ಕೀವ್: ದಟ್ಟ ಮಂಜು, ಥರಗುಟ್ಟುವ ಚಳಿಯ ನಡುವೆಯೂ ಉಕ್ರೇನ್ ಮೇಲೆ ರಷ್ಯಾ ಪಡೆ ದಾಳಿಯನ್ನು ತೀವ್ರಗೊಳಿಸಿದೆ. ಗುರುವಾರ ರಷ್ಯಾ ಸೇನೆಯ ಕಡೆಯಿಂದ ಕ್ಷಿಪಣಿಗಳ ಮಳೆಯೇ ಹರಿದಿದೆ.
ವಿದ್ಯುತ್ ಸ್ಥಾವರಗಳು ಸೇರಿದಂತೆ ಪ್ರಮುಖ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಕಳೆದ ಕೆಲವು ವಾರಗಳಲ್ಲೇ ನಡೆದ ದೊಡ್ಡಹಂತದ ದಾಳಿ ಇದಾಗಿದೆ. ಗುರುವಾರ ಉಕ್ರೇನ್‌ನಾದ್ಯಂತ ವೈಮಾನಿಕ ದಾಳಿಯ ಸೈರನ್‌ಗಳು ಮೊಳಗಿದ್ದು, 120ಕ್ಕೂ ಹೆಚ್ಚು ಕ್ಷಿಪಣಿಗಳನ್ನು ಉಡಾಯಿಸಲಾಗಿದೆ.
ಬುಧವಾರ ತಡರಾತ್ರಿ ಆಯ್ದ ಪ್ರದೇಶಗಳಿಗೆ ಸ್ಫೋಟಕ ಡ್ರೋನ್‌ಗಳನ್ನು ಕಳುಹಿಸಿದ್ದ ರಷ್ಯಾ, ಅದಾದ ಬೆನ್ನಲ್ಲೇ ಬೆಳಕು ಹರಿಯುತ್ತಿದ್ದಂತೆ ವಿಮಾನಗಳು ಮತ್ತು ಯುದ್ಧನೌಕೆಗಳಿಂದ ಕ್ರೂಸ್ ಕ್ಷಿಪಣಿಗಳನ್ನು ಪ್ರಯೋಗಿಸಿ ಒಂದೇ ಸಮನೆ ದಾಳಿ ಮಾಡಿದೆ. ಪರಿಣಾಮ 14 ವರ್ಷದ ಬಾಲಕಿ ಸೇರಿದಂತೆ ಮೂವರು ಗಾಯಗೊಂಡಿದ್ದಾರೆ. ವಿದ್ಯುತ್ ಸ್ಥಾವರದ ಮೇಲೂ ದಾಳಿ ನಡೆದ ಕಾರಣ, ಕೀವ್‌ನಲ್ಲಿ ವಿದ್ಯುತ್ ಅಭಾವ ತಲೆದೋರಿದೆ. ಎಲ್ಲರೂ ನೀರನ್ನು ಸಂಗ್ರಹಿಸಿಟ್ಟುಕೊಂಡು, ಎಲೆಕ್ಟ್ರಾನಿಕ್ ಸಾಧನಗಳನ್ನು ಚಾರ್ಜ್ ಮಾಡಿಟ್ಟುಕೊಳ್ಳುವಂತೆ ಸ್ಥಳೀಯಾಡಳಿತವು ಜನರಿಗೆ ಸೂಚಿಸಿದೆ. ಹಲವು ನಗರಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ, ಇಂಟರ್ನೆಟ್ ಕೆಲಸ ಮಾಡುತ್ತಿಲ್ಲ.
54 ಕ್ಷಿಪಣಿ ಧ್ವಂಸ: ಉಕ್ರೇನ್:
ಗುರುವಾರ ಬೆಳಗ್ಗೆ ರಷ್ಯಾ ಪಡೆ ಉಡಾಯಿಸಿದ್ದ 69 ಕ್ಷಿಪಣಿಗಳ ಪೈಕಿ 54 ಅನ್ನು ನಾವು ಧ್ವಂಸಗೊಳಿಸಿದ್ದೇವೆ ಎಂದು ಉಕ್ರೇನ್ ವಾಯುಪಡೆ ಹೇಳಿಕೊಂಡಿದೆ. ನಮ್ಮ ದೇಶದ ಪ್ರಮುಖ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡುವ ಮೂಲಕ ರಷ್ಯಾವು ಇಲ್ಲಿನ ಜನರಲ್ಲಿ ಭಯವನ್ನು ಸೃಷ್ಟಿಸುತ್ತಿದೆ. ರಷ್ಯಾ ಕಳುಹಿಸಿದ್ದ 11 ಶಹೇದ್ ಡ್ರೋನ್‌ಗಳನ್ನು ನಾವು ಹೊಡೆದುರುಳಿಸಿದ್ದೇವೆ. ಒಟ್ಟಾರೆ 54 ಕ್ಷಿಪಣಿಗಳನ್ನು ನಾಶ ಮಾಡಿದ್ದೇವೆ ಎಂದು ಉಕ್ರೇನ್ ಸೈನಿಕರು ಹೇಳಿದ್ದಾರೆ.
ಪುಟಿನ್ ಆರೋಗ್ಯದ ಬಗ್ಗೆ ಆಘಾತಕಾರಿ ಮಾಹಿತಿ! :
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಕ್ಯಾನ್ಸರ್ ಮಾತ್ರವಲ್ಲದೇ ಪಾರ್ಕಿನ್ಸನ್ ರೋಗದಿಂದಲೂ ಬಳಲುತ್ತಿದ್ದಾರೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಅಷ್ಟೇ ಅಲ್ಲ, ಪುಟಿನ್‌ಗೆ ಪಾಶ್ಚಿಮಾತ್ಯದ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಕ್ಯಾನ್ಸರ್ ದೇಹದ ಇತರೆ ಭಾಗಗಳಿಗೆ ವ್ಯಾಪಿಸುತ್ತಿದ್ದು, ಅದನ್ನು ನಿಧಾನಗೊಳಿಸಲು ವೈದ್ಯರು ಔಷಧಗಳನ್ನು ನೀಡುತ್ತಿದ್ದಾರೆ. ಈ ಔಷಧಗಳಿಂದಲೇ ಅವರು ಜೀವಂತವಾಗಿರುವುದು ಎಂದು ರಷ್ಯಾ ಇತಿಹಾಸಕಾರ ಮತ್ತು ರಾಜಕೀಯ ವಿಶ್ಲೇಷಕ ವಲೇರಿ ಸೊಲೊವೆ ಹೇಳಿದ್ದಾರೆ. ವಿದೇಶಿ ಚಿಕಿತ್ಸೆ ಇಲ್ಲದಿರುತ್ತಿದ್ದರೆ, ಈಗ ಪುಟಿನ್ ಅವರೂ ಇರುತ್ತಿರಲಿಲ್ಲ. ಅವರಿಗೆ ಅತ್ಯಂತ ಸುಧಾರಿತ ಚಿಕಿತ್ಸೆ ನೀಡಲಾಗುತ್ತಿದೆ. ಹೀಗಿದ್ದರೂ, ಭವಿಷ್ಯದಲ್ಲಿ ಅವರ ಆರೋಗ್ಯ ಸ್ಥಿತಿ ಕುರಿತು ವೈದ್ಯರಿಗೆ ಗ್ಯಾರಂಟಿ ಕೊಡಲು ಸಾಧ್ಯವಾಗುತ್ತಿಲ್ಲ ಎಂದೂ ಸೊಲೊವೆ ತಿಳಿಸಿದ್ದಾರೆ.