ಕೀವ್: ರಷ್ಯಾ ತಮ್ಮ ದೇಶದ ಮೇಲೆ ಯುದ್ಧ ಸಾರಿದ ಬಳಿಕ ಉಕ್ರೇನಿಯನ್ ಜನರೂ ಶಸ್ತ್ರಾಸ್ತ್ರ ಹಿಡಿದು ಯುದ್ಧಕ್ಕೆ ಅಣಿಯಾಗಿದ್ದಾರೆ. ದಿನಗಳೆದಂತೆ ರಷ್ಯಾ ದೇಶವು ಆಕ್ರಮಣವನ್ನು ಹೆಚ್ಚು ಮಾಡುತ್ತಿದೆ. ಈ ನಡುವೆ ಉಕ್ರೇನ್ ವ್ಯಕ್ತಿಯೋರ್ವ ಖಾಲಿ ಕೈಯಲ್ಲಿ ರಷ್ಯಾ ಯುದ್ಧ ಟ್ಯಾಂಕನ್ನು ತಡೆದು ನಿಲ್ಲಿಸಿದ ವಿಡಿಯೋ ವೈರಲ್ ಆಗಿದೆ.
ಉತ್ತರ ಉಕ್ರೇನ್‌ನ ಬಖ್ಮಾಚ್‌ನ ಬೀದಿಗಳಲ್ಲಿ ಉಕ್ರೇನಿಯನ್ ವ್ಯಕ್ತಿಯೊಬ್ಬ ರಷ್ಯಾದ ಟ್ಯಾಂಕ್ ಅನ್ನು ತನ್ನ ಕೈಗಳಿಂದ ನಿಲ್ಲಿಸುತ್ತಿರುವ ವಿಡಿಯೋವನ್ನು ಉಕ್ರೇನ್ ದೇಶದ ವಿದೇಶಾಂಗ ಸಚಿವಾಲಯ ಹಂಚಿಕೊಂಡಿದೆ.
ರಸ್ತೆಯಲ್ಲಿ ಬರುತ್ತಿದ್ದ ರಷ್ಯಾದ ಬೃಹತ್ ಟ್ಯಾಂಕ್ ನ್ನು ಉಕ್ರೇನ್ ನಾಗರಿಕ ನಿಲ್ಲಿಸಿ ಹಿಂದಕ್ಕೆ ತಳ್ಳುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಚಲಿಸುವ ವಾಹನದ ಮುಂಭಾಗಕ್ಕೆ ತನ್ನ ಬರಿ ಕೈಗಳನ್ನು ಊರಿ, ತನ್ನ ಬಲದಿಂದ ಟ್ಯಾಂಕನ್ನು ಹಿಂದಕ್ಕೆ ತಳ್ಳುತ್ತಾನೆ. ಸ್ಥಳೀಯ ನಿವಾಸಿಗಳು ಅವನ ಕಡೆಗೆ ಧಾವಿಸುತ್ತಿದ್ದಂತೆ ವ್ಯಕ್ತಿ ರಸ್ತೆಯ ಮಧ್ಯದಲ್ಲಿ ಮಂಡಿಯೂರಿ ಕುಳಿತು ಕೊಳ್ಳುತ್ತಾನೆ.
ಇದನ್ನೂ ಓದಿ:ಉಕ್ರೇನ್ ಅಧ್ಯಕ್ಷರ ಹತ್ಯೆಗೆ ಪುಟಿನ್ “ನಿಗೂಢ ಪಡೆ” ರವಾನೆ, ಏನಿದು ವಾಗ್ನೆರ್ ಗ್ರೂಪ್?
ಈ ಟ್ಯಾಂಕ್ ರಷ್ಯಾದ ಆಕ್ರಮಣದ ಮೂರನೇ ದಿನವಾದ ಶನಿವಾರ ಬಖ್ಮಾಚ್ ಪಟ್ಟಣದ ಮೂಲಕ ಹಾದುಹೋಗುವ ರಷ್ಯಾದ ಬೆಂಗಾವಲಿನ ಭಾಗವಾಗಿತ್ತು ಎಂದು ವರದಿಯಾಗಿದೆ.
ತರಬೇತಿ ಪಡೆದ ರಷ್ಯಾದ ಪಡೆಗಳ ವಿರುದ್ಧ ಉಕ್ರೇನಿಯನ್ ನಾಗರಿಕರು ಸಂಘರ್ಷದಲ್ಲಿ ತೊಡಗಿರುವ ಹಲವು ಘಟನೆಗಳಿಗೆ ಈ ವಿಡಿಯೋ ಒಂದು ಉದಾಹರಣೆಯಾಗಿದೆ.
ಗುರುವಾರ ಉಕ್ರೇನ್‌ನ ಮೇಲೆ ರಷ್ಯಾ ಪೂರ್ಣ ಪ್ರಮಾಣದ ಆಕ್ರಮಣವನ್ನು ಪ್ರಾರಂಭಿಸಿದಾಗಿನಿಂದ, ಯುಎನ್‌ನ ನಿರಾಶ್ರಿತರ ವಿಭಾಗದ ಪ್ರಕಾರ ಅರ್ಧ ಮಿಲಿಯನ್ ಗಿಂತಲೂ ಹೆಚ್ಚು ಜನರು ದೇಶವನ್ನು ತೊರೆದಿದ್ದಾರೆ. 14 ಮಕ್ಕಳು ಸೇರಿದಂತೆ ಕನಿಷ್ಠ 352 ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಉಕ್ರೇನಿಯನ್ ಅಧಿಕಾರಿಗಳು ತಿಳಿಸಿದ್ದಾರೆ.