Advertisement

ವೈದ್ಯನಾಗಲು ಉಕ್ರೇನ್‌ಗೆ ತೆರಳಿದ್ದ ವಿದ್ಯಾರ್ಥಿ ತಿಂಗಳಲ್ಲೇ ವಾಪಾಸ್ : ಕಮರಿದ ಕನಸು

09:20 PM Mar 09, 2022 | Team Udayavani |

ಹುಣಸೂರು : ವೈದ್ಯನಾಗುವ ಕನಸು ಹೊತ್ತು ಫೆ. 11 ರಂದು ವಿದೇಶಕ್ಕೆ ಹಾರಿದ್ದ ವಿದ್ಯಾರ್ಥಿ ಡಿ.ರಕ್ಷಿತ್ ಆಚಾರ್ ಕನಸು ಕಮರಿತ್ತು. ಯುದ್ದ ಕಾರ್ಮೋಡ ಕವಿದು ಕೊನೆಗೂ ಸುರಕ್ಷಿತವಾಗಿ 24 ದಿನಗಳ ನಂತರ ವಾಪಾಸ್ಸಾಗಿದ್ದಾರೆ.

Advertisement

ಹುಣಸೂರು ತಾಲೂಕಿನ ಹನಗೋಡು ಹೋಬಳಿಯ ದೊಡ್ಡಹೆಜ್ಜೂರಿನ ಧರಣೇಶ್‌ರ ಪುತ್ರ ರಕ್ಷಿತ್ ಡಿ.ಆಚಾರ್ ಉಕ್ರೇನ್‌ನಲ್ಲಿ ಮೊದಲ ವರ್ಷದ ವೈದ್ಯ ವಿದ್ಯಾರ್ಥಿಯಾಗಿ ದಾಖಲಾದ 10 ದಿನಗಳ ಅಂತರದಲ್ಲೇ ಯುದ್ದದ ಘಟನಾವಳಿಗಳನ್ನು ಉದಯವಾಣಿಯೊಂದಿಗೆ ಎಳೆಎಳೆಯಾಗಿ ಬಿಟ್ಟಿಟ್ಟರು.

ನಾಗರಹೊಳೆ ಉದ್ಯಾನವನದಂಚಿನ ಹಳ್ಳಿಯಲ್ಲಿ ಹುಟ್ಟಿದ ನಾನು ಅಪ್ಪನ ಮಹದಾಸೆಯಂತೆ ವೈದ್ಯನಾಗುವ ಕನಸು ಕಟ್ಟಿಕೊಂಡು ಫೆ.11ರಂದು ತೆರಳಿ ಉಕ್ರೇನ್‌ನ ಕಾರ್ಕಿವ್ ಇಂಟರ್ ನ್ಯಾಷನಲ್ ಮೆಡಿಕಲ್ ಯೂನಿವರ್ಸಿಟಿಗೆ ಫೆ.13ರಂದು ದಾಖಲಾಗಿ. ಅಲ್ಲಿ ವಾರಕಾಲ ಕಾಲೇಜಿಗೆ ತೆರಳಿದ್ದೆ, ಅಧ್ಯಾಪಕರು ಹಾಗೂ ಸಹಪಾಠಿಗಳ ಪರಿಚಯ ಮಾಡಿಕೊಳ್ಳುವ ಮುನ್ನ, ನಾನಿದ್ದ ಕಾರ್ಕಿವ್ ನಗರ ಅರಿಯುವ ಮೊದಲೇ ಎದುರಾಗಿದ್ದು ರಷ್ಯಾದ ಯುದ್ದ ಘೋಷಣೆ.

ಯುದ್ದದ ಆತಂಕ:
ಅಲ್ಲಿ ಚಳಿ ಬೇರೆ, ಯುದ್ದದ ಕಾರ್ಮೋಡ ಆವರಿಸಿತು. ದೇಶಕ್ಕೆ ಮರುಳೋದು ಹೇಗೆಂಬ ಚಿಂತೆ ಕಾಡಿತು. ಇತ್ತ ಅಪ್ಪನ ಪೋನ್ ಕರೆಯ ದುಗುಡ ಕಂಡು ಆತಂಕ ಮನೆಮಾಡಿತು. ಅಪ್ಪ ಆಗಾಗ್ಗೆ ಕರೆ ಮಾಡಿ ವಿಚಾರಿಸುತ್ತಿದ್ದರು. ಹೊಸಬನಾಗಿದ್ದರಿಂದ ಊಟ-ತಿಂಡಿಗೆ ನೇನು, ವಾಪಾಸ್ ಹೋಗೋದು ಹೇಗೆಂದು ತೋಚದಾಯಿತು. ಭಾರತೀಯ ರಾಯಬಾರಿಯ ಕಚೇರಿಯ ಟೆಲಿಗ್ರಾಂ ಮಾಹಿತಿಗೆ ಕಾಯತೊಡಗಿದೆವು.

ಇದನ್ನೂ ಓದಿ : ಕಳ್ಳರ ಕೈಚಳಕ : ಎಂಟು ಲಕ್ಷ ರೂ. ದೋಚಿ ಪರಾರಿಯಾದ ಖದೀಮರು

Advertisement

8 ದಿನ ಬಂಕರ್‌ನಲ್ಲೇ ವಾಸ :
ಒಂದೆಡೆ ರಷ್ಯಾದ ಶೆಲ್‌ದಾಳಿ, ಗುಂಡಿನಸದ್ದು ಕೇಳುತ್ತಲೇ ಇತ್ತು. ಅಪಾರ ಚಳಿ ನಡುಗಿಸಿತ್ತು, ಕರ್ಫ್ಯೂ ಘೋಷಣೆಯಾಗಿ ಹಾಸ್ಟೆಲ್‌ನಬಂಕರ್‌ನಲ್ಲಿ ಸುಮಾರು 600 ವಿದ್ಯಾರ್ಥಿಗಳು ಆಶ್ರಯ ಕಲ್ಪಿಸಿದರು. ಕೆಲ ದಿನ ಎರಡು ಹೊತ್ತು ಊಟ ಮಾಡಿದರೆ, ಕೆಲದಿನ ಬ್ರೆಡ್-ಚಾಕೊಲೇಟ್, ನೀರೇ ನಮ್ಮ ಆಹಾರವಾಗಿತ್ತು. ಮುಂದೇನು ಎಂಬ ಭಯ ಆವರಿಸಿತ್ತು.

ತುಂಡುಬ್ರೆಡ್-ಸೂಪ್‌ನಲ್ಲೇ ಜೀವ ಉಳಿಸಿಕೊಂಡೆವು :
ಉಕ್ರೇನ್‌ನ ಹಾಗೂ ಭಾರತ ರಾಯಭಾರಕಚೇರಿಯಿಂದ ರುಮೇನಿಯಾ ಗಡಿಯತ್ತ ತೆರಳಲು ಬಂದ ಸೂಚನೆಯಂತೆ 10 ಕಿ.ಮೀ ದೂರದ ಪೊಲಿಕ್ವಿವಿಸ್ಕಾ ರೈಲ್ವೆ ಸ್ಟೇಷನ್‌ಗೆ ನಡೆದು ಬಂದೆವಾದರೂ ಅಲ್ಲಿ ರೈಲು ಹತ್ತಲು ಬಿಡಲಿಲ್ಲ. ಆದರೆ ಕೆಲ ಹೆಣ್ಣು ಮಕ್ಕಳಿಗೆ ಮಾತ್ರ ಅವಕಾಶಕೊಟ್ಟರು. ಕೊನೆಗೆ ರಾಯಭಾರಿ ಕಚೇರಿ ಸೂಚನೆಯಂತೆ 20ಕಿ.ಮೀ ದೂರದ ಪಿಸೋಚಿನ್ ಎಂಬ ಹಳ್ಳಿ ವರೆಗೆ 400 ಮಂದಿ ನಡೆದು ಸೇರಿಕೊಂಡ ವೇಳೆ ಅಲ್ಲಿನ ಹಳ್ಳಿ ಜನರು ಪ್ರೀತಿಯಿಂದ ಬರಮಾಡಿಕೊಂಡು ಊಟ-ತಿಂಡಿ ಕೊಟ್ಟು ಸಂತೈಸಿದ್ದನ್ನು ಮರೆಯುವಂತಿಲ್ಲ. ಇಲ್ಲಿದ್ದ ನಾಲ್ಕು ದಿನದಲ್ಲಿ ಎರಡು ದಿನ ಎರಡು ಪೀಸ್ ಬ್ರೆಡ್-ಸೂಪ್‌ನಲ್ಲೇ ಕಾಲ ಕಳೆದೆವು.

ರುಮೇನಿಕ್ಕೆ ಬಸ್‌ನಲ್ಲಿ ಪ್ರಯಾಣ :
ಪಿಸೋಚಿನ್‌ನಿಂದ ನೂರು ಮಂದಿ ತಲಾ 500 ಡಾಲರ್ ಹಣ ತೆತ್ತು ಬಸ್‌ಗಳಲ್ಲಿ ಹೊರಟರೆ, ನಂತರ ಉಳಿದ ನಾವೆಲ್ಲಾ ರಾಯಭಾರ ಕಚೇರಿಯಿಂದ ಉಚಿತವಾಗಿ ವ್ಯವಸ್ಥೆ ಮಾಡಿದ್ದ ಬಸ್‌ಗಳಲ್ಲಿ ರುಮೇನಿಯಾ ಗಡಿಯತ್ತ ಇಡೀದಿನ ಪಯಣಿಸಿ ಗಡಿ ಸೇರಿಕೊಂಡೆವಾದರೂ ಗಡಿಯಲ್ಲಿ ಸಾಕಷ್ಟು ಮಂದಿ ಜಮಾಯಿಸಿದ್ದರಿಂದ ಸುಮಾರು 8 ಗಂಟೆಗಳ ಕಾಲ ಕ್ಯೂನಲ್ಲಿ ನಿಂತು ವೀಸಾ-ಪಾಸ್‌ಪೋರ್ಟ್ ಚೆಕಪ್ ಆದ ನಂತರ ಗಡಿ ಪ್ರವೇಶಿಸಿದ ನಾವು ಅಂದೇ ರುಮೆನಿಯಾದ ಸಕ್ಟಿವಾ ಏರ್‌ಪೋರ್ಟ್ನಿಂದ  300 ಮಂದಿ ಭಾರತದತ್ತ ಪಯಣಿಸಿ, ಫೆ.8 ರಂದು ದೆಹಲಿ, ರಾತ್ರಿ ಬೆಂಗಳೂರಿನ ಏರ್‌ಪೋರ್ಟ್ನಲ್ಲಿ ಬಂದಿಳಿದಾಗ ನನ್ನನ್ನು ಬರಮಾಡಿಕೊಂಡ ಕುಟುಂಬದ ಅತ್ತೆಯನ್ನು ಕಂಡು ಹೋದ ಜೀವ ಬಂದಂತಾಯಿತು. ಜೀವ ಉಳಿಸಿಕೊಂಡು ಬಂದೆವಾದರೂ ನಮ್ಮ ಕನಸಿನ ವೈದ್ಯ ಶಿಕ್ಷಣದ ಗತಿಯೇನೆಂಬ ಆತಂಕಕಾಡುತ್ತಿದೆ ಎನ್ನುತ್ತಾನೆ. ರಕ್ಷಿತ್ ಡಿ.ಆಚಾರ್.

ವಿಮಾನನಿಲ್ದಾಣದಲ್ಲಿ ಅಣ್ಣನ ಮಗ ರಕ್ಷಿತ್‌ನನ್ನು ಕಂಡು ಕಣ್ತುಂಬಿ ಬಂತು. ಆದರೆ ಈತ ಮತ್ತೆ ಉಕ್ರೇನ್‌ಗೆ ಹೋಗಲಾಗಲ್ಲ ಎಂಬ ದುಗುಡವಿದೆ ಎನ್ನುತ್ತಾರೆ ರಕ್ಷಿತ್ ಸೋದರತ್ತೆಯರಾದ ಪಂಕಜೇಶ್ವರಿ, ಶೈಲಜೇಶ್ವರಿ.

ನಿದ್ದೆ-ಊಟ ಮಾಡಿಲ್ಲಾ:
ಮಗ ಡಾಕ್ಟರ್ ಆಗುತ್ತಾನೆಂದು ಸಾಲ ಮಾಡಿ ವಿದೇಶಕ್ಕೆ ಕಳುಹಿಸಿದ್ದೆ, ಹೋದವಾರದಲ್ಲೇ ಅಪಾಯಕ್ಕೆ ಸಿಲುಕಿದ. ಅಂದಿನಿಂದ ಊಟ-ನಿದ್ದೆ ಮಾಡಿಲ್ಲ. ಏನಾದರಾಗಲಿ ಮೊದಲು ಮಗ ವಾಪಾಸ್ ಬರಲೆಂದು ಕಾಯುತ್ತಿದ್ದೆ. ಸದ್ಯ ಸರಕಾರದ ನೆರವಿನಿಂದ ವಾಪಾಸ್ಸಾಗಿದ್ದು, ಮುಂದಿನ ಶಿಕ್ಷಣದ ಗತಿಏನು. ಇಲ್ಲಿನ ಸರಕಾರ ನೆರವಿಗೆ ಬರಲಿ ಎಂಬುದೇ ನಮ್ಮ ಸದಾಶಯ.

Advertisement

Udayavani is now on Telegram. Click here to join our channel and stay updated with the latest news.

Next