ಉಳ್ಳಾಲ : ಮಹಿಳೆಯೋರ್ವರ ಸಂಶಯಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ನಡೆದ ಶವ ಮಹಜರು ಪರೀಕ್ಷೆಯಲ್ಲಿ ಮಹಿಳೆ ತಲೆಗೆ ಬಲವಾದ ಗಾಯವಾಗಿರುವ ಹಿನ್ನೆಲೆಯಲ್ಲಿ ಕೊಲೆ ಪ್ರಕರಣ ಎಂಬುದು ಸಾಬೀತಾಗಿದೆ. ಪ್ರಕರಣ ಸಂಬಂಧಿಸಿ ಆರೋಪಿ ಪತಿಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.
ಕುಂಪಲದ ಚೇತನ ನಗರ ನಿವಾಸಿ ಜೋಸೆಫ್ ಫ್ರಾನ್ಸಿಸ್ (54) ಬಂಧಿತ ಆರೋಪಿ. ಕೇರಳದ ಕೊಚ್ಚಿ ನಿವಾಸಿ ಜೋಸೆಫ್ ಅವರ ಪುತ್ರಿ ಶೈಮಾ (44) ಕೊಲೆಗೀಡಾದ ಮಹಿಳೆ.
ಮೇ 11ರಂದು ದಂಪತಿ ನಡುವೆ ವಾಗ್ವಾದ ನಡೆದು, ಪತಿ ಜೋಸೆಫ್ ಬಲವಾದ ಆಯುಧದಿಂದ ಪತ್ನಿ ತಲೆಗೆ ಬಡಿದಿದ್ದನು. ಆದರೆ ಪೊಲೀಸರಲ್ಲಿ ಆಕೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು ಎಂದು ಸುಳ್ಳು ಹೇಳಿದ್ದ. ಗಂಭೀರ ಗಾಯಗೊಂಡ ಶೈಮಾ ಅವರನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಶೈಮಾ ಮೃತಪಟ್ಟಿದ್ದರು.
ಆಸ್ಪತ್ರೆಯಿಂದ ಬಂದ ವರದಿಯಂತೆ ಉಳ್ಳಾಲ ಪೊಲೀಸರು ಆರಂಭದಲ್ಲಿ ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದರು. ಬಳಿಕ ಆಸ್ಪತ್ರೆಯಲ್ಲಿ ನಡೆದ ಶವ ಮಹಜರು ಪರೀಕ್ಷೆಯಲ್ಲಿ ಮಹಿಳೆ ತಲೆಗೆ ಬಡಿದು ಕೊಲೆ ನಡೆಸಿರುವುದು ಸಾಬೀತಾಗಿದೆ. ತತ್‌ಕ್ಷಣ ಉಳ್ಳಾಲ ಪೊಲೀಸರು ಆರೋಪಿ ಪತಿಯನ್ನು ವಿಚಾರಣೆ ನಡೆಸಿದಾಗ ಕೊಲೆಕೃತ್ಯ ಬಯಲಾಗಿದೆ.
ಇದನ್ನೂ ಓದಿ : ಔರಂಗಜೇಬ್ ಸಮಾಧಿ ಮೇಲೆ ನಾಯಿ ಕೂಡ ಮೂತ್ರ ವಿಸರ್ಜಿಸುವುದಿಲ್ಲ : ಫಡ್ನವೀಸ್
ಜೋಸೆಫ್ ಪೆಟ್ರೋಲ್ ಬಂಕ್ ನಿರ್ಮಾಣ ಗುತ್ತಿಗೆ ನಡೆಸುತ್ತಿದ್ದು, ಕೇರಳದಲ್ಲಿದ್ದ ಈತ ಐದು ದಿನಗಳ ಹಿಂದೆಯಷ್ಟೇ ಆಗಮಿಸಿದ್ದ. ಕುಡಿಯುವ ವಿಚಾರದಲ್ಲಿ ಗಲಾಟೆ ನಡೆದಿದ್ದು, ಈ ಸಂದರ್ಭದಲ್ಲಿ ಶೈಮಾಳಿಗೆ ಹೊಡೆದಿದ್ದ. ವೈದ್ಯರು ನೀಡಿದ ವರದಿಯಂತೆ ಕೊಲೆ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ. ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದು, ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಾಗಿದ್ದಾರೆ.