಶಾಸಕ ಕೆ. ಜಯರಾಮ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯ ಆಶ್ರಯದಲ್ಲಿ 1997ರಲ್ಲಿ “ವೀರರಾಣಿ ಅಬ್ಬಕ್ಕ ಉತ್ಸವ’ ಆರಂಭವಾಗಿದ್ದು, ಪ್ರತೀ ವರ್ಷವೂ ಉತ್ಸವದಲ್ಲಿ ಇಬ್ಬರು ಮಹಿಳಾ ಸಾಧಕರನ್ನು ಗುರುತಿಸಿ ವೀರರಾಣಿ ಅಬ್ಬಕ್ಕ ಪ್ರಶಸ್ತಿ ಹಾಗೂ ಪುರಸ್ಕಾರ ಪ್ರದಾನಿಸಲಾಗುತ್ತಿದೆ ಎಂದರು.
ಉತ್ಸವ ಸಮಿತಿಯ ಅಧ್ಯಕ್ಷ ದಿನಕರ ಉಳ್ಳಾಲ ಮಾತನಾಡಿ, ಕಳೆದ ವರ್ಷದವರೆಗೆ ನಿರಂತರವಾಗಿ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದು, ಇತ್ತೀಚೆಗೆ ನಮ್ಮನಗಲಿದ ಪ್ರೊ| ಅಮೃತ ಸೋಮೇಶ್ವರ ಸ್ಮರಣಾರ್ಥ ವಿಶೇಷ ಕಾರ್ಯಕ್ರಮಗಳು ಫೆ. 24ರಂದು ಉಳ್ಳಾಲ ನಗರಸಭೆಯ ಆಧೀನದಲ್ಲಿರುವ ಮಹಾತ್ಮಾಗಾಂಧಿ ರಂಗಮಂದಿರದಲ್ಲಿ ನಡೆಯುವ ಅಬ್ಬಕ್ಕ ಉತ್ಸವದಲ್ಲಿ ಆಯೋಜಿಸಲಾಗಿದೆ ಎಂದರು.
ಉತ್ಸವ ಸಮಿತಿಯ ಪದಾ ಕಾರಿಗಳಾದ ಜಯರಾಮ ಶೆಟ್ಟಿ, ಧನಲಕ್ಷ್ಮೀ ಗಟ್ಟಿ, ಸದಾನಂದ ಬಂಗೇರ, ಆನಂದ ಅಸೈಗೋಳಿ, ದೇವಕಿ ಆರ್. ಉಳ್ಳಾಲ, ಕೆ.ಎಂ.ಕೆ ಮಂಜನಾಡಿ, ಯು.ಪಿ. ಆಲಿಯಬ್ಬ ಪತ್ರಿಕಾಗೋಷ್ಠಿಯಲ್ಲಿದ್ದರು.