ಉಳ್ಳಾಲ: ಕೋವಿಡ್ 2ನೇ ಆಲೆಯಿಂದ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಲ್ಲಿ ಆಕ್ಸಿಜನ್ ಕೊರತೆಯಿಂದ ಸಾವಿಗೀಡಾಗುತ್ತಿರುವ ಸಂಖ್ಯೆ ಹೆಚ್ಚುತ್ತಿದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಕಾರ ಆಸ್ಪತ್ರೆ ಸೇರಿದಂತೆ ಖಾಸಗಿ ವೈದ್ಯಕೀಯ ಆಸ್ಪತ್ರೆಗಳು ಹೆಚ್ಚಿರುವ ಕಾರಣ ಕೋವಿಡ್ ರೋಗಿಗಳಿಗೆ ಆಕ್ಸಿಜನ್ ಸಮಸ್ಯೆ ಉದ್ಭವಿಸುವ ಸಾಧ್ಯತೆಗಳು ಕಡಿಮೆ. ಇಂತಹ ಸ್ಥಿತಿ ಎದುರಾದರೆ ಉಳ್ಳಾಲ ತಾಲೂಕು ಆಸ್ಪತ್ರೆ ಆಗಿ ಮೇಲ್ದರ್ಜೆಗೇರಲಿರುವ ಉಳ್ಳಾಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ 50 ಆಕ್ಸಿಜನ್ ಬೆಡ್‌ಗಳನ್ನು ತುರ್ತು ಸ್ಥಿತಿಗಾಗಿ ಸಿದ್ಧಗೊಳಿಸಿದ್ದು, ಆರಂಭದಲ್ಲಿ 30 ಬೆಡಗಳು ಸಜ್ಜುಗೊಂಡಿದ್ದು, ಮಂಗಳವಾರ ಆರಂಭಿಕ ಪ್ರಾತ್ಯಕ್ಷಿತೆಯನ್ನು ಆಸ್ಪತ್ರೆಯಲ್ಲಿ ನಡೆಸಲಾಗಿದೆ.
ಜಿಲ್ಲೆಯಲ್ಲಿ ಸರಕಾರಿ ಆಸ್ಪತ್ರೆಗಳು, ವೈದ್ಯಕೀಯ ಕಾಲೇಜು ಆಸ್ಪತ್ರೆಗಳು, ಖಾಸಗಿ ಆಸ್ಪತ್ರೆಗಳು ಸೇರಿದಂತೆ ಒಟ್ಟು 4,000 ಬೆಡ್ ಗಳು ಜಿಲ್ಲೆಯಲ್ಲಿವೆ. ಅಲ್ಲಿಯೂ ವ್ಯವಸ್ಥೆಗಳನ್ನು ಕಲ್ಪಿಸಲು ಅಸಾಧ್ಯವಾದಲ್ಲಿ ಮಾತ್ರ ಉಳ್ಳಾಲದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಶಾಸಕ ಯು.ಟಿ.ಖಾದರ್ ಮಾಹಿತಿ ನೀಡಿದ್ದಾರೆ.
ಉಳ್ಳಾಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಿನನಿತ್ಯ ಲಸಿಕೆಗೆ, ಪರೀಕ್ಷೆಗೆ 150 ರಿಂದ 200 ಜನರು ಭೇಟಿ ನೀಡುತ್ತಿದ್ದಾರೆ. ಮುಖ್ಯವಾಗಿ ವೃದ್ಧರು, ಮಕ್ಕಳು , ಗರ್ಭಿಣಿಯರು ಆಯುರ್ವೇದ, ಯುನಾನಿ, ಹೋಮಿಯೋಪತಿ ಚಿಕಿತ್ಸೆಯನ್ನು ಇಲ್ಲಿ ಪಡೆಯುತ್ತಿದ್ದು, ಕೋವಿಡ್ ಸಂಬಂಧಿ ರೋಗಿಗಳಿಗೆ ಪ್ರಸ್ತುತ ಅವಕಾಶ ನೀಡಿಲ್ಲ. ತುರ್ತು ಅವಶ್ಯಕತೆ ಇದ್ದಲ್ಲಿ ಮಾತ್ರ ಈ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯಾಗಿ ಮಾರ್ಪಡಿಸಲು ಸಿದ್ಧವಿದ್ದು, ಪ್ರಸ್ತುತ ಇರುವ 30 ಬೆಡ್‌ಗಳಿಗೆ ಆಕ್ಸಿಜನ್ ವ್ಯವಸ್ಥೆಯಿದ್ದು ಹೆಚ್ಚುವರಿ 20 ಬೆಡ್‌ಗಳಿಗೆ ಆಕ್ಷಿಜನ್ ವ್ಯವಸ್ಥೆ ಕಲ್ಪಿಸುವ ವ್ಯವಸ್ಥೆ ಇದೆ ಎಂದು ಖಾದರ್ ತಿಳಿಸಿದರು.
ಇದನ್ನೂ ಓದಿ:ಕರ್ಫ್ಯೂ: ಮಂಗಳೂರಿನ ಸೆಂಟ್ರಲ್ ಮಾರ್ಕೆಟ್ ನಲ್ಲಿ ಅಂತರ ಮರೆತು ವ್ಯಾಪಾರ!
ಕೋವಿಡ್ ಆಸ್ಪತ್ರೆಯಾಗಿ ಸದ್ಯಕ್ಕೆ ಉಳ್ಳಾಲ ಸಮುದಾಯ ಆರೋಗ್ಯ ಕೇಂದ್ರವನ್ನು ಘೋಷಣೆ ಮಾಡುವುದಿಲ್ಲ ವಿಷಮ ಸ್ಥಿತಿ ನಿರ್ಮಾಣವಾದರೆ ಮಾತ್ರ ಅಂತಹ ಘೋಷಣೆಯನ್ನು ಮಾಡಿ ಆಕ್ಷಿಜನ್ ಬೆಡ್ ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ ಆರಂಭದ ಡೆಮೋ ಕಾರ್ಯವನ್ನು ನಿರ್ವಹಿಸಲಾಗಿದೆ. ಮುಂದಕ್ಕೆ ಬೇಕಾಗಿರುವ ಮೂಲಭೂತ ಸೌಕರ್ಯಗಳಾದ ನರ್ಸ್, ಅಟೆಂಡರುಗಳು, ವೈದ್ಯರನ್ನು ನೇಮಿಸಲು ಜಿಲ್ಲಾಧಿಕಾರಿ, ಜಿಲ್ಲಾ ಆರೋಗ್ಯಾಧಿಕಾರಿಹಾಗೂ ಖಾಸಗಿ ಆಸ್ಪತ್ರೆಗಳ ಜೊತೆಗೆ ಚರ್ಚಿಸಿ ರೂಪುರೇಷೆಯನ್ನು ತಯಾರಿಸಲಾಗುವುದು.
–
ಯು.ಟಿ. ಖಾದರ್, ಶಾಸಕರು ಮಂಗಳೂರು ವಿಧಾನಸಭಾ ಕ್ಷೇತ್ರ