ರಬಕವಿ-ಬನಹಟ್ಟಿ: ಹತ್ತು ದಿನಗಳಿಂದ ಉಕ್ರೇನ ದೇಶದ ಯುದ್ಧ ಪೀಡಿತ ಸ್ಥಳಕ್ಕೆ ಅತ್ಯಂತ ಸಮೀಪದಲ್ಲಿದ್ದ ತಾಲ್ಲೂಕಿನ ನಾವಲಗಿ ಗ್ರಾಮದ ಕಿರಣ ಸವದಿ ಕೊನೆಗೂ ಶನಿವಾರ ಪಿಸೊಚ್ಚಿನ ಪ್ರದೇಶದಿಂದ ಪಶ್ಚಿಮಕ್ಕೆ ಇರುವ ಅಂದಾಜು 1007 ಕಿ.ಮೀ ದೂರದ ಲಿವಿವ್ ನಗರಕ್ಕೆ ಪ್ರಯಾಣಿಸಿದ್ದಾರೆ.
ಮೂರು ದಿನಗಳಿಂದ ಊಟ ಸಿಗದೆ ಸಂಕಷ್ಟದಲ್ಲಿದ್ದ ಕಿರಣ ಸವದಿ ಹಾಗೂ ಅಲ್ಲಿದ್ದ ನೂರಾರು ವಿದ್ಯಾರ್ಥಿಗಳಿಗೆ ಶನಿವಾರ ಬೆಳಗ್ಗೆ ಅನ್ನ ಸಾರು ನೀಡಲಾಗಿದೆ.
ಈಗ ಕಿರಣ ಸವದಿ ಸೇರಿದಂತೆ ನೂರಾರು ವಿದ್ಯಾರ್ಥಿಗಳು ನಾಲ್ಕಾರು ಬಸ್‍ಗಳ ಮೂಲಕ ಲಿವಿವ್ ನಗರಕ್ಕೆ ಪ್ರಯಾಣ ಬೆಳೆಸಿರುವ ಭಾವಚಿತ್ರಗಳನ್ನು ಪತ್ರಿಕೆಗೆ ಕಳುಹಿಸಿದ್ದಾರೆ.
ಪಿಸೊಚ್ಚಿನ ಪ್ರದೇಶದಿಂದ ಲಿವಿವ್ ನಗರವು ಅಂದಾಜು ಒಂದು 1007 ಕಿ.ಮೀ ದೂರದಲ್ಲಿದ್ದು, ಒಟ್ಟು ಹದಿನೈದು ಗಂಟೆಗಿಂತ ಹೆಚ್ಚಿನ ಪ್ರಯಾಣವಿದೆ ಎಂದು ಕಿರಣ ಸವದಿ ಪತ್ರಿಕೆಗೆ ಮೆಸೆಜ್ ಮಾಡುವುದರ ಮೂಲಕ ತಿಳಿಸಿದರು. ಅಲ್ಲಿಂದ ಬೇರೆ ದೇಶದ ಬಾರ್ಡರ್ ಪ್ರದೇಶಕ್ಕೆ ಹೋಗಬೇಕಾದರೆ ಮತ್ತೊಂದು ಬಸ್ ಬದಲಾವಣೆ ಮಾಡಬೇಕು ಮತ್ತು ಮತ್ತೆ ಏಳು ಗಂಟೆಗಳ ಪ್ರವಾಸವಿದೆ ಎಂದು ಕಿರಣ ಸವದಿ ತಿಳಿಸಿದರು.
ಇದನ್ನೂ ಓದಿ : ಪುಟಿನ್ ಗೆ ಹೇಳಿ ಯುದ್ಧ ನಿಲ್ಲಿಸಿ..: ಭಾರತಕ್ಕೆ ಮತ್ತೆ ಒತ್ತಾಯಿಸಿದ ಉಕ್ರೇನ್
ಸಂತೋಷದ ಕಣ್ಣೀರು ಹರಿಸಿದ ಹೆತ್ತವರು: ಮಗ ಕಿರಣ ಲಿವಿವ್ ಪ್ರದೇಶಕ್ಕೆ ಪ್ರಯಾಣ ಬೆಳೆಸಿದ ಸುದ್ದಿಯನ್ನು ಕೇಳಿದ ಕಿರಣ ತಂದೆ ಲಕ್ಷ್ಮಣ ಸವದಿ ಮತ್ತು ತಾಯಿ ಸಂತೋಷಗೊಂಡಿದ್ದು, ತಾಯಿ ಮತ್ತು ತಂದೆ ಸಂತೋಷದ ಕಣ್ಣೀರು ಹಾಕಿದರು. ಇವತ್ತು ರಾತ್ರಿ ನಾವು ಕೂಡಾ ಹೊಟ್ಟೆ ತುಂಬ ಊಟ ಮಾಡುತ್ತೇವೆ ಎಂದು ಕಿರಣ ತಂದೆ ತಿಳಿಸಿದರು.