Advertisement

ಉಳ್ಳಾಲ: ಯುವತಿಯರ ಪತ್ರಕ್ಕೆ ಪ್ರಧಾನಮಂತ್ರಿ ಕಾರ್ಯಾಲಯದಿಂದ ಸ್ಪಂದನೆ 

11:27 AM Jul 20, 2018 | |

ಉಳ್ಳಾಲ : ಮಂಜೇಶ್ವರದ ವರ್ಕಾಡಿ ಪಂಚಾಯತ್‌ನ ದೈಗೋಳಿ ಸುಂಕದಕಟ್ಟೆ ಮಾರ್ಗವಾಗಿ ಕರ್ನಾಟಕದ ಬಂಟ್ವಾಳ ತಾಲೂಕಿನ ಕೈರಂಗಳ ಗ್ರಾಮದ ನಂದರಪಡ್ಪು ಸಂಪರ್ಕಿಸುವ ರಸ್ತೆ ಮಳೆಯಿಂದಾಗಿ ಸಂಪೂರ್ಣ ಹದಗೆಟ್ಟಿದ್ದು, ರಸ್ತೆ ಸಮಸ್ಯೆ ಪರಿಹರಿಸುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಮಂಜೇಶ್ವರ ಮೂಲದ ಇಬ್ಬರು ಯುವತಿಯರು ಪತ್ರ ಬರೆ ದಿದ್ದು, ಇದಕ್ಕೆ ಪ್ರಧಾನ ಮಂತ್ರಿ ಕಾರ್ಯಾಲಯದಿಂದ ಸ್ಪಂದನೆ ಸಿಕ್ಕಿರುವ ಪತ್ರ ಬಂದಿದೆ.

Advertisement

ಈ ರಸ್ತೆಗೆ ಮೂರು ವರ್ಷದ ಹಿಂದೆ ಡಾಮರೀಕರಣ ನಡೆದಿತ್ತು. ಆದರೆ ಕಳೆದ ಒಂದು ವರ್ಷದಿಂದ ರಸ್ತೆ ಸಂಪೂರ್ಣ ಹೊಂಡಮಯವಾಗಿ ಸಂಚಾರ ನಡೆಸುವುದೇ ದುಸ್ತರವಾಗಿತ್ತು. ಈ ಬಾರಿ ಸುರಿದ ಮಳೆಗೆ ಸಂಪೂರ್ಣ ರಸ್ತೆಯೇ ಕೊಚ್ಚಿ ಹೋಗಿ, ಚರಂಡಿಯಂತಾಗಿದೆ. ವಾಹನ ಸಂಚಾರ ಸಹಿತ ರಸ್ತೆ ಬದಿಯಲ್ಲಿ ಸಂಚರಿಸುವುದೇ ಕಷ್ಟವಾಗಿದೆ. ಸ್ಥಳೀಯರು ವರ್ಕಾಡಿ ಪಂಚಾಯತ್‌ಗೆ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ. ಅದ್ದ ರಿಂದ ದೈಗೋಳಿಯ ಯುವತಿ ತೇಜಾಕ್ಷಿ ಮತ್ತು ಆಕೆಯ ಸ್ನೇಹಿತೆ ಚೈತ್ರಾ ಅವರು ಪ್ರಧಾನ ಮಂತ್ರಿ ಕಾರ್ಯಾಲಯಕ್ಕೆ ಮನವಿ ಪತ್ರ ಕಳುಹಿಸಿದ್ದರು.

ಹದಗೆಟ್ಟಿದೆ ನಾಲ್ಕು ಕಿ.ಮೀ. ರಸ್ತೆ
ನಂದರಪಡ್ಪುವಿನಿಂದ ಕರ್ನಾಟಕದ ಗಡಿ ಪ್ರದೇಶದ ನಂದರಪಡ್ಪು ಜಂಕ್ಷನ್‌ ವರೆಗೆ ಅರ್ಧ ಕಿ.ಮೀ. ರಸ್ತೆ ಉತ್ತಮವಾಗಿದೆ. ಆದರೆ ಅಲ್ಲಿಂದ ದೈಗೋಳಿ ಸಂಪರ್ಕಿಸುವ ಪೊಯ್ಯತ್ತಬೈಲುವರೆಗೆ ಸುಮಾರು 4 ಕಿ.ಮೀ. ರಸ್ತೆ ಸಂಪೂರ್ಣ ಹದಗೆಟ್ಟಿದೆ. ಈ ರಸ್ತೆಯಾಗಿ ಕೈರಂಗಳ ಪುಣ್ಯಕೋಟಿ ಸಹಿತ ಮಂಗಳೂರು, ಮುಡಿಪು ಕಡೆ ತೆರಳುವ ವಿದ್ಯಾರ್ಥಿಗಳಿಗೆ ತೊಂಂದರೆಯಾಗುತ್ತಿದೆ. ರಿಕ್ಷಾ ಚಾಲಕರು ಈ ರಸ್ತೆಯಲ್ಲಿ ಸಂಚರಿಸಲು ಹಿಂದೇಟು ಹಾಕುತ್ತಿದ್ದು, ಎರಡು ಬಸ್‌ಗಳು ಮಾತ್ರ ಸಂಚರಿಸುತ್ತಿದೆ ಎನ್ನುತ್ತಾರೆ ಸ್ಥಳೀಯ ಭರತ್‌ ಕುಲಾಲ್‌.

ಸ್ಥಗಿತಗೊಳ್ಳುವ ಭೀತಿ
ಒಂದು ವರ್ಷದಿಂದ ಈ ರಸ್ತೆ ಸಮಸ್ಯೆ ಇದೆ. ಕಳೆದ ಒಂದು ತಿಂಗಳಿನಿಂದ ರಸ್ತೆ ಹೋಗಿ ಕೆಸರು ತುಂಬಿದ ಚರಂಡಿಯಾಗಿ ಮಾರ್ಪಟ್ಟಿದೆ. ಜನರಿಗೆ ಏನಾದರೂ ಆರೋಗ್ಯ ಸಮಸ್ಯೆಯಾದರೆ ಖಾಸಗಿ ವಾಹನದವರು ಈ ರಸ್ತೆಯಲ್ಲಿ ಬರಲು ಒಪ್ಪುತ್ತಿಲ್ಲ. ಎರಡು ಬಸ್‌ ಸಂಚರಿಸುತ್ತಿದ್ದು, ಮೂರು ದಿನಕ್ಕೊಮ್ಮೆ ಗ್ಯಾರೇಜ್‌ಗೆ ಹೋಗುವ ಸ್ಥಿತಿ ಎದುರಾಗಿದೆ ಎಂದು ಬಸ್ಸಿನ ಸಿಬಂದಿ ಅಲವತ್ತುಕೊಂಡಿದ್ದಾರೆ. ಹೀಗೆ ಮುಂದುವರಿದರೆ ವಾಹನಗಳು ಸಂಚರಿಸದೆ ಸಂಚಾರವೇ ಸ್ಥಗಿತಗೊಳ್ಳುವ ಭೀತಿಯಿದೆ.
– ಚಂದ್ರಹಾಸ, ನಿಡಿಂಬಿರಿ
ಸ್ಥಳೀಯ ನಿವಾಸಿ

Advertisement

Udayavani is now on Telegram. Click here to join our channel and stay updated with the latest news.

Next