ಉಳ್ಳಾಲ: ಮೊಗವೀರ ಸಂಘದ ಸಹಕಾರದೊಂದಿಗೆ ಉಳ್ಳಾಲ ಶ್ರೀ ವಿಠೋಭ ರುಕ್ಮಾಯಿ ಭಜನಾ ಮಂದಿರದಲ್ಲಿ 86ನೇ ವರ್ಷದ ಸಮುದ್ರಪೂಜೆ ಗುರುವಾರ ಬೆಳಗ್ಗಿನಿಂದ ಸಂಜೆ ತನಕ ಭಜನಾ ಸಂಕೀರ್ತನೆಯೊಂದಿಗೆ ಉಳ್ಳಾಲ ಮೊಗವೀರಪಟ್ನದ ಸಮುದ್ರತಟದಲ್ಲಿ ಜರುಗಿತು.
ಬೆಳಗ್ಗೆ ಸೂರ್ಯೋದಯದಿಂದ ಮೊದಲ್ಗೊಂಡು ಸೂರ್ಯಾಸ್ತ ತನಕ ಭಜನೆ ಸಂಕೀರ್ತನೆ ನಡೆಯಿತು.
ಸಮುದ್ರರಾಜನಿಗೆ ಕಬ್ಬು, ಹಾಲು, ಹೂ, ಹಣ್ಣು, ಫಲವಸ್ತು, ಸಿಹಿಯಾಳ ಹಾಗೂ ಬಾಗಿನ ಅತ್ಯಂತ ಭಕ್ತಿಪೂರ್ವಕವಾಗಿ ಸಮರ್ಪಿಸಲಾಯಿತು.
ಕಾರ್ಯಕ್ರಮದಲ್ಲಿ ಉಳ್ಳಾಲ ಶ್ರೀ ವ್ಯಾಘ್ರ ಚಾಮುಂಡೇಶ್ವರೀ ದೇವಸ್ಥಾನದ ಮಧ್ಯಸ್ಥ ಗಂಗಾಧರ ಸುವರ್ಣ ಮತ್ಸ್ಯ ಸಂಪತ್ತು ದೊರಕುವಂತೆ ಹಾಗೂ ಮೊಗವೀರ ಸಮುದಾಯ ಬಾಂಧವರು ಆರ್ಥಿಕವಾಗಿ ಸದೃಢರಾಗುವಂತೆ ಸಮುದ್ರರಾಜ ಅನುಗ್ರಹಿಸಲಿ ಎಂದು ಪ್ರಾರ್ಥಿಸಿದರು.
ಉಳ್ಳಾಲ ಮೊಗವೀರ ಸಂಘದ ಅಧ್ಯಕ್ಷ ಭರತ್ ಕುಮಾರ್ ಉಳ್ಳಾಲ ಸಮುದ್ರರಾಜನ ವೈಶಿಷ್ಠ್ಯದ ಕುರಿತು ವರ್ಣಿಸಿದರು.
ಭಜನಾ ಮಂದಿರದ ಪ್ರಧಾನ ಅರ್ಚಕ ಯಾದವ ಬಂಗೇರ ಹಾಗೂ ತಾರಾನಾಥ ಸುವರ್ಣ, ಮಂದಿರದ ಅಧ್ಯಕ್ಷ ಲೋಕನಾಥ ಪುತ್ರನ್, ಉಪಾಧ್ಯಕ್ಷ ಶಾಂತಾರಾಮ್ ಚಂದನ್, ಗೌರವಾಧ್ಯಕ್ಷ ಗೋವರ್ಧನ್ ಸಾಲಿಯಾನ್, ಕಾರ್ಯದರ್ಶಿ ವಿನೋದ್ ಬಂಗೇರ, ಕೋಶಾಧಿಕಾರಿ ಶಮಂತ್ ಬಂಗೇರ, ಮೊಗವೀರ ಸಮಾಜದ ಗುರಿಕಾರ ವೃಂದ, ಮೊಗವೀರ ಸಂಘದ ಮಾಜಿ ಅಧ್ಯಕ್ಷ ಸದಾನಂದ ಬಂಗೇರ ಧರ್ಮ ರಕ್ಷಣಾ ಮೊಗವೀರ ವೇದಿಕೆ ಅಧ್ಯಕ್ಷ ಮನೋಜ್ ಸಾಲ್ಯಾನ್, ಹಾಗೂ ಮೊಗವೀರ ಸಂಘದ ಪದಾಧಿಕಾರಿಗಳು, ಸ್ಥಳೀಯ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಅಪಾರ ಸಂಖ್ಯೆಯಲ್ಲಿ ಭಕ್ತ ವೃಂದ ಪಾಲ್ಗೊಂಡಿದ್ದರು.
ಪ್ರಶಾಂತ್ ಬಿ. ಉಳ್ಳಾಲ್ ಕಾರ್ಯಕ್ರಮ ನಿರೂಪಿಸಿದರು.