Advertisement

ಉಳ್ಳಾಲ: ಜನರ ಉಪಯೋಗಕ್ಕೆ ಇಲ್ಲದ ಕೆಎಸ್ಸಾರ್ಟಿಸಿ ಬಸ್‌ ಸಂಚಾರ!

01:43 PM Jun 26, 2024 | Team Udayavani |

ಉಳ್ಳಾಲ: ಉಳ್ಳಾಲ ತಾಲೂಕಿನ ಒಳಪ್ರದೇಶಗಳಿಗೆ ಬಸ್ಸುಗಳೇ ವಿರಳ. ಇದರ ನಡುವೆ ಹಲವು ವರ್ಷಗಳ ಹೋರಾಟದ ಬಳಿಕ ಬಂದ ಕೆಎಸ್‌ಆರ್‌ಟಿಸಿ ಬಸ್‌ ಊಟಕ್ಕಿಲ್ಲದ ಉಪ್ಪಿನಕಾಯಿಯಾಗಿದೆ ಎನ್ನುವುದು ಇಲ್ಲಿನ ಜನರ ಅಳಲು. ಇದು ಪಜೀರು ಗ್ರಾಮದ ತಂಜರೆಯಿಂದ ನ್ಯೂಪಡ್ಪು ಮಾರ್ಗವಾಗಿ ಎಲಿಯಾರ್‌ ಪದವು ಸಂಪರ್ಕಿಸುವ ಸರಕಾರಿ ಬಸ್ಸಿನ ಕಥೆ. ಬೆಳಗ್ಗಿನ ಟ್ರಿಪ್‌ ನಿಗದಿತ ಸಮಯಕ್ಕಿಂತ ಒಂದು ಗಂಟೆ ತಡವಾಗಿ ಬರುತ್ತದೆ. ಖಾಸಗಿ ಬಸ್‌ನ ಹಿಂದೆಯೇ ಹೋಗುತ್ತದೆ!

Advertisement

ತಂಜರೆಯಿಂದ -ಎಲಿಯಾರ್‌ – ಮದಕ ಮಾರ್ಗವಾಗಿ ಮಂಗಳೂರಿನ ಲಾಲ್‌ಭಾಗ್‌ ಕಡೆ ಸಂಚರಿಸುವ ಈ ಬಸ್‌ನ 8.10ಕ್ಕೆ ತಂಜರೆ ಯಿಂದ ಹೊರಡಬೇಕು. ಆದರೆ ಅದು ಬರುವುದೇ 9 ಗಂಟೆಯ ನಂತರ. ಹೀಗಾಗಿ ಇದರಲ್ಲಿ ಬರಬೇಕಾದವರೆಲ್ಲ ಒಂದೂವರೆ
ಕಿ.ಮೀ. ನಡೆದುಕೊಂಡು ಎಲಿಯಾರ್‌ ಪದವಿನ ಬಸ್‌ಗೆ ತಲುಪಿ ಬಳಿಕ ಮಂಗಳೂರಿಗೆ ಹೋಗಬೇಕು. ಈ ಬಸ್‌ ಸಮಯಕ್ಕೆ
ಸರಿಯಾಗಿ ಓಡಾಡುವಂತಾಗಬೇಕು ಎನ್ನುತ್ತಾರೆ ಮಿಷನ್‌ ಕಂಪೌಂಡು ಬಳಿ ನಿವಾಸಿ ಭರತ್‌ ಗಟ್ಟಿ ಕಟ್ಟಪುಣಿ.

ಬೆಳಗ್ಗೆ, ರಾತ್ರಿ ಸಂಚಾರ ಸ್ಥಗಿತ
ತೊಕ್ಕೊಟ್ಟು – ಕುತ್ತಾರು ದೇರಳಕಟ್ಟೆ ಮಾರ್ಗವಾಗಿ ಹರೇಕಳ, ಪಾವೂರು, ಕೊಣಾಜೆ, ಅಂಬ್ಲಿಮೊಗರು ಗ್ರಾಮಗಳನ್ನು ಸಂಪರ್ಕಿಸುವ ಹೆಚ್ಚಿನ ಬಸ್‌ಗಳಲ್ಲಿ ಬೆಳಗ್ಗಿನ ಮತ್ತು ಸಂಜೆ ಕಾಲಿಡಲು ಸಾಧ್ಯವೇ ಇಲ್ಲ. ಇಷ್ಟಾದರೂ ಒಳಪ್ರದೇಶಗಳನ್ನು ಸಂಪರ್ಕಿಸುವ ಬಸ್‌ಗಳು ಬೆಳಗ್ಗಿನ ಪಸ್ಟ್‌ ಟ್ರಿಪ್‌ ಮತ್ತು ರಾತ್ರಿಯ ಲಾಸ್ಟ್‌ ಟ್ರಿಪ್‌ ಕಟ್‌ ಮಾಡುತ್ತವೆ. ಹೀಗಾಗಿ ತಡರಾತ್ರಿ 3 ನಾಲ್ಕು ಕಿ.ಮೀ. ನಡೆದುಕೊಂಡೇ ಮನೆಗೆ ತಲುಪುವ ಸ್ಥಿತಿ ಇಲ್ಲಿನದು.

ರಸ್ತೆ ಚೆನ್ನಾಗಿದೆ ಆದರೆ, ಬಸ್‌ ಇಲ್ಲ!
ಕೊಣಾಜೆ ಗ್ರಾಮ ಮತ್ತು ಮಂಜನಾಡಿ ಗ್ರಾಮವನ್ನು ಸಂಪರ್ಕಿಸುವ ಅಸೈಗೋಳಿಯಿಂದ ಕೆಎಸ್‌ಆರ್‌ಪಿ ಪೊಲೀಸ್‌ ಕ್ವಾರ್ಟರ್ಸ್‌ನ ಎದುರು ಭಾಗವಾಗಿ ಪಟ್ಟೋರಿ, ನಡುಪದವು, ಪಿ.ಎ.ಕಾಲೇಜು, ಮೋಂಟುಗೋಳಿ ಮಾರ್ಗವಾಗಿ ಮಂಜನಾಡಿ ಜಂಕ್ಷನ್‌ ಮತ್ತು ಮುಡಿಪು ಜಂಕ್ಷನ್‌ ಸಂಪರ್ಕಿಸುವ ಸುಮಾರು ಐದು ಕಿ.ಮೀ ರಸ್ತೆ ನಿರ್ಮಾಣವಾಗಿದ್ದರೂ ಈ ರೂಟ್‌ಗೆ ಒಂದೂ ಬಸ್‌ ಇಲ್ಲ. ಅವರೆಲ್ಲ ನಡೆದುಕೊಂಡು ಇಲ್ಲವೇ ದುಪ್ಪಟ್ಟು ಹಣ ನೀಡಿ ಸಂಚರಿಸಬೇಕು.

*ವಸಂತ ಎನ್.ಕೊಣಾಜೆ

Advertisement
Advertisement

Udayavani is now on Telegram. Click here to join our channel and stay updated with the latest news.

Next