ಉಡುಪಿ: ಉಕ್ರೇನ್ ಮೇಲೆ ರಷ್ಯಾ ದಾಳಿಯ ಮಾಹಿತಿ ಇತ್ತು. ಆದರೆ ಇಷ್ಟು ಬೇಗ ಮತ್ತು ಇಷ್ಟೊಂದು ಗಂಭೀರ ದಾಳಿ ನಡೆದೀತು ಎಂದು ಭಾವಿಸಿರಲಿಲ್ಲ. ಬಂಕರ್‌ನೊಳಗಿದ್ದಾಗ ಬಾಂಬ್ ದಾಳಿಯ ಸದ್ದು ಕೇಳಿಸುತ್ತಿತ್ತು, ಹೆಲಿಕಾಪ್ಟರ್, ವಿಮಾನಗಳ ಹಾರಾಟವೂ ನಡೆಯುತ್ತಿತ್ತು. ಪ್ರಾಣ ಭೀತಿ ದಿನೇದಿನೆ ಹೆಚ್ಚಾಗಿ ಅಲ್ಲಿಂದ ಪಾರಾದರೆ ಸಾಕಿತ್ತು ಎನಿಸುತ್ತಿತ್ತು ಎಂದು ಶನಿವಾರ ಆಗಮಿಸಿದ ಬ್ರಹ್ಮಾವರದ ರೋಹನ್ ಧನಂಜಯ ಬಗ್ಲಿ ಅನುಭವ ಹಂಚಿಕೊಂಡರು.
ರಾಣೆಬೆನ್ನೂರಿನ ನವೀನ್ ನಮ್ಮೊಟ್ಟಿಗೇ ಇದ್ದ. ಅವನ ಸಾವು ಅನಿರೀಕ್ಷಿತ. ತಿಂಡಿಗಾಗಿ ಬಂಕರ್‌ನಿಂದ ನವೀನ್ ಹೊರಗೆ ಹೋದ ಸಮಯವೂ ಸರಿ ಇರಲಿಲ್ಲ. ನಿಜವಾಗಿ ಅಲ್ಲಿ ಏನಾಗಿದೆ ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲ. ಆಗ ನಾವು ರೈಲಿನಲ್ಲಿದ್ದೆವು. ಆತನ ಮೃತದೇಹವನ್ನು ಕೂಡಲೇ ಭಾರತಕ್ಕೆ ತರುವ ಕಾರ್ಯ ಸರಕಾರ ಮಾಡಬೇಕು ಎಂದು ಮನವಿ ಮಾಡಿದರು.
ಉಕ್ರೇನ್‌ನಲ್ಲಿ ಸೃಷ್ಟಿಯಾಗಿರುವ ಯುದ್ಧ ಭಯಾನಕ ಪರಿಸ್ಥಿತಿಯಿಂದ ಇಷ್ಟು ಬೇಗ ವಾಪಸಾಗುತ್ತೇನೆ ಎಂದು ಅಂದುಕೊಂಡಿರಲಿಲ್ಲ. ಖಾರ್ಕಿವ್‌ನಿಂದ ಪೋಲಂಡ್ ಗಡಿಯವರೆಗೂ ಹೋಗಲು ಸಾಕಷ್ಟು ಶ್ರಮ ಪಟ್ಟಿದ್ದೇವೆ. ಯುದ್ಧ ಭೂಮಿಯಲ್ಲಿ ರಾಯಭಾರಿ ಅಧಿಕಾರಿಗಳು ಸಹಾಯ ಮಾಡಬೇಕು ಎಂಬ ನಿರೀಕ್ಷೆಯೂ ಸರಿಯಲ್ಲ. ಆದರೆ ಪೊಲಂಡ್ ಗಡಿಯ ಅನಂತರ ರಾಯಭಾರಿ ಕಚೇರಿ ಅಧಿಕಾರಿಗಳಿಂದ ಸಾಕಷ್ಟು ಸಹಾಯವಾಗಿದೆ ಎಂದು ಹೇಳಿದರು.
ಜಿಲ್ಲಾಡಳಿತ ಭೇಟಿ
ರೋಹನ್ ಅವರ ತಂದೆ ಧನಂಜಯ ಬಗ್ಲಿ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದಲ್ಲಿ ಹಿರಿಯ ವಿಜ್ಞಾನಿಯಾಗಿದ್ದಾರೆ. ರೋಹನ್ ಶನಿವಾರ ಮನೆಗೆ ಆಗಮಿಸುತ್ತಿದ್ದಂತೆ ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ., ಎಡಿಸಿ ಸದಾಶಿವ ಪ್ರಭು ಅವರು ಡಾ| ಧನಂಜಯ ಅವರ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದರು.
ಅನಂತರ ಮಾತನಾಡಿದ ಮಾಧ್ಯಮದವರೊಂದಿಗೆ ಜಿಲ್ಲಾಧಿಕಾರಿ, ಜಿಲ್ಲೆಯ ಏಳು ವಿದ್ಯಾರ್ಥಿಗಳು ಉಕ್ರೇನ್‌ನಲ್ಲಿ ಸಿಲುಕಿದ್ದರು. ಅವರಲ್ಲಿ ಐವರು ತಾಯ್ನಾಡಿಗೆ ಬಂದಿದ್ದಾರೆ. ಉಳಿದಿರುವ ಇಬ್ಬರ ಪೈಕಿ ಓರ್ವ ವಿದ್ಯಾರ್ಥಿನಿ ಗಡಿಪ್ರದೇಶ ತಲುಪಿದ್ದಾರೆ. ಮತ್ತೋರ್ವ ವಿದ್ಯಾರ್ಥಿ ಖಾರ್ಕಿವ್ ಪಟ್ಟಣದ ಹೊರವಲಯದ ಸುರಕ್ಷಿತ ಸ್ಥಳದಲ್ಲಿ ಇದ್ದಾರೆ ಎಂದರು.