Advertisement
ರಾಜ್ಯ ಹೆದ್ದಾರಿ ತೊಕ್ಕೊಟ್ಟಿನಿಂದ ಮುಡಿಪುವರೆಗಿನ ಚತುಷ್ಪಥ ರಸ್ತೆ ಕಾಮಗಾರಿ ಶೇ. 80 ಪೂರ್ಣಗೊಂಡಿದೆ. ತೊಕ್ಕೊಟ್ಟಿನಿಂದ ಚೆಂಬುಗುಡ್ಡೆವರೆಗಿನ ಕಾಮಗಾರಿ ಮತ್ತು ಅಸೈಗೋಳಿಯಿಂದ ಮಂಗಳೂರು ವಿ.ವಿ.ವರೆಗಿನ ದ್ವಿಪಥ ರಸ್ತೆ ಕಾಮಗಾರಿಗೆ 25 ಕೋಟಿ ರೂ. ಅನುದಾನ ಬಿಡುಗಡೆಯಾಗಿ ಟೆಂಡರು ಪ್ರಕ್ರಿಯೆ ಮುಗಿದು ಚೆಂಬುಗುಡ್ಡೆಯಿಂದ ತೊಕ್ಕೊಟ್ಟುವರೆಗಿನ ಕಾಮಗಾರಿಯ ಪ್ರಾರಂಭದ ಹಂತದ ಕಾಮಗಾರಿ ಆರಂಭ ಗೊಂಡಿದೆ. ನ. 24ರ ಅನಂತರ ವಿದ್ಯುಕ್ತ ವಾಗಿ ಶಂಕುಸ್ಥಾಪನೆಯಾಗಲಿದ್ದು, ಬಳಿಕ ಕಾಮಗಾರಿ ವೇಗ ಪಡೆದು ಕೊಳ್ಳಲಿದೆ.
ಕಾಮಗಾರಿ ಆರಂಭಕ್ಕೆ ಮೊದಲು ಹೊಂಡಮಯವಾಗಿರುವ ರಸ್ತೆಯನ್ನು ತಾತ್ಕಾಲಿಕವಾಗಿ ಸರಿಪಡಿಸಲು ಹಲವು ದಿನಗಳಿಂದ ಜನರು, ಸಂಘಟನೆಗಳು ಸಂಬಂಧಪಟ್ಟ ಇಲಾಖೆಗೆ ಮನವಿ ಮಾಡಲಾಗಿತ್ತು. ಉದಯವಾಣಿ ಪತ್ರಿಕೆಯೂ ಎರಡು ಬಾರಿ ಈ ರಸ್ತೆ ದುರವಸ್ಥೆಯ ಬಗ್ಗೆ ಪತ್ರಿಕೆಯಲ್ಲಿ ಸಾಮಾಜಿಕ ಕಳಕಳಿಯ ಲೇಖನ ಪ್ರಕಟಿಸಿತ್ತು. ಶಾಶ್ವತ ಕಾಮಗಾರಿ ಆರಂಭಗೊಳ್ಳುವ ಹಿನ್ನೆಲೆಯಲ್ಲಿ ಅಧಿಕಾರಿಗಳು ತಾತ್ಕಾಲಿಕ ಕಾಮಗಾರಿಗೆ ಮೀನಮೇಷ ಎಣಿಸುತ್ತಿದ್ದರು. ರಸ್ತೆ ನಾದುರಸ್ತಿಯಿಂದ ಪ್ರತೀ ದಿನ ಸರತಿಯಲ್ಲಿ ವಾಹನ ಸಂಚರಿಸುವುದರೊಂದಿಗೆ ಟ್ರಾಫಿಕ್ ಸಮಸ್ಯೆಯೂ ಆಗಿತ್ತು. ಈ ನಡುವೆ ಹೊಂಡಗಳಿಗೆ ಬಿದ್ದು ಅನೇಕ ದ್ವಿಚಕ್ರ ವಾಹನಗಳ ಅಪಘಾತಗಳು ನಡೆದಿತ್ತು. ಇದೀಗ ತಾತ್ಕಾಲಿಕ ಕಾಮಗಾರಿ ನಡೆಸಲು ಒಂದು ಅಪಘಾತಕ್ಕೆ ಕಾಯುವಂತಾಯಿತು. ದ್ವಿಚಕ್ರ ವಾಹನಗಳ ಧಾವಂತ ಅಪಘಾತಕ್ಕೆ ಕಾರಣ
ಶನಿವಾರ ನಡೆದ ಅಪಘಾತದ ಬಳಿಕವೂ ದ್ವಿಚಕ್ರ ವಾಹನಗಳ ಅಪಘಾತ ಮುಂದುವರೆದಿದೆ. ರಸ್ತೆ ಹೊಂಡಗಳ ನಡುವೆ ಘನ ವಾಹನಗಳು ನಿಧಾನಗತಿಯಲ್ಲಿ ಸಂಚರಿಸುವಾಗ ದ್ವಿಚಕ್ರ ವಾಹನಗಳು ಮತ್ತು ರಿಕ್ಷಾ ಚಾಲಕರು ಘನ ವಾಹನಗಳ ಬದಿಯಲ್ಲಿ ಸಿಗುವ ಕಡಿಮೆ ಜಾಗದಲ್ಲಿ ತಮ್ಮ ವಾಹನಗಳನ್ನು ಚಲಾಯಿಸಿಕೊಂಡು ಬಂದಾಗ ಇಂತಹ ಅಪಘಾತಗಳು ನಡೆಯುತಿದೆ. ದಿನವೊಂದಕ್ಕೆ ಎರಡು ಮೂರು ಅಪಘಾತಗಳು ನಡೆಯುತ್ತಿದ್ದು, ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗುತ್ತಿದ್ದಾರೆ.
Related Articles
ಈಗಾಗಲೇ ಚತುಷ್ಪಥ ರಸ್ತೆ ಕಾಮಗಾರಿ ಪೂರ್ಣಗೊಂಡಿರುವ ಕೆಲವು ಕಡೆ ಮಳೆಗಾಲದ ಸಂದರ್ಭದಲ್ಲಿ ಹೊಂಡಗಳು ಬೀಳುತ್ತಿದ್ದು, ಮಳೆ ನೀರು ಹರಿದು ಹೋಗಲು ಸರಿಯಾದ ಚರಂಡಿ ನಿರ್ಮಾಣ ಒಂದು ಕಾರಣವಾದರೆ, ಕಾಮಗಾರಿಯನ್ನು ಅವೈಜ್ಞಾನಿಕವಾಗಿ ಮಾಡಿರುವುದು ಸಮಸ್ಯೆಗೆ ಮುಖ್ಯ ಕಾರಣ, ಚರಂಡಿ ನಿರ್ಮಾಣದೊಂದಿಗೆ ಸರಿಯಾದ ಫುಟ್‌ಪಾತ್ ನಿರ್ಮಿಸಿದರೆ, ಪಾದಾಚಾರಿಗಳಿಗೆ ಸಹಕಾರಿಯಾಗಲಿದೆ.
-ಶೇಖರ್, ಕುತ್ತಾರು ನಿವಾಸಿ
Advertisement
ಶಾಶ್ವತ ಪರಿಹಾರ ಅಗತ್ಯ ತೊಕ್ಕೊಟ್ಟಿನಿಂದ ಚೆಂಬುಗುಡ್ಡೆವರೆಗಿನ ರಸ್ತೆ ಕಾಮಗಾರಿ ಆರಂಭಗೊಂಡಿದ್ದು, ಈ ಹಿಂದೆ ಕಾಮಗಾರಿ ನಡೆದಿರುವ ಚೆಂಬುಗುಡ್ಡೆಯಿಂದ ಕುತ್ತಾರುವರೆಗಿನ ರಸ್ತೆ ಅಲ್ಲಲ್ಲಿ ಹೊಂಡ ಬಿದ್ದಿದ್ದು, ಪ್ರತೀ ಬಾರಿ ಮಳೆಗಾಲದಲ್ಲಿ ಹೊಂಡ ಬೀಳುವ ರಸ್ತೆಗೆ ಶಾಶ್ವತ ಪರಿಹಾರ ಅಗತ್ಯವಿದೆ. ಮುಖ್ಯವಾಗಿ ಬಬ್ಬುಕಟ್ಟೆಮ ನಿತ್ಯಾಧರ್ ಚರ್ಚ್ ಜಂಕ್ಷನ್ ಶಾಶ್ವತ ಕಾಮಗಾರಿ ಆಗಬೇಕಾಗಿದ್ದು, ಕುತ್ತಾರಿನಿಂದ ನಿಟ್ಟೆವರೆಗಿನ ರಸ್ತೆಗಳಲ್ಲಿ ಪ್ರತೀ ಬಾರಿ ಬೀಳುವ ಹೊಂಡಗಳಿಗೂ ಶಾಶ್ವತ ಕಾಮಗಾರಿ ನಡೆಸಬೇಕಾಗಿದೆ. ನಾಟೆಕಲ್‌ನಿಂದ ತಿಬ್ಲೆಪದವು ನಡುವೆ ಮಳೆಗಾಲದ ಸಂದರ್ಭದಲ್ಲಿ ಮಳೆ ನೀರು ನಿಲ್ಲುವುದರಿಂದ ಅಪಘಾತಗಳು ಹೆಚ್ಚುತ್ತಿದ್ದು, ಮುಂದಿನ ಮಳೆಗಾಲಕ್ಕೆ ಮೊದಲು ಈ ರಾಜ್ಯ ಹೆದ್ದಾರಿಯ ಕಾಮಗಾರಿ ನಡೆದ ಪ್ರದೇಶದ ಸಮಸ್ಯೆಗಳಿಗೆ ಇಲಾಖೆ ಶಾಶ್ವತ ಪರಿಹಾರ ನೀಡಬೇಕಾಗಿದೆ.