ರಬಕವಿ ಬನಹಟ್ಟಿ: ಓಝೇಗ್ವಾ ರೈಲು ನಿಲ್ದಾಣದಿಂದ ಪಿಸೊಚ್ಚಿನ್ ನಗರವನ್ನು ಕಾಲ ನಡಿಗೆಯ ಮೂಲಕ ಹೋಗುವ ಸಂದರ್ಭದಲ್ಲಿ ಕೇವಲ 20 ಮೀಟರ್ ದೂರದಲ್ಲಿ ಬಾಂಬ್ ಸ್ಪೋಟಗೊಂಡಿತು. ಏಳು ಕಿ.ಮೀ ದೂರವನ್ನು ತಲುಪುವ ಸಂದರ್ಭದಲ್ಲಿ ಉಕ್ರೇನ್‌ದ ಮೂರು ಮಿಲಿಟರಿ ಬೇಸ್ ಕ್ಯಾಂಪ್‌ಗಳಿದ್ದವು. ಅಲ್ಲಿದ್ದ ಉಕ್ರೇನ್ ಸೈನಿಕರು ಭಾರತೀಯ ತ್ರಿವರ್ಣ ಧ್ವಜವನ್ನು ನೋಡಿ ನಮಗೆ ಆದಷ್ಟು ಬೇಗನೆ ಇಲ್ಲಿಂದ ಹೋಗಿ ಎಂದು ನಮಗೆ ಸಹಕರಿಸಿದರು ಎಂದು ತಾಲ್ಲೂಕಿನ ನಾವಲಗಿ ಗ್ರಾಮದ ಕಿರಣ ಸವದಿ ಪತ್ರಿಕೆ ಜೊತೆಗೆ ತಮ್ಮ ಅನುಭವವನ್ನು ಹಂಚಿಕೊಂಡರು.
ಉಕ್ರೇನ್‌ನಿಂದ ಬುಧವಾರ ರಾತ್ರಿ ಗ್ರಾಮಕ್ಕೆ ಆಗಮಿಸಿದ ಕಿರಣ ಸವದಿ ಅವರ ಮನೆಗೆ ಗುರುವಾರ ಪತ್ರಿಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದರು.
ಉಕ್ರೇನ್ ನಿಂದ ನಾವು ಉಳಿದುಕೊಂಡು ಬಂದಿರುವುದೇ ನಿಜಕ್ಕೂ ಅದ್ಭುತವಾದುದು. ಈ ಯುದ್ಧದ 12 ದಿನಗಳನ್ನು ಜೀವನದಲ್ಲಿ ಎಂದೂ ಮರೆಯಲು ಸಾಧ್ಯವಿಲ್ಲ. ಯುದ್ಧವನ್ನು ಅತ್ಯಂತ ಹತ್ತಿರದಿಂದ ಅನುಭವಿಸಿದ್ದೇವೆ. 6 ದಿನಗಳ ಕಾಲ ಹಾಸ್ಟೆಲ್ ಬಂಕರ್ ನಲ್ಲಿ ಕಾಲ ಕಳೆದೆವು. ಅದೊಂದು ನರಕಯಾತನೆಯಾಗಿತ್ತು. ಓಲೆಸ್ಕವಿಸ್ಕಾದಿಂದ ರುಮೇನಿಯಾ ಗಡಿ ಪ್ರದೇಶ ತಲುಪುವವರಿಗೆ ಬಹಳಷ್ಟು ಕಷ್ಟ ಅನುಭವಿಸಿದೆವು. ಮೂರು ದಿನಗಳ ಕಾಲ ಊಟಕ್ಕೆ ಏನು ಆಹಾರ ದೊರೆಯಲಿಲ್ಲ. ಒಂದು ದಿನ ತರಾಕಾರಿ ಸೂಪ್ ನೀಡಿದರು. ರುಮೇನಿಯಾ ಗಡಿ ಪ್ರದೇಶಕ್ಕೆ ಬಂದ ನಂತರ ಅಲ್ಲಿರುವ ಭಾರತೀಯ ರಾಯಭಾರಿಗಳು ನಮಗೆ ಬಹಳಷ್ಟು ಸಹಾಯ ಮಾಡಿದರು. ಪಿಸೊಚ್ಚಿನ್ ನಗರದಿಂದ ರುಮೇನಿಯಾ ಗಡಿ ಪ್ರದೇಶ ತಲುಪಲು ೪೦ ಗಂಟೆಗಳ ಕಾಲ ಸುಧೀರ್ಘ ಬಸ್ನಲ್ಲಿ ಪ್ರವಾಸ ಮಾಡಿದೆವು. ರುಮೇನಿಯಾದಿಂದ ಬೆಂಗಳೂರು ತಲುಪುವವರೆಗೆ ಭಾರತ ಸರ್ಕಾರ ನಮಗೆ ಬಹಳಷ್ಟು ಸಹಕಾರ ನೀಡಿತು ಯಾವುದೆ ಖರ್ಚು ಇಲ್ಲದೆ ನಮ್ಮನ್ನು ಮನೆಗೆ ತಲುಪಿಸುವಲ್ಲಿ ಬಹಳಷ್ಟು ಸಹಕಾರ ನೀಡಿದ್ದಾರೆ ಎಂದು ಸವದಿ ತಿಳಿಸಿದರು.
ಕಿರಣ ಮನೆಗೆ ತಲುಪಿದ ನಂತರ ಮನೆಯಲ್ಲಿ ಹಬ್ಬದ ವಾತಾವರಣ ಉಂಟಾಗಿದೆ. ತಂದೆ ಲಕ್ಷ್ಮಣ ತಾಯಿ ಮಹಾದೇವಿ ಹಾಗೂ ಸಂಬಂಧಿಕರೂ ಮಗನಿಗಿ ಸಿಹಿ ತಿನಿಸಿ ಸಂಭ್ರಮಿಸಿದರು.