Advertisement

ಉಳ್ಳಾಲ ಘರ್ಷಣೆ: 16 ಮಂದಿ ಬಂಧನ

12:16 AM Sep 24, 2019 | Team Udayavani |

ಮಂಗಳೂರು: ಉಳ್ಳಾಲದ ಮುಕ್ಕಚ್ಚೇರಿ ಸಮೀಪದ ಕಡಪ್ಪರದಲ್ಲಿ ರವಿವಾರ ತಡರಾತ್ರಿ ಎರಡು ತಂಡಗಳ ನಡುವೆ ಘರ್ಷಣೆ ಹಾಗೂ ಗುಂಡು ಹಾರಾಟಕ್ಕೆ ಸಂಬಂಧಿಸಿ ಒಟ್ಟು 16 ಮಂದಿಯನ್ನು ಬಂಧಿಸಲಾಗಿದೆ. ಬಂಧಿತರಲ್ಲಿಬ್ಬರು ಆಸ್ಪತ್ರೆಯಲ್ಲಿದ್ದಾರೆ.

Advertisement

ಘರ್ಷಣೆಯಲ್ಲಿ ರಾಜ್ಯ ಯುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಸುಹೈಲ್‌ ಕಂದಕ್‌ ಮತ್ತು ಕಡಪ್ಪರ ನಿವಾಸಿ ಇರ್ಶಾದ್‌ (20) ಗಾಯಗೊಂಡಿದ್ದಾರೆ. ವಾಟ್ಸಾಪ್‌ನಲ್ಲಿ ಹರಡಿದ ಸಂದೇಶದ ವಿಚಾರವಾಗಿ ಅತ್ತಾವರದ ಸುಹೈಲ್‌ ಕಂದಕ್‌ ಮತ್ತು ಉಳ್ಳಾಲ ಕಡಪ್ಪರ ನಿವಾಸಿ ಸಲ್ಮಾನ್‌ ಅವರ ತಂಡಗಳ ಮಧ್ಯೆ ತಡರಾತ್ರಿ 11.45ರ ವೇಳೆಗೆ ಹೊಡೆದಾಟ ಸಂಭವಿಸಿತ್ತು ಎಂದು ಮಂಗಳೂರು ಪೊಲೀಸ್‌ ಆಯುಕ್ತ ಡಾ| ಹರ್ಷ ಪಿ.ಎಸ್‌. ಅವರು ಸೋಮವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಗಾಯಗೊಂಡಿರುವ ಸುಹೈಲ್‌ ಕಂದಕ್‌ ಮತ್ತು ಇರ್ಶಾದ್‌ ಅವರು ಪ್ರತ್ಯೇಕ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣದ ವಿವರ ಸುಹೈಲ್‌ ಕಂದಕ್‌ ಯುವ ಕಾಂಗ್ರೆಸ್‌ ಸಕ್ರಿಯ ಕಾರ್ಯಕರ್ತನಾಗಿದ್ದು, ಈ ಬಗ್ಗೆ ಆತನ ಕಚೇರಿಯಲ್ಲಿರುವ ಅರ್ಶದ್‌ ವಾಟ್ಸಾಪ್‌ನಲ್ಲಿ ಸುಹೈಲ್‌ನ ಫೋಟೋ ಹಾಕಿ ಪಕ್ಷದ ನಾಯಕನೆಂದು ಬರೆದಿದ್ದ. ಇದರಿಂದ ಅಸಮಾಧಾನಗೊಂಡ ಸಲ್ಮಾನ್‌, “ನಾನು ಕೂಡ ಅದೇ ಪಕ್ಷದ ಕಾರ್ಯಕರ್ತ; ನಾನೂ ಕೆಲಸ ಮಾಡುತ್ತಿದ್ದೇನಲ್ಲವೇ? ನನ್ನನ್ನು ಏಕೆ ತೋರಿಸುತ್ತಿಲ್ಲ? ಸುಹೈಲ್‌ನ ಬಗ್ಗೆ ಮಾತ್ರ ವಾಟ್ಸಾಪ್‌ನಲ್ಲಿ ಹಾಕುವುದೇಕೆ’ ಎಂದು ಪ್ರಶ್ನಿಸಿದ್ದ. ಇದರಿಂದ ಎರಡೂ ತಂಡಗಳ ನಡುವೆ ವಾಟ್ಸಾಪ್‌ನಲ್ಲಿ ಬಿರುಸಾದ ಚಾಟಿಂಗ್‌ ನಡೆದು,ರಾತ್ರಿ ವೇಳೆ ಘರ್ಷಣೆಗೆ ಕಾರಣವಾಯಿತು ಎಂದು ಆಯುಕ್ತರು ವಿವರಿಸಿದರು.

ರಾತ್ರಿ 11.45ರ ವೇಳೆಗೆ ಸುಹೈಲ್‌ ಕಂದಕ್‌ ತನ್ನ ಸಹಚರರ ಜತೆ ಉಳ್ಳಾಲದ ಕಡಪ್ಪರಕ್ಕೆ ತೆರಳಿದ್ದು, ಅಲ್ಲಿದ್ದ ಕೆಲವರನ್ನು ಉದ್ದೇಶಿಸಿ “ಸಲ್ಮಾನ್‌ ಎಲ್ಲಿ’ ಎಂದು ವಿಚಾರಿಸಿದ್ದ. ಆಗ ಅಲ್ಲಿ ಕುಳಿತಿದ್ದ ಸಲ್ಮಾನ್‌ನ ಸಹಚರರು ಮತ್ತು ಸುಹೈಲ್‌ ಮಧ್ಯೆ ಮಾತಿನ ಚಕಮಕಿ ನಡೆಯಿತು. ಈ ಸಂದರ್ಭ ಸುಹೈಲ್‌ ಕಂದಕ್‌ ತನ್ನಲ್ಲಿದ್ದ ಪಿಸ್ತೂಲಿನಿಂದ ಗುಂಡು ಹಾರಿಸಿದ್ದಾನೆ. ಗುಂಡು ಇರ್ಷಾದ್‌ನ ಕಾಲಿಗೆ ತಗುಲಿ ಗಾಯವಾಗಿತ್ತು. ಅಷ್ಟರಲ್ಲಿ ಸಲ್ಮಾನ್‌ ತಂಡದವರು ಸುಹೈಲ್‌ ತಂಡದವರ ಮೇಲೆ ಹಲ್ಲೆ ನಡೆಸಿ, ಅವರ ವಾಹನವನ್ನು ಧ್ವಂಸ ಮಾಡಿದ್ದರು.

ಘಟನೆಯಲ್ಲಿ ಸುಹೈಲ್‌ ಕೂಡ ಗಾಯಗೊಂಡಿದ್ದು, ಆತ ತೊಕ್ಕೊಟ್ಟಿನ ಅಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾನೆ. ಗುಂಡು ತಗುಲಿ ಗಾಯ ಗೊಂಡ ಇಶಾìದ್‌ ಇನ್ನೊಂದು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆ. ಈತನ ಬಲಗಾಲಿನ ಮಂಡಿಯ ಚಿಪ್‌ ಕೆಳಗಡೆ ಆಳವಾದ ಗಾಯವಾಗಿದೆ ಎಂದು ಆಯುಕ್ತರು ತಿಳಿಸಿದರು.

Advertisement

6 ಸುತ್ತು ಗುಂಡು ಹಾರಾಟ
ಒಟ್ಟು 6 ಸುತ್ತು ಗುಂಡು ಹಾರಾಟ ನಡೆದಿದೆ. ಈ ಬಗ್ಗೆ ಎಫ್ಎಸ್‌ಎಲ್‌ ತಂಡ ತನಿಖೆ ನಡೆಸುತ್ತಿದೆ. ಸ್ಥಳದಲ್ಲಿ 1 ಬಳಸಿದ ಹಾಗೂ 2 ಸಜೀವ ಗುಂಡುಗಳು ಪತ್ತೆಯಾಗಿವೆ. ಪಿಸ್ತೂಲನ್ನು ವಶಪಡಿಸಿಕೊಳ್ಳಲಾಗಿದೆ.

ಪೊಲೀಸರಿಗೆ ಮೆಚ್ಚುಗೆ
ಘಟನೆ ನಡೆದ ಕೂಡಲೇ ಪೊಲೀಸರು ಸ್ಥಳಕ್ಕೆ ತೆರಳಿದ್ದು, ಸೂಕ್ತ ಕ್ರಮ ಜರಗಿಸಿ ಎರಡೂ ತಂಡದವರನ್ನು ಬಂಧಿಸಿದ್ದಾರೆ ಎಂದು ತಿಳಿಸಿದ ಆಯುಕ್ತರು, ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಎಲ್ಲ ಪೊಲೀಸರಿಗೆ ಪ್ರಶಂಸಾ ಪತ್ರ ನೀಡಿ ಅಭಿನಂದಿಸಿದರು. ಎಲ್ಲ ಎಸಿಪಿಗಳು, ಉಳ್ಳಾಲದ ಇನ್‌ಸ್ಪೆಕ್ಟರ್‌ ಗೋಪಿಕೃಷ್ಣ ಹಾಗೂ ಸಿಬಂದಿ, ಸಿಸಿಬಿ ಅಧಿಕಾರಿಗಳು ಮತ್ತು ಸಿಬಂದಿ ಕಾರ್ಯಾಚರಣೆಯಲ್ಲಿ ಸಹಕರಿಸಿದ್ದರು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಡಿಸಿಪಿಗಳಾದ ಅರುಣಾಂಶುಗಿರಿ ಮತ್ತು ಲಕ್ಷ್ಮೀ ಗಣೇಶ್‌ ಉಪಸ್ಥಿತರಿದ್ದರು.

ಬಂಧಿತರು
ಘಟನೆಗೆ ಸಂಬಂಧಿಸಿ ಉಳ್ಳಾಲ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ. ಇರ್ಶಾದ್‌ ನೀಡಿದ ದೂರಿನನ್ವಯ ಬಶೀರ್‌, ಸುಹೈಲ್‌ ಕಂದಕ್‌ ಮತ್ತು ತಂಡದ ವಿರುದ್ಧ ಕೇಸು ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ನಿಜಾಮುದ್ದೀನ್‌, ಮಹಮದ್‌ ಅರ್ಶದ್‌ ನಿಜಾಮುದ್ದೀನ್‌, ತೊಫಿಕ್‌ ಶೇಖ್‌, ಫಹಾದ್‌, ಅಫಾÌನ್‌ ಅವರನ್ನು ಬಂಧಿಸಲಾಗಿದೆ. ಸುಹೈಲ್‌ ಕಂದಕ್‌ ತಂಡದ ವಿರುದ್ಧ ಐಪಿಸಿ 143, 147, 148, 148, 341, 504, 506, 326, 307 ಮತ್ತು ಭಾರತೀಯ ಸಶಸ್ತ್ರ ಕಾಯ್ದೆಯ ಸೆಕ್ಷನ್‌ 25ರನ್ವಯ ಕೇಸು ದಾಖಲಿಸಲಾಗಿದೆ. ಸುಹೈಲ್‌ ಕಂದಕ್‌ ಯಾನೆ ಉಮ್ಮರ್‌ ಫಾರೂಕ್‌ ನೀಡಿದ ದೂರಿನಂತೆ 10 ಮಂದಿಯ ವಿರುದ್ಧ ಕೇಸು ದಾಖಲಾಗಿದೆ. ಅವರ ಪೈಕಿ ಮಹಮ್ಮದ್‌, ಮಹಮ್ಮದ್‌ ವಾಸಿಂ, ಅಬ್ದುಲ್‌ ರಹ್ಮತುಲ್ಲಾ, ಹರ್ಷದ್‌, ಮುಝಾಮಿಲ್‌, ರೈಫಾನ್‌, ಮಹಮ್ಮದ್‌ ಸಿಯಾಬ್‌ ಅವರನ್ನು ಬಂಧಿಸಲಾಗಿದೆ. ಸಲ್ಮಾನ್‌ ಮತ್ತು ಇತರರ ವಿರುದ್ಧ ಐಪಿಸಿ 143, 147, 148, 149, 341, 324, 326, 307, 504, 506, 507, 427 ಅನ್ವಯ ಕೇಸು ದಾಖಲಾಗಿದೆ.

ನನ ಗೆ ಸಂಬಂಧ ವಿಲ್ಲ: ಮೊದಿನ್‌ ಬಾವಾ
ಸುರತ್ಕಲ್‌: ಉಳ್ಳಾಲದಲ್ಲಿ ಶೂಟೌಟ್‌ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ ಎಂದು ಮಾಜಿ ಶಾಸಕ ಮೊದಿನ್‌ ಬಾವಾ ಹೇಳಿದ್ದಾರೆ. ನಾನು ಹನ್ನೊಂದು ತಿಂಗಳು ಮೊದಲೇ ನನ್ನ ಕಾರನ್ನು ಸೊಹೈಲ್‌ ಕಂದಕ್‌ ಅವರಿಗೆ ಮಾರಾಟ ಮಾಡಿದ್ದೆ. ಬ್ಯಾಂಕ್‌ ಲೋನ್‌ ಮಾಡಲಾಗದೆ ನನಗೆ ಕಾರಿನ ಮೊತ್ತವನ್ನೂ ನೀಡಿರಲಿಲ್ಲ. ಅಲ್ಲದೆ ಆತನ ಹೆಸರಿಗೆ ಕಾರಿನ ದಾಖಲೆ ಪತ್ರವನ್ನು ವರ್ಗಾವಣೆಯಾಗಿರಲಿಲ್ಲ. ಉಳ್ಳಾಲದಲ್ಲಿ ನಡೆದ ಘಟನೆ ಬಗ್ಗೆ ಪೊಲೀಸರು ತನಿಖೆ ನಡೆಸಲಿದ್ದಾರೆ. ನಾನು ಈಗ ವಿದೇಶದಲ್ಲಿರುವುದರಿಂದ ಊರಿಗೆ ಬಂದ ಕೂಡಲೇ ಘಟನೆ ಕುರಿತು ಮಾಹಿತಿ ಪಡೆಯಲಿದ್ದೇನೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next