Advertisement
ಉಳ್ಳಾಲದ ರೆಸಾರ್ಟ್ನ ಈಜು ಕೊಳದಲ್ಲಿ ಮುಳುಗುತ್ತಿದ್ದ ಸ್ನೇಹಿತೆಯರನ್ನು ಕಾಪಾಡಲು ಹೋಗಿ ಮಗಳು ಪಾರ್ವತಿಯ ತಾನೂ ಮೃತಪಟ್ಟ ಸುದ್ದಿ ಕೇಳಿ ಮಂಜುಳಾ ಅವರಿಗೆ ಸಿಡಿಲು ಬಡಿದಂತೆ ಆಗಿದೆ. ಪುತ್ರಿಯ ಸಾವಿನ ಸುದ್ದಿ ಕೇಳಿದ ಮಂಜುಳಾ ಅವರ ಪತಿ, ಪತ್ರಿಕಾ ವಿತರಕರಾದ ಶ್ರೀನಿವಾಸ್ ತತ್ಕ್ಷಣವೇ ಕೆಲವು ಸಂಬಂಧಿಕರೊಂದಿಗೆ ಮಂಗಳೂರಿನತ್ತ ತೆರಳಿದರೆ, ಮಂಜುಳಾ ಅವರು ಪುತ್ರಿಯ ಶವದ ಆಗಮನಕ್ಕಾಗಿ ಮನೆಯ ಬಾಗಿಲ ಬಳಿ ರೋದಿಸುತ್ತ ಕುಳಿತಿದ್ದರು. ಸಾಂತ್ವನ ಹೇಳಲು ಬಂದವರಿಗೆ ಕೂಡ ದುಃಖ ತಡೆಯಲಾಗುತ್ತಿರಲಿಲ್ಲ.
ಪ್ರವಾಸಕ್ಕೆ ತೆರಳಿದ್ದ ಪಾರ್ವತಿ, ನಿಶಿತಾ ಮತ್ತು ಕೀರ್ತನಾ ಬಾಲ್ಯದಿಂದಲೂ ಸ್ನೇಹಿತೆಯರು. ಎಲ್ಲರೂ ಮೈಸೂರಿನ ಮೇಟಗಳ್ಳಿಯಲ್ಲಿರುವ ಜಿಎಸ್ಎಸ್ಎಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮೂರನೇ ವರ್ಷದಲ್ಲಿ ಬಿಇ ವ್ಯಾಸಂಗ ಮಾಡುತ್ತಿದ್ದವರು. ವಾರಾಂತ್ಯದ ರಜೆ ಸಿಕ್ಕಿದ್ದರಿಂದ ಎರಡು ದಿನಗಳ ಕಾಲ ಮಂಗಳೂರಿಗೆ ಪ್ರವಾಸ ಕೈಗೊಂಡಿದ್ದ ಮೂವರು ಶುಕ್ರವಾರ ರಾತ್ರಿ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದರು. ಶನಿವಾರ ರಾತ್ರಿ ರೆಸಾರ್ಟ್ಲ್ಲಿದ್ದ ವೇಳೆ ಪಾರ್ವತಿ ಅವರು ತಮ್ಮ ತಾಯಿ ಮಂಜುಳಾ ಅವರಿಗೆ ವೀಡಿಯೋ ಕರೆ ಮಾಡಿದ್ದು, ರೆಸಾರ್ಟ್ನಲ್ಲಿ ಇರುವುದನ್ನು ತೋರಿಸಿದ್ದಾರೆ. ಮತ್ತೆ ರವಿವಾರ ಬೆಳಗ್ಗೆ ಪಾರ್ವತಿಯವರು ತಂದೆ ಶ್ರೀನಿವಾಸ್ ಅವರಿಗೆ ಕರೆ ಮಾಡಿ 11 ಗಂಟೆಯ ಬಳಿಕ ರೆಸಾರ್ಟ್ನಿಂದ ಹೊರಡುವುದಾಗಿ ಹೇಳಿದ್ದರು. ಇದಾಗಿ ಸ್ವಲ್ಪವೇ ಸಮಯದಲ್ಲಿ ಆಕೆಯ ಸಾವಿನ ಸುದ್ದಿ ಬಂದಿತ್ತು.
Related Articles
Advertisement