Advertisement

ಮರಿಯುಪೋಲ್‌: ನಿರಾಶ್ರಿತರ ಶಿಬಿರದ ಮೇಲೆ ದಾಳಿ; 400 ಸಾವು?

12:26 AM Mar 21, 2022 | Team Udayavani |

ಕೀವ್‌: ಉಕ್ರೇನ್‌ ಮೇಲಿನ ತನ್ನ ಮಾರಕ ದಾಳಿಯನ್ನು ಮುಂದುವರಿಸಿರುವ ರಷ್ಯಾ, ಭಾನುವಾರ ಮರಿಯುಪೋಲ್‌ನ ಶಾಲೆ ಮೇಲೆ ಬಾಂಬ್‌ ದಾಳಿ ನಡೆಸಿದೆ. ಅದರಲ್ಲಿ ಸುಮಾರು 400 ನಿರಾಶ್ರಿತರು ಆಶ್ರಯ ಪಡೆದಿದ್ದರೆಂದು ಹೇಳಲಾಗಿದ್ದು ಅವರಲ್ಲಿ ಬಹುತೇಕರು ಸಾವಿಗೀಡಾಗಿರುವ ಸಾಧ್ಯತೆಗಳಿವೆ ಎಂದು ಅಧಿಕಾರಗಳು ತಿಳಿಸಿದ್ದಾರೆ.

Advertisement

ಉಕ್ರೇನ್‌ನ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್ಸ್ಕಿ ನಿರಾಶ್ರಿತರ ಮೇಲೆ ದಾಳಿ ನಡೆಸುವ ಮೂಲಕ ರಷ್ಯಾ ಅಧ್ಯಕ್ಷ ಪುಟಿನ್‌ರವರು ಮತ್ತೊಂದು ಯುದ್ಧಾಪರಾಧ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಈ ಬಗ್ಗೆ ಉಕ್ರೇನ್‌ ಸರ್ಕಾರ “ಯುದ್ಧ ಆರಂಭವಾದ ನಂತರ “ಜಿ-12′ ಎಂಬ ಈ ಕಲಾ ಶಾಲೆಯನ್ನು ನಿರಾಶ್ರಿತರ ಶಿಬಿರವನ್ನಾಗಿ ಮಾರ್ಪಡಿಸಲಾಗಿತ್ತು. ಈ ಶಿಬಿರದಲ್ಲಿ ಮಹಿಳೆಯರು, ಮಕ್ಕಳು ಕೂಡ ಇದ್ದರು. ಇದರ ಮೇಲೆ ಬಾಂಬ್‌ ದಾಳಿ ನಡೆಸಲಾಗಿರುವುದು ಅಕ್ಷಮ್ಯ. ಶಾಂತಿ ನೆಲೆಸಿರುವ ನಗರವೆಂದು ಪ್ರಖ್ಯಾತಿಯಾಗಿದ್ದ ಮರಿಯುಪೋಲ್‌ ನಗರದ ಮೇಲೆ ಪದೇ ಪದೆ ಆಗುತ್ತಿರುವ ದಾಳಿಗಳನ್ನು ಉಕ್ರೇನ್‌ನ ಮುಂದಿನ ತಲೆಮಾರುಗಳ ಜನರೂ ನೆನಪಿನಲ್ಲಿಟ್ಟುಕೊಂಡಿರುತ್ತಾರೆ’ ಎಂದು ತಿಳಿಸಿದೆ.

ದೈತ್ಯ ಉಕ್ಕು ಕಾರ್ಖಾನೆ ಧ್ವಂಸ
ಉಕ್ರೇನ್‌ನ ಅಜೋವ್‌ತ್ಸಾಲ್‌ ನಗರದಲ್ಲಿರುವ ಉಕ್ಕು ತಯಾರಿಕಾ ಘಟಕದ ಮೇಲೆ ವಾಯುದಾಳಿ ನಡೆಸಿರುವ ರಷ್ಯಾ ಪಡೆಗಳು ಇಡೀ ಕಾರ್ಖಾನೆಯನ್ನು ದ್ವಂಸಗೊಳಿಸಿವೆ. ಈ ಕಾರ್ಖಾನೆಯು ಐರೋಪ್ಯ ರಾಷ್ಟ್ರಗಳಲ್ಲಿರುವ ಅತಿ ದೊಡ್ಡ ಉಕ್ಕು ತಯಾರಿಕಾ ಘಟಕಗಳಲ್ಲೊಂದು ಎಂದು ಖ್ಯಾತಿ ಪಡೆದಿತ್ತು.

56 ಹಿರಿಯ ನಾಗರಿಕರ ಹತ್ಯೆ
ಲುಗಾನ್ಸ್ಕ್ ನಲ್ಲಿ ರಷ್ಯಾ ಪಡೆಗಳು 56 ಹಿರಿಯ ನಾಗರಿಕರನ್ನು ಕೊಂದಿದ್ದಾರೆಂದು ಉಕ್ರೇನ್‌ ಸರ್ಕಾರದ ಮಾನವ ಹಕ್ಕುಗಳ ವಿಭಾಗ ಆರೋಪಿಸಿದೆ.

Advertisement

” ಲುಗಾನ್ಸ್ಕ್ ನ ಕ್ರೆಮಿನ್ನಾ ನಗರದಲ್ಲಿ ಮಾ. 11ರಂದು ನುಗ್ಗಿದ್ದ ರಷ್ಯಾ ಸೇನೆಯು ಕಂಡಕಂಡಲ್ಲಿ ಟ್ಯಾಂಕರ್‌ಗಳ ಮೂಲಕ ದಾಳಿ ನಡೆಸಿತ್ತು. ಆಗ, ಟ್ಯಾಂಕರೊಂದರಿಂದ ಸಿಡಿದ ಸಿಡಿಮದ್ದು ಹಿರಿಯ ನಾಗರಿಕರು ವಾಸವಾಗಿದ್ದ ಮನೆಯೊಂದರ ಮೇಲೆ ಅಪ್ಪಳಿಸಿದ್ದು ಅದರಲ್ಲಿದ್ದ 56 ಹಿರಿಯ ಜೀವಗಳು ಸಾವನ್ನಪ್ಪಿವೆ. ಆದರೆ, ಈ ವಿಚಾರ ಭಾನುವಾರ ಬೆಳಕಿಗೆ ಬಂದಿದೆ’ ಎಂದಿದೆ.

ರಷ್ಯಾ ಸಹಕರಿಸದಿದ್ದರೆ 3ನೇ ಮಹಾಯುದ್ಧ
ಯುದ್ಧವನ್ನು ನಿಲ್ಲಿಸಲು ಉಕ್ರೇನ್‌, ರಷ್ಯಾದೊಂದಿಗೆ ಶಾಂತಿ ಸಂಧಾನ ಮಾಡಿಕೊಳ್ಳಲು ಪ್ರಯತ್ನಿಸುತ್ತಿದೆ. ಇದುವರೆಗೆ ನಾಲ್ಕು ಸುತ್ತಿನ ಶಾಂತಿ ಮಾತುಕತೆಗಳು ನಡೆದಿದ್ದರೂ ರಷ್ಯಾ ಮಾತುಕತೆಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ರಷ್ಯಾದ ಹಠ ಹೀಗೆಯೇ ಮುಂದುವರಿದರೆ ಅದು ಖಂಡಿತವಾಗಿಯೂ ಮೂರನೇ ಮಹಾಯುದ್ಧಕ್ಕೆ ನಾಂದಿಯಾಗುತ್ತದೆ ಎಂದು ಉಕ್ರೇನ್‌ನ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್ಸ್ಕಿ ತಿಳಿಸಿದ್ದಾರೆ.

ಸಿಎನ್‌ಎನ್‌ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಅವರು, ನಾವು ರಷ್ಯಾದೊಂದಿಗಿನ ಗಡಿ ಸಮಸ್ಯೆ ಯನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಲು ಕಳೆದ ಎರಡು ವರ್ಷಗಳಿಂದಲೂ ಪ್ರಯತ್ನಿಸುತ್ತಿದ್ದೆವು. ಆದರೆ, ಅದು ಸಾಧ್ಯವಾಗಿಲ್ಲ. ಈಗ ಯುದ್ಧ ಶುರುವಾದ ನಂತರವೂ ನಾನು ಖುದ್ದಾಗಿ ಶಾಂತಿ ಮಾತುಕತೆಗೆ ಆಗ್ರಹಿಸುತ್ತಿದ್ದೇನೆ. ಆದರೆ, ರಷ್ಯಾ ಅದಕ್ಕೆ ಸ್ಪಂದಿಸುತ್ತಿಲ್ಲ” ಎಂದಿದ್ದಾರೆ.

10 ಲಕ್ಷ ರೂ. ಜೆರ್ಸಿ ಬಗ್ಗೆ ವಿವಾದ
ಮಾ. 18ರಂದು ಮಾಸ್ಕೋದಲ್ಲಿ ನಡೆದಿದ್ದ ಬೃಹತ್‌ ರ್‍ಯಾಲಿಯಲ್ಲಿ ಪಾಲ್ಗೊಂಡಿದ್ದ ರಷ್ಯಾದ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ರವರು ಧರಿಸಿದ್ದ ಜ್ಯಾಕೆಟ್‌ ವಿವಾದಕ್ಕೀಡಾಗಿದೆ. ಅಂದು ಅವರು ಇಟಲಿಯ ಲೊರೊ ಪಿಯಾನಾ ಎಂಬ ಬ್ರಾಂಡ್‌ನ‌ ಜ್ಯಾಕೆಟ್‌ ಧರಿಸಿದ್ದರು. ಅದರ ಬೆಲೆ ಬರೋಬ್ಬರಿ 10.59 ಲಕ್ಷ ರೂ. ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಹಲವಾರು ಟೀಕೆಗಳು ವ್ಯಕ್ತವಾಗಿದೆ. ಉಕ್ರೇನ್‌ ಮೇಲೆ ದಾಳಿ ನಡೆಸಿದ ನಂತರ ಅಮೆರಿಕ ಸೇರಿದಂತೆ ಹಲವಾರು ಪಾಶ್ಚಿಮಾತ್ಯ ರಾಷ್ಟ್ರಗಳು ನಿರ್ಬಂಧ ಹೇರಿದ್ದು, ಅದರಿಂದಾಗಿ ರಷ್ಯಾದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ರಷ್ಯನ್ನರು ಆಹಾರ ಪದಾರ್ಥಗಳಿಗಾಗಿ ಮಾಲ್‌ಗ‌ಳಲ್ಲಿ ಬಡಿದಾಡುತ್ತಿದ್ದಾರೆ. ಪ್ರಜೆಗಳು ಹೀಗೆ ಸಂಕಷ್ಟದಲ್ಲಿರುವಾಗ ಪುಟಿನ್‌ರವರಿಗೆ ಇಂಥ ದುಬಾರಿ ದಿರಿಸು ತೊಡುವ ಅನಿವಾರ್ಯವಿತ್ತೇ ಎಂದು ಪ್ರಶ್ನಿಸಿದ್ದಾರೆ.

ಇನ್ನೂ ಕೆಲವರು, ಪುಟಿನ್‌ ಧರಿಸಿರುವ ಜ್ಯಾಕೆಟ್‌ನ ಬೆಲೆ ಅದೆಷ್ಟೋ ರಷ್ಯನ್ನರ ವಾರ್ಷಿಕ ಸಂಬಳದ ಒಟ್ಟಾರೆ ಮೊತ್ತಕ್ಕಿಂತಲೂ ಹೆಚ್ಚಿನದ್ದಾಗಿದೆ ಎಂದಿದ್ದಾರೆ. ಕೆರಿನ್‌ ಓರ್ಲೋವಾ ಎಂಬ ಪತ್ರಕರ್ತೆ ಪುಟಿನ್‌ರವರನ್ನು ಬಹಿಷ್ಕರಿಸಬೇಕು ಎಂದು ಆಗ್ರಹಿಸಿದ್ದಾರೆ.

ಸಮರಾಂಗಣ
ಮರಿಯುಪೋಲ್‌ ಶಾಲೆಯ ಮೇಲೆ ರಷ್ಯಾ ಬಾಂಬ್‌ ದಾಳಿ. 400 ಮಂದಿ ನಿರಾಶ್ರಿತರು ಸಾವಿಗೀಡಾರುವ ಶಂಕೆ.
– ನಿರಾಶ್ರಿತರ ಮೇಲಿನ ದಾಳಿ ಯುದ್ಧಾಪರಾಧ ಎಂದು ಆಕ್ರೋಶ ವ್ಯಕ್ತಪಡಿಸಿದ ವೊಲೊಡಿಮಿರ್‌ ಝೆಲೆನ್ಸ್ಕಿ.
– ಉಕ್ರೇನ್‌ ಮೇಲೆ ಮತ್ತೆ ಹೈಪರ್‌ ಸಾನಿಕ್‌ ಕ್ಷಿಪಣಿ ಪ್ರಯೋಗ ಮಾಡಿದ ಬಗ್ಗೆ ಘೋಷಿಸಿಕೊಂಡ ರಷ್ಯಾ ಸರ್ಕಾರ.
– ಪರಮಾಣು ಶಸ್ತ್ರಾಸ್ತ್ರಗಳ ಬಳಕೆ ನಂತರ ಕೈಗೊಳ್ಳಬೇಕಾದ ಕಾರ್ಯಾಚರಣೆ ಅಭ್ಯಾಸ ಕೈಗೊಳ್ಳಲು ಪುಟಿನ್‌ ಆದೇಶ.
– ಯೂರೋಪ್‌ನ ದೈತ್ಯ ಉಕ್ಕು ಘಟಕಗಳಲ್ಲೊಂದಾದ ಅಜೋವ್‌ತ್ಸಾಲ್‌ ಉಕ್ಕು ಕಾರ್ಖಾನೆ ಮೇಲೆ ರಷ್ಯಾ ಪಡೆಗಳ ದಾಳಿ.
– ಉಕ್ರೇನ್‌ನ ಲುಗಾನ್ಸ್ಕ್ ನಲ್ಲಿ ರಷ್ಯಾ ಪಡೆಗಳು 56 ಹಿರಿಯ ನಾಗರಿಕರನ್ನು ಕೊಂದಿರುವ ಘಟನೆ ತಡವಾಗಿ ಬೆಳಕಿಗೆ.

Advertisement

Udayavani is now on Telegram. Click here to join our channel and stay updated with the latest news.

Next