Advertisement

ಉಳ್ಳಾಲ: ದುಃಖದ ಭಾರವನ್ನು ಹೆಚ್ಚಿಸಿದ ಕಾಯುವಿಕೆ

03:45 AM Jun 30, 2017 | Team Udayavani |

ಉಳ್ಳಾಲ: ಒಂದೆಡೆ ಅಬ್ಬರಿ ಸುತ್ತಿರುವ ಸಮುದ್ರ, ಇನ್ನೊಂದೆಡೆ ಒಡಹುಟ್ಟಿದವರನ್ನು ಕಳಕೊಂಡ ಕುಟುಂಬದ ಸದಸ್ಯರ ನೋವು. ಎರಡರ ಸಾಮ್ಯತೆಯೆಂದರೆ ತಳಮಳ. 

Advertisement

ಎರಡು ದಿನಗಳಿಂದ ಕಡಲ್ಕೊರೆತ ಕಾಮಗಾರಿಯ ಕಲ್ಲುಗಳ ಮಧ್ಯೆ ಸಿಲುಕಿ ಕೊಂಡಿರುವ ತುಮಕೂರು ಮೂಲದ ಹಯಾಝ್ ಮೃತದೇಹ ಮೇಲೆತ್ತಲು ಮೊಗವೀರಪಟ್ಣದಲ್ಲಿ ನಡೆಯುತ್ತಿರುವ ಕಾರ್ಯಾಚರಣೆಯ ದೃಶ್ಯ.

ಬುಧವಾರ ಮಧ್ಯಾಹ್ನದ ಬಳಿಕ ಸಮುದ್ರದ ಅಲೆಗಳು ಇಳಿತವಾಗುವುದನ್ನೇ ಪಣಂಬೂರು ಮತ್ತು ತಣ್ಣೀರು ಬಾವಿಯ ಮುಳುಗುಗಾರರು, ಜೀವರಕ್ಷಕ ತಂಡದ ಸದಸ್ಯರು ಕಾಯುತ್ತಿದ್ದರು. ಆದರೆ ಸಂಜೆ ವೇಳೆಗೂ ಮೃತದೇಹದ ಬಳಿಗೆ ತಲುಪಲು ಸಾಧ್ಯವಾಗಿರಲಿಲ್ಲ. ಈ ಸಂದರ್ಭದಲ್ಲಿ ನೆರವಿಗೆ ಬಂದವರು ಮೊಗವೀರಪಟ್ಣದ ಶಿವಾಜಿ ಜೀವರಕ್ಷಕ ಈಜುಗಾರರ ಸಂಘದ ಯೋಗೀಶ್‌ ಅಮೀನ್‌, ರಾಜೇಶ್‌ ಪುತ್ರನ್‌.

ಸಂಜೆಯಾಗುತ್ತಲೇ ಸಮುದ್ರದ ಅಲೆಗಳ ಬಿರುಸು ಕಡಿಮೆಗೊಂಡಿದ್ದು, ಇಬ್ಬರೂ ಕಲ್ಲಿನೆಡೆ ಇಳಿದು ಮೃತದೇಹ ತೆಗೆಯಲು ಯತ್ನಿಸಿದರು. ಸಾಧ್ಯವಾಗಲಿಲ್ಲ. ಅಲೆಗಳ ಅಬ್ಬರದ ಮಧ್ಯೆ ಯೋಗೀಶ್‌ ಅಮೀನ್‌ ಮೃತದೇಹದ ಕಾಲಿಗೆ ಹಗ್ಗ ಕಟ್ಟಿ ವಾಪಾಸಾಗಿದ್ದರು.

ಹಿಟಾಚಿ ಮತ್ತು ಕ್ರೇನ್‌ ಗೆ ಕಾದರು
ಬುಧವಾರ ರಾತ್ರಿ ಕಲ್ಲನ್ನು ಸರಿಸಲು ಸಾಧ್ಯವಾಗದ ಹಿನ್ನಲೆಯಲ್ಲಿ ಮೃತದೇಹ ತೆಗೆಯುವ ಕಾರ್ಯಕ್ಕೆ ಜಿಲ್ಲಾಡಳಿತದಿಂದ ಹಿಟಾಚಿ ಮತ್ತು ಕ್ರೇನ್‌ ಸಹಾಯವನ್ನು ಜೀವ ರಕ್ಷಕ ಸಂಘದ ಸದಸ್ಯರು ಕೋರಿದ್ದರು. ಅದರಂತೆ ಗುರುವಾರ ನಸುಕಿನ ಜಾವ ಸಮುದ್ರ ಇಳಿತದ ಸಂದರ್ಭದಲ್ಲಿ ಕಾರ್ಯಾಚರಣೆಗೆ ಸಿದ್ಧವಾದರು. ಆದರೆ ಬೆಳಗ್ಗೆ  ಸುಮಾರು ಹತ್ತು ಗಂಟೆಯಾದರೂ ಹಿಟಾಚಿ ಮತ್ತು ಕ್ರೇನ್‌ ಬರಲಿಲ್ಲ. ಕ್ರೇನ್‌ ಬರುವಾಗ ಸಮುದ್ರದ ಉಬ್ಬರ ಹೆಚ್ಚಾಗಿತ್ತು. ಹಾಗಾಗಿ ಸಂಜೆಯವರೆಗೂ ಸಮುದ್ರದ ಬಿರುಸು ಮುಂದುವರಿದ ಕಾರಣ ಕಾರ್ಯಾಚರಣೆ ಸಾಧ್ಯವಾಗಲಿಲ್ಲ. ಇನ್ನೊಂದೆಡೆ ಹಿಟಾಚಿ ಬದಲು ಜೆಸಿಬಿ ಆಗಮಿಸಿದ್ದರಿಂದ ಕಾರ್ಯಾಚರಣೆಗೆ ಇನ್ನಷ್ಟು ತೊಡಕುಂಟಾಯಿತು. ಮಧ್ಯಾಹ್ನದ ವೇಳೆಗೆ ಕ್ರೇನ್‌ ಸಮುದ್ರದ ಮರಳಿನಲ್ಲಿ ಹೂತು ಹೋಯಿತು.

Advertisement

ಸಾವಿರಾರು ಜನರ ಪ್ರಾರ್ಥನೆ 
ಸಮುದ್ರ ತೀರದಲ್ಲಿ ತುಮಕೂರಿನಿಂದ ಹಯಾಝ್ ಕುಟುಂಬದ ಸದಸ್ಯರು ಸೇರಿದಂತೆ ಸುಮಾರು 25ಕ್ಕೂ ಹೆಚ್ಚು ಮಂದಿ ಆಗಮಿಸಿದ್ದರು. ದರ್ಗಾ ವೀಕ್ಷಣೆಗೆಂದು ಬಂದಿರುವ ಸಾವಿರಾರು ಜನರು ಸಮುದ್ರ ತೀರದಲ್ಲಿ ನಡೆಯುತ್ತಿರುವ ಕಾರ್ಯಾಚರಣೆ ವೀಕ್ಷಿಸಿ ಮೃತದೇಹ ತೆಗೆಯುವಂತಾಗಲಿ ಎಂದು ಪ್ರಾರ್ಥನೆ ಸಲ್ಲಿಸುವುದು ಕಂಡು ಬಂದಿತು.

ಸಹೋದರರ ಅಳಲು
ಸಮುದ್ರ ಪಾಲಾದ ಘಟನೆ ತಿಳಿಯುತ್ತಿದ್ದಂತೆ ಹಯಾಝ್ನ ಸಹೋದರರು ಮತ್ತು ಸಂಬಂಧಿಕರು ಉಳ್ಳಾಲಕ್ಕೆ ದೌಡಾಯಿಸಿದ್ದರು. ತಮ್ಮ ಕುಟುಂಬದ ಸದಸ್ಯನನ್ನು ಕಳೆದುಕೊಂಡ ದುಃಖದ ಜತೆಗೆ ಮೃತದೇಹವನ್ನು ಪಡೆಯಲು ಆಗುತ್ತಿರುವ ವಿಳಂಬದಿಂದ ತೀರಾ ಅಸಹಾಯಕರಾಗಿ ಕಾರ್ಯಾಚರಣೆಯನ್ನೇ ನೋಡುತ್ತಿದ್ದರು.

ಮೂವರು ಸಹೋದರರಲ್ಲಿ ಎರಡನೆಯವ ಹಯಾಝ್. ನಮ್ಮ ಕುಟುಂಬಕ್ಕೆ ಆಧಾರ ಸ್ತಂಭವಾಗಿದ್ದ. ಗಾರೆ ಕೆಲಸ ಮಾಡಿಕೊಂಡು ಎಲ್ಲರೊಂದಿಗೆ ಬೆರೆಯುತ್ತಿದ್ದ. ಸೋಮವಾರ ಹಬ್ಬದ ಊಟವನ್ನು ನಾವೆಲ್ಲ ಒಟ್ಟಿಗೆ ಮಾಡಿದ್ದೆವು. ಪ್ರತಿ ವರ್ಷ ಹಬ್ಬದ ಬಳಿಕ ಸ್ನೇಹಿತರೊಂದಿಗೆ ಪಿಕ್ನಿಕ್‌ ಹೋಗುವ ಹವ್ಯಾಸ ಅವನದ್ದು. ಈ ಬಾರಿ ಮಂಗಳೂರಿಗೆ ಹೋಗುತ್ತಿದ್ದೇವೆ. ನಮಗೆಲ್ಲರಿಗೂ ದುವಾ ಮಾಡಿ ಎಂದು ಹೊರಟಿದ್ದ. ಶಿವಮೊಗ್ಗದ ಹಂಗಾರಕಟ್ಟೆ ದರ್ಗಾ ವೀಕ್ಷಣೆಯ ಬಳಿಕ ದೂರವಾಣಿ ಮಾಡಿ ಮಾತನಾಡಿದ್ದ. ಉಳ್ಳಾಲ ದರ್ಗಾ ತಲುಪಿದ ವಿಚಾರವನ್ನೂ ತಿಳಿಸಿದ್ದ. ಆದರೆ ಬಳಿಕ ಆವರ ಸ್ನೇಹಿತರು ಕರೆ ಮಾಡಿದಾಗ ದುಃಖದ ಸುದ್ದಿ ತಿಳಿಯಿತು. ಮನೆಯಲ್ಲಿ ತಾಯಿ ತಂದೆ ಸಹೋದರಿಯರು ಆತ ಬದುಕಿ ಬರಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಆದರೆ ಹಯಾಝ್ನ ಸ್ಥಿತಿ ನೋಡಿ ಮನಸ್ಸು ತಡೆಯಲಾಗುತ್ತಿಲ್ಲ. ಕೊನೆಯ ಕ್ಷಣದಲ್ಲಿ ಆತನ ಮುಖ ನೋಡುವ ಭಾಗ್ಯವಾದರೂ ಸಿಗಲಿ. ಏನಾದರೂ ಮಾಡಿ ಅವರನ್ನು ಕಲ್ಲಿನೆಡೆಯಿಂದ ಹೊರತೆಗೆಯಿರಿ ಎಂದು ಅಳಲು ತೋಡಿಕೊಂಡವರು ಹಯಾಝ್ ಸಹೋದರ ಫಯಾಝ್. ಇನ್ನೊಂದೆಡೆ ಶಾರುಖ್‌ ಮೃತದೇಹ ಬೆಳಗ್ಗೆ ಉಚ್ಚಿಲದಲ್ಲಿ ಪತ್ತೆಯಾಗಿದ್ದು, ವೆನಾÉಕ್‌ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದೆ. ಆತನ ಸಹೋದರರು ಉಳ್ಳಾಲದಲ್ಲಿದ್ದಾರೆ.

ತತ್‌ಕ್ಷಣ ಕಾರ್ಯಾಚರಣೆ
ಗುರುವಾರ ಬೆಳಗ್ಗೆ ಸರಿಯಾದ ಸಮಯಕ್ಕೆ ಹಿಟಾಚಿ ಮತ್ತು ಕ್ರೇನ್‌ ಬಂದಿದ್ದರೆ ಬೆಳಗ್ಗೆಯೇ ಮೃತದೇಹ ತೆಗೆಯಬಹುದಿತ್ತು. ಇನ್ನು ಒಂದು ದಿನ ಹೆಚ್ಚಾದರೆ ಮೃತದೇಹ ಕೊಳೆಯುವ ಸಾಧ್ಯತೆ ಇದ್ದು, ಸಮುದ್ರ ಶಾಂತವಾದರೆ ಗುರುವಾರ ರಾತ್ರಿಯೊಳಗೆ ತೆಗೆಯುತ್ತೇವೆ.
– ರಾಜೇಶ್‌ ಪುತ್ರನ್‌, 
ಶಿವಾಜಿ ಜೀವರಕ್ಷಕ ಈಜುಗಾರರ ಸಂಘದ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next