ಉಳ್ಳಾಲ: ಸ್ಥಳೀಯ ಶಾಸಕರು, ಹರೇಕಳ ಗ್ರಾ. ಪಂ.ನ ಆಡಳಿತ ವರ್ಗ, ಗ್ರಾಮಸ್ಥರು ಉತ್ತಮ ಸಹಕಾರ ನೀಡಿದ್ದರಿಂದ ಹರೇಕಳದಲ್ಲಿ ಗುಣ ಮಟ್ಟದ ಬ್ರಿಡ್ಜ್ ನಿರ್ಮಾಣ ಸಾಧ್ಯವಾಗಿದೆ. ಇಲ್ಲಿನ ಜನರ ಪ್ರೀತಿಯನ್ನು ಗಮನಿಸಿ ಸರ್ವ ವೈದ್ಯಕೀಯ ಸಲಕರಣೆಗಳನ್ನೊಳಗೊಂಡ ಹರೇಕಳ ಆರೋಗ್ಯ ಕೇಂದ್ರವನ್ನು ನಿರ್ಮಿಸಿ ಹಸ್ತಾಂತರ ಮಾಡುತ್ತಿದ್ದೇನೆ ಎಂದು ಉಡುಪಿ ಅಂಬಲಪಾಡಿಯ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ಡಾ| ಜಿ. ಶಂಕರ್ ಹೇಳಿದ್ದಾರೆ.
ಹರೇಕಳ ಗ್ರಾಮದಲ್ಲಿ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ವತಿಯಿಂದ 2.50 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಹರೇಕಳ ಆರೋಗ್ಯ ಕೇಂದ್ರದ ಉದ್ಘಾಟನೆ ಮತ್ತು ಕೇಂದ್ರದ ಕೀಲಿಕೈಯನ್ನು ಶನಿವಾರ ಗ್ರಾ. ಪಂ.ಗೆ ಹಸ್ತಾಂತರಿಸಿ ಅವರು ಮಾತನಾಡಿದರು. ಈ ಭಾಗದಲ್ಲಿ ಕಷ್ಟದಲ್ಲಿರುವವರಿಗೆ, ಬಡವರಿಗೆ ಅನುಕೂಲವಾಗುವ ದೃಷ್ಟಿಯಿಂದ ಆರೋಗ್ಯ ಕೇಂದ್ರ ನಿರ್ಮಾಣವಾಗಿದೆ. ಶಾಸಕರು ಸೇರಿದಂತೆ ಎಲ್ಲರ ಸಹಕಾರದೊಂದಿಗೆ ಈ ಕೇಂದ್ರ ನಿರ್ಮಾಣಗೊಂಡಿದೆ ಎಂದರು.
ಯೇನಪೊಯ ವಿ.ವಿ.ಯ ಕುಲಾಧಿಪತಿ ಯೇನಪೊಯ ಅಬ್ದುಲ್ಲಾ ಕುಂಞಿ ಮಾತನಾಡಿ, ಜಿ. ಶಂಕರ್ ಅವರು ಹಲವಾರು ಸಮಾಜ ಮುಖೀ ಕಾರ್ಯಕ್ರಮಗಳಿಗೆ ಕೊಡುಗೆ ನೀಡಿದವರು. ಅವರು ಫ್ಯಾಮಿಲಿ ಟ್ರಸ್ಟ್ ಮೂಲಕ ಜಾತಿಮತ ಬೇಧವಿಲ್ಲದೆ ಸಮಾಜಸೇವೆ ಮಾಡುತ್ತಿದ್ದಾರೆ. ಸಾಮರಸ್ಯ ಸಮಾಜ ನಿರ್ಮಾಣಕ್ಕೆ ಅವರ ಈ ಕೊಡುಗೆ ಪ್ರೇರಣೆಯಾಗಲಿ ಎಂದರು.
ಶಾಸಕ ಯು.ಟಿ. ಖಾದರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಆರೋಗ್ಯ ಕೇಂದ್ರ ಮಾದರಿ ಆಸ್ಪತ್ರೆಯಾಗಿ ರೂಪುಗೊಳ್ಳಲಿದೆ ಎಂದರು. ಜಿ. ಶಂಕರ್ ಹಾಗೂ ಯೇನಪೊಯ ಅಬ್ದುಲ್ಲಾ ಕುಂಞಿ ಅವರನ್ನು ಸಮ್ಮಾನಿಸಲಾಯಿತು. ಪಂ. ಅಧ್ಯಕ್ಷ ಬದ್ರುದ್ದೀನ್, ಕಟ್ಟಡ ಉಸ್ತುವಾರಿ ವಹಿಸಿದ ಎನ್‌ಐಟಿಕೆ ಸುರತ್ಕಲ್‌ನ ಪ್ರೊ| ಸುಭಾಷ್ ಇವರನ್ನು ಜಿ. ಶಂಕರ್ ಗೌರವಿಸಿದರು.
ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ, ಉಪಾಧ್ಯಕ್ಷೆ ಕಲ್ಯಾಣಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ| ರಾಜೇಶ್ ಬಿ.ವಿ., ಉಡುಪಿ ಜಿಲ್ಲಾ ಆರೋಗ್ಯಾಧಿಕಾರಿ ಡಾ| ನಾಗಭೂಷಣ ಉಡುಪ, ಪ್ರಮುಖರಾದ ರಾಮದಾಸ್ ಪೂಂಜ, ಎಚ್. ಶಾಲಿ, ಎಡ್ವರ್ಡ್ ಮಥಾಯಿಸ್, ರೂಪರಾಜ್ ರೈ ಮುದಲೆಮಾರ್, ರಫೀಕ್ ಹರೇಕಳ, ಬಶೀರ್, ಸುಧಾಕರ ಗಟ್ಟಿ, ಬಶೀರ್ ಉಂಬುದ, ತಾರಾಕ್ಷಿ ಉಪಸ್ಥಿತರಿದ್ದರು.
ಹರೇಕಳ ಗ್ರಾ. ಪಂ. ಅಧ್ಯಕ್ಷ ಬದ್ರುದ್ದೀನ್ ಹರೇಕಳ ಸ್ವಾಗತಿಸಿದರು. ಮಹಮ್ಮದ್ ಮುಸ್ತಫಾ ವಂದಿಸಿದರು. ದೈಹಿಕ ಶಿಕ್ಷಕ ತ್ಯಾಗಂ ಹರೇಕಳ ನಿರೂಪಿಸಿದರು.