ಕೀವ್: ಉಕ್ರೇನ್ ನಲ್ಲಿ ರಷ್ಯಾ ಪಡೆ ದಾಳಿಯನ್ನು ಮುಂದುವರಿಸಿದ್ದು, ಕೀವ್ ನ ವಸತಿ ಪ್ರದೇಶದ ಕಟ್ಟಡಗಳ ಮೇಲಿನ ರಾಕೆಟ್ ದಾಳಿಯಲ್ಲಿ ಉಕ್ರೇನ್ ನ ಖ್ಯಾತ ನಟಿ ಒಕ್ಸಾನಾ ಶ್ವೆಟ್ಸ್ (67ವರ್ಷ) ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಹುಡುಗಿಯರಿಗೆ ಹೈಸ್ಕೂಲ್ ಕಲಿಯಲು ಅವಕಾಶ ನೀಡಿದ ತಾಲಿಬಾನ್; ಆದರೆ ಷರತ್ತು ಅನ್ವಯ
ನಟಿ ಒಕ್ಸಾನಾ ಸಾವನ್ನಪ್ಪಿರುವುದನ್ನು ದ ಯಂಗ್ ಥಿಯೇಟರ್ ಖಚಿತಪಡಿಸಿದ್ದು, ಕೀವ್ ನ ಜನವಸತಿ ಪ್ರದೇಶದ ಕಟ್ಟಡಗಳ ಮೇಲೆ ರಷ್ಯಾ ಪಡೆಯ ರಾಕೆಟ್ ದಾಳಿಯಲ್ಲಿ ಒಕ್ಸಾನಾ ಮೃತಪಟ್ಟಿರುವುದಾಗಿ ವಿವರಿಸಿದೆ.
ದ ಹಾಲಿವುಡ್ ರಿಪೋರ್ಟರ್ ಪ್ರಕಾರ, ನಟಿ ಒಕ್ಸಾನಾ ಅವರು ಉಕ್ರೇನ್ ನ ಅತ್ಯುತ್ತಮ ನಟಿ ಗೌರವಕ್ಕೆ ಪಾತ್ರರಾಗಿದ್ದರು. ಒಕ್ಸಾನಾ ಅವರು ಉಕ್ರೇನ್ ನ ಗೌರವಾನ್ವಿತ ಪ್ರಶಸ್ತಿಗೆ ಭಾಜನರಾಗಿದ್ದರು ಎಂದು ಹೇಳಿದೆ.
ಫೆಬ್ರುವರಿ 24ರಿಂದ ರಷ್ಯಾ ಉಕ್ರೇನ್ ಮೇಲೆ ಮಿಲಿಟರಿ ದಾಳಿ ಆರಂಭಿಸಿತ್ತು. ಕಳೆದ 20ಕ್ಕೂ ಹೆಚ್ಚು ದಿನಗಳಿಂದ ರಷ್ಯಾ ಯುದ್ಧ ಮುಂದುವರಿಸಿದೆ. ರಷ್ಯಾ ಸೇನಾ ಪಡೆಯ ದಾಳಿಯಲ್ಲಿ ಸಾವಿರಾರು ಮಂದಿ ಸಾವನ್ನಪ್ಪಿದ್ದು, ಲಕ್ಷಾಂತರ ಜನರು ನೆರೆಯ ದೇಶಗಳಿಗೆ ವಲಸೆ ಹೋಗಿದ್ದು, ಪ್ರಮುಖ ಸರ್ಕಾರಿ ಕಟ್ಟಡಗಳು, ಚಿತ್ರಮಂದಿರ, ಆಸ್ಪತ್ರೆಗಳು ನೆಲಸಮವಾಗಿರುವುದಾಗಿ ವರದಿ ತಿಳಿಸಿದೆ.