ಉಳ್ಳಾಲ: ಉಳ್ಳಾಲ ನಗರಸಭೆ, ಸೋಮೇಶ್ವರ ಪುರಸಭೆ, ಕೋಟೆಕಾರು ಪ. ಪಂಚಾಯತ್ ಮತ್ತು ಗ್ರಾ.ಪಂ. ವ್ಯಾಪ್ತಿಯಲ್ಲಿ ರಸ್ತೆ ನಿರ್ಮಾಣ ಭರದಿಂದ ನಡೆಯುತ್ತಿದೆ. ಕೆಲವು ಪ್ರದೇಶಗಳಲ್ಲಿ ಮಾತ್ರ ಚರಂಡಿ ನಿರ್ಮಾಣ ಆಗಿದ್ದು, ಹೆಚ್ಚಿನ ಕಡೆ ಮಳೆಗಾಲದಲ್ಲಿ ರಸ್ತೆಯಲ್ಲೇ ನೀರು ಹರಿಯುತ್ತದೆ. ತೊಕ್ಕೊಟ್ಟು ಜಂಕ್ಷನ್‌ನಿಂದ ಮಂಗಳೂರು ವಿ.ವಿ. ಮೂಲಕ ಮುಡಿಪು ಸಂಪರ್ಕಿಸುವ ಪಿಡಬ್ಲ್ಯುಡಿ ರಸ್ತೆ ಚತುಷ್ಪಥ ಕಾಮಗಾರಿ ನಡೆಯುತ್ತಿದೆ.
ಇಲ್ಲಿನ ದೇರಳಕಟ್ಟೆ, ನಾಟೆಕಲ್, ಕುತ್ತಾರು ಜಂಕ್ಷನ್ ಭಾಗದಲ್ಲಿ ಕಳೆದ ಮಳೆಗಾಲದಲ್ಲಿ ಸಮಸ್ಯೆ ಉದ್ಭವಿಸಿತ್ತು. ಈ ಬಾರಿ ನಾಟೆಕಲ್ ಜಂಕ್ಷನ್‌ನಲ್ಲಿ ಒಂದು ಬದಿಯಲ್ಲಿ ಚರಂಡಿ ನಿರ್ಮಾಣವಾಗಿದೆ. ಆದರೆ ಕೆಲವೆಡೆ ಅವೈಜ್ಞಾನಿಕವಾಗಿದ್ದು, ಮಳೆನೀರು ರಸ್ತೆಯಲ್ಲಿಯೇ ಹರಿಯುತ್ತದೆ. ದೇರಳಕಟ್ಟೆಯಲ್ಲಿ ಮಳೆಗಾಲಕ್ಕೆ ಮುನ್ನ ಸಮರ್ಪಕ ಚರಂಡಿ ನಿರ್ಮಿಸುವ ಅಗತ್ಯ ಇದೆ.
ದೇರಳಕಟ್ಟೆಯಿಂದ ಯೇನಪೊಯವರೆಗೆ ಚರಂಡಿ ಇಲ್ಲ. ಯೇನಪೊಯ ಬಳಿಯಿಂದ ತೊಕ್ಕೊಟ್ಟು ವರೆಗೆ ಚತುಷ್ಪಥ ರಸ್ತೆ ಕಾಮಗಾರಿ ಪ್ರಗತಿಯಲ್ಲಿದ್ದು, ಕುತ್ತಾರ್ ಜಂಕ್ಷನ್‌ವರೆಗೆ ಚರಂಡಿ ಆಗಿದೆ. ಕುತ್ತಾರ್ ಜಂಕ್ಷನ್‌ನಲ್ಲಿ ರಸ್ತೆ ಇನ್ನೂ ಎತ್ತರವಾಗಿದ್ದು, ಸ್ಥಳೀಯ ಸರಕಾರಿ ಶಾಲೆ ಸಹಿತ ತಗ್ಗು ಪ್ರದೇಶಗಳಲ್ಲಿ ಸಮಸ್ಯೆ ಉದ್ಭವಿಸಲಿದೆ. ಕುತ್ತಾರು ಜಂಕ್ಷನ್ ಚರಂಡಿಯಲ್ಲಿ ತ್ಯಾಜ್ಯ ನೀರು ಕುತ್ತಾರು ಜಂಕ್ಷನ್‌ನಲ್ಲಿ ಚರಂಡಿಯಲ್ಲಿ ತ್ಯಾಜ್ಯ ನೀರು ಹರಿಯುವುದೇ ಹೆಚ್ಚು. ಮುನ್ನೂರು ವ್ಯಾಪ್ತಿಯ ಮದನಿ ನಗರ ಜನವಸತಿ ಪ್ರದೇಶ ಮತ್ತು ಕುತ್ತಾರು ಜಂಕ್ಷನ್‌ನ ಬಹುಮಹಡಿ ಕಟ್ಟಡಗಳ ತ್ಯಾಜ್ಯ ನೀರು ಹರಿಯುವುದೇ ಇಲ್ಲಿನ ಸಮಸ್ಯೆ. ಆರೋಗ್ಯ ಇಲಾಖೆ ಎಚ್ಚೆತ್ತುಕೊಳ್ಳಬೇಕಿದೆ.
ಉಳ್ಳಾಲದಲ್ಲೂ ಸಮಸ್ಯೆ ಉಳ್ಳಾಲ ನಗರಸಭೆ ವ್ಯಾಪ್ತಿಯ ಉಳ್ಳಾಲ ಜಂಕ್ಷನ್‌ನಲ್ಲಿ ಮಳೆ ಹೆಚ್ಚಾದಾಗ ರಸ್ತೆಯಲ್ಲೇ ಹರಿಯುತ್ತದೆ, ಇದರೊಂದಿಗೆ ತ್ಯಾಜ್ಯ ನೀರು ಕೂಡ ಸೇರಿಕೊಳ್ಳುತ್ತದೆ. ಉಳ್ಳಾಲ ಹಳೆ ಪೊಲೀಸ್ ಠಾಣಾ ಪ್ರದೇಶದಲ್ಲಿಯೂ ಅವೈಜ್ಞಾನಿಕ ಕಾಮಗಾರಿಯಿಂದ ಚರಂಡಿಯ ನೀರು ರಸ್ತೆಯಲ್ಲೇ ನಿಲ್ಲುತ್ತದೆ. ನಿರ್ವಹಣೆ ಅಗತ್ಯ ಈ ಬಾರಿ ತೋಡುಗಳ ನಿರ್ವಹಣೆ ಇನ್ನಷ್ಟೇ ಆರಂಭವಾಗಬೇಕಿದೆ. ಮುಖ್ಯ ರಸ್ತೆಗಳ ಬದಿಯ ಚರಂಡಿಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಹೆಚ್ಚಿದ್ದು, ನೀರು ಹರಿಯಲು ಸಮಸ್ಯೆಯಾಗಲಿದೆ. ಮುಖ್ಯವಾಗಿ ಅಂಬ್ಲಿಮೊಗರು, ಮುನ್ನೂರು, ಕೊಣಾಜೆ, ಮಂಜನಾಡಿ, ಕಿನ್ಯ, ವ್ಯಾಪ್ತಿಯಲ್ಲಿ ನಿರ್ವಹಣೆ ಆಗತ್ಯ ಇದೆ.
ಕುತ್ತಾರು ಜಂಕ್ಷನ್ ಸಮಸ್ಯೆಗೆ ಪರಿಹಾರವಾಗಿ ಪ್ರತೀ ಮನೆಯಲ್ಲಿ ಇಂಗುಗುಂಡಿ ರಚಿಸಿ ತ್ಯಾಜ್ಯ ನೀರು ಹರಿಯುವುದನ್ನು ತಡೆಯಲು ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಲ್ಲಿ ಕಾಮಗಾರಿ ಮಾಡಲು ಪ್ರತೀ ಮನೆಗೆ ನೋಟಿಸ್ ನೀಡಿದೆ. ತ್ಯಾಜ್ಯ ನೀರು ಚರಂಡಿಗೆ ಬಿಡುವ ವಸತಿ ಸಂಕೀರ್ಣಗಳಿಗೂ ನೋಟಿಸ್ ಜಾರಿ ಮಾಡಲಾಗಿದೆ. ಜಂಕ್ಷನ್ ಮತ್ತು ಶಾಲೆಯ ಬದಿಯಿಂದ ನೀರು ಸರಾಗವಾಗಿ ಹರಿಯುವಂತೆ ಚರಂಡಿ ನಿರ್ಮಿಸಿಕೊಡಲು ಚತುಷ್ಪಥ ಕಾಮಗಾರಿ ನಡೆಸುವ ಸಂಸ್ಥೆ ಭರವಸೆ ನೀಡಿದೆ ಎನ್ನುತ್ತಾರೆ ಮುನ್ನೂರು ಗ್ರಾ.ಪಂ. ಅಧ್ಯಕ್ಷ ವಿಲ್ ಫ್ರೆಡ್ ಡಿ’ಸೋಜಾ.
ಪತ್ರ ಬರೆಯಲಾಗಿದೆ ಉಳ್ಳಾಲ ಜಂಕ್ಷನ್ ಚರಂಡಿ ಸಮಸ್ಯೆಗೆ ಈ ಮಳೆಗಾಲದೊಳಗೆ ಕ್ರಮ ಕೈಗೊಳ್ಳಲಾಗುವುದು. ಇಲ್ಲಿ ಹಳೆ ಚರಂಡಿ ಅತ್ಯಂತ ಆಳದಲ್ಲಿದ್ದು ಅದನ್ನು ಎತ್ತರಿಸಬೇಕಿದೆ. ರಾಷ್ಟ್ರೀಯ ಹೆದ್ದಾರಿಯ ತೊಕ್ಕೊಟ್ಟು ಜಂಕ್ಷನ್, ಭಟ್ನಗರ, ಕಾಪಿಕಾಡಿನಲ್ಲಿ ಹೆದ್ದಾರಿ ಕಾಮಗಾರಿ ನಡೆಸುವ ಸಂಸ್ಥೆಯಿಂದ ಚರಂಡಿ ನಿರ್ಮಾಣ ಸಂದರ್ಭದಲ್ಲಿ ಸ್ಥಳೀಯರಿಗೆ ಆಗುತ್ತಿರುವ ತೊಂದರೆಯ ಬಗ್ಗೆ ಈಗಾಗಲೇ ಪತ್ರ ಬರೆಯಲಾಗಿದೆ
. –ರಾಯಪ್ಪ, ಪೌರಾಯುಕ್ತರು, ಉಳ್ಳಾಲ ನಗರಸಭೆ