Advertisement

ಉಳ್ಳಾಲ: ವಿದೇಶಕ್ಕೆ ತೆರಳುವುದಾಗಿ ಹೇಳಿ ಸಮುದ್ರಕ್ಕೆ ಹಾರಿ ಆರ್ಕಿಟೆಕ್ಟ್ ಆತ್ಮಹತ್ಯೆ

10:06 AM Feb 09, 2022 | Team Udayavani |

ಉಳ್ಳಾಲ, ಫೆ. 8: ವಿದೇಶಕ್ಕೆ ತೆರಳುತ್ತೇನೆ ಎಂದು ಮನೆಯಲ್ಲಿ ಮತ್ತು ಸ್ನೇಹಿತರಲ್ಲಿ ತಿಳಿಸಿದ್ದ ಆರ್ಕಿಟೆಕ್ಟ್ ಸುರೇಶ್‌ ಸಾಲಿಯಾನ್‌ (48) ಸೋಮವಾರ ತಡರಾತ್ರಿ ಸೋಮೇಶ್ವರ ರುದ್ರಪಾದೆಯಿಂದ ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೈದಿದ್ದು ಮಂಗಳವಾರ ಮಧ್ಯಾಹ್ನ ಸೋಮೇಶ್ವರ ಕಡಲ ಕಿನಾರೆಯಲ್ಲಿ ಮೃತದೇಹ ಪತ್ತೆಯಾಗಿದೆ.

Advertisement

ಕುತ್ತಾರು ತೇವುಲ ನಿವಾಸಿಯಾಗಿರುವ ಸುರೇಶ್‌ ಕಳೆದ ಹಲವು ವರ್ಷಗಳಿಂದ ತೊಕ್ಕೊಟ್ಟಿನಲ್ಲಿ ಪ್ಲ್ಯಾನಿಂಗ್‌ ಪ್ಯಾಲೇಸ್‌ ಮೂಲಕ ಆರ್ಕಿಟೆಕ್ಟ್, ಭೂ ವ್ಯವಹಾರ, ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಕೊಲ್ಯ ಮನೆಯಿಂದ ಸೋಮವಾರ ಮಕ್ಕಳಲ್ಲಿ ತಾನು ವಿದೇಶಕ್ಕೆ ತೆರಳುತ್ತೇನೆ ಎಂದು ತಿಳಿಸಿ ಕಾರು ಮತ್ತು ಬಂಗಾರವನ್ನು ಮನೆಯಲ್ಲೇ ಬಿಟ್ಟು ಬಂದಿದ್ದರು.

ಸಂಜೆಯ ತನಕ ಗೆಳೆಯರೊಂದಿಗೆ ಮಾತನಾಡಿದ್ದ ಅವರು ರಾತ್ರಿಯೂ ತನ್ನ ಕೊಲ್ಯದ ಭೂವ್ಯಹಾರಕ್ಕೆ ಸಂಬಂಧಪಟ್ಟ ಪಾಲುದಾರರಲ್ಲಿ ಮಾತನಾಡಿದ್ದರು. ತಡರಾತ್ರಿ ತನ್ನ ಸಂಬಂಧಿಕರೊಬ್ಬರಿಗೆ ದೂರವಾಣಿ ಕರೆ ಮಾಡಿ ನಾನು ದೂರ ಹೋಗುತ್ತೇನೆ ನಿಮಗೆ ಸಿಗುವುದಿಲ್ಲ ಎಂದು ಕರೆ ಮಾಡಿದ್ದು ಬಳಿಕ ಫೋನ್‌ ಸ್ವಿಚ್‌ ಆಫ್‌ ಆಗಿತ್ತು. ಅವರ ಸಂಬಂಧಿ ಸೋಮೇಶ್ವರ ಕಡಲ ಕಿನಾರೆವರೆಗೆ ಬಂದು ಹುಡುಕಾಡಿದ್ದು, ಯಾರು ಇಲ್ಲದ ಕಾರಣ ವಾಪಸ್‌ ತೆರಳಿದ್ದರು.

ಸೋಮವಾರವೂ ಸುರೇಶ್‌ ಅವರಿಗೆ ಕರೆ ಮಾಡಿದಾಗ ಫೋನ್‌ ಸ್ವಿಚ್‌ ಆಫ್‌ ಬಂದಿದ್ದು, ಸಮುದ್ರ ಕಿನಾರೆಗೆ ಬಂದಾಗ ಸುರೇಶ್‌ ಅವರು ಧರಿಸಿದ್ದ ಚಪ್ಪಲಿ ದೊರಕಿದ್ದು ಇದರ ಆಧಾರದಲ್ಲಿ ಸುರೇಶ ಅವರ ಕುಟುಂಬದ ಸದಸ್ಯರು ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿ ಸಮುದ್ರ ತೀರದಲ್ಲಿ ಹುಡುಕಾಟ ನಡೆಸುತ್ತಿದ್ದಾಗ ಕರಾವಳಿ ರಕ್ಷಣ ಪಡೆಯ ಸ್ಥಳೀಯ ಜೀವರಕ್ಷಕ ಅಶೋಕ್‌ ಸೋಮೇಶ್ವರ, ಕಿರಣ್‌ ಆ್ಯಂಟೋನಿ, ಯತೀಶ್‌ ಕುಮಾರ್‌ ಅವರಿಗೆ ಮೃತದೇಹ ಕಂಡು ಬಂದಿದ್ದು, ಅಶೋಕ್‌ ಅವರು ತತ್‌ ಕ್ಷಣ ಈಜಿ ಮೃತದೇಹವನ್ನು ದಡಕ್ಕೆ ತಂದಿದ್ದಾರೆ.

ಕೌಟುಂಬಿಕ ಸಮಸ್ಯೆಯಿಂದ ಬಳಲುತ್ತಿದ್ದರು
ಸುರೇಶ್‌ ಅವರಿಗೆ ಪತ್ನಿ, ಮಗಳು, ಮಗನಿದ್ದು ಸುರೇಶ್‌ ಅವರು ವಿವಾಹಿತ ಮಹಿಳೆಯೊಂದಿಗೆ ಅಕ್ರಮ ಸಂಬಂಧದ ವಿಚಾರದಲ್ಲಿ ಪತ್ನಿಯೊಂದಿಗೆ ವಿರಸ ಮೂಡಿತ್ತು. ಈ ನಡುವೆ ವಿಚ್ಛೇದನಕ್ಕೂ ಅರ್ಜಿ ಸಲ್ಲಿಸಿದ್ದ ಸುರೇಶ್‌ ಕೊಲ್ಯದ ಮನೆಯನ್ನು ಪತ್ನಿಗೆ ನೀಡಿ ಗ್ರಾಮಚಾವಡಿ ಬಳಿ ಬಾಡಿಗೆ ಮನೆಯೊಂದನ್ನು ಪಡೆದು ವಿವಾಹಿತ ಮಹಿಳೆಯೊಂದಿಗೆ ವಾಸವಾಗಿದ್ದರು.

Advertisement

ಕೌಟುಂಬಿಕ ಸಮಸ್ಯೆಯಿಂದ ಖನ್ನತೆಗೆ ಒಳಗಾಗಿದ್ದ ಸುರೇಶ್‌ ಅವರಿಗೆ ತಲೆನೋವು ಸೇರಿದಂತೆ ಅನಾರೋಗ್ಯದಿಂದ ಸ್ನೇಹಿತರ ಒತ್ತಾಯದ ಮೇರೆಗೆ ವೈದ್ಯಕೀಯ ಚಿಕಿತ್ಸೆ ಪಡೆದಿದ್ದರು. ಕೆಲವು ದಿನಗಳಿಂದ ಪತ್ನಿ ಮತ್ತು ಮಕ್ಕಳ ನೆನಪಾಗಿ ವಾಪಾಸ್‌ ಕೊಲ್ಯಕ್ಕೆ ಆಗಮಿಸಿ ಮಕ್ಕಳೊಂದಿಗೆ ವಿದೇಶಕ್ಕೆ ತೆರಳುತ್ತೇನೆ ಎಂದು ಹೇಳಿದ್ದರು. ಕೊಲ್ಯದಲ್ಲಿ ಲೇಔಟ್‌ ಸಂಬಂಧಿಸಿದಂತೆ ವ್ಯವಹಾರದ ಪತ್ರಗಳಿಗೆ ತಮ್ಮ ವಕೀಲರಲ್ಲಿ ತುರ್ತಾಗಿ ಸಹಿ ಮಾಡಬೇಕು ಎಂದು ಹೇಳಿ ಒಪ್ಪಂದಕ್ಕೆ ಸಹಿ ಹಾಕಿ ತನ್ನ ಪಾಲುದಾರನಿಗೆ ವ್ಯವಹಾರದ ಹೊಣೆ ನೀಡಿ ನಾನು ವಿದೇಶಕ್ಕೆ ತೆರಳಿ ಬರುತ್ತೇನೆ ಎಂದಿದ್ದರು. ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next