Advertisement
ಭಾನುವಾರ ಉಕ್ರೇನ್‌ನ ಎರಡನೇ ಅತ್ಯಂತ ದೊಡ್ಡ ನಗರ ಖಾರ್ಕಿವ್ ವಶಪಡಿಸಲು ಘೋರ ಹೋರಾಟವೇ ನಡೆದಿದೆ. ನಗರದ ಪ್ರಾದೇಶಿಕ ಅಧಿಕಾರಿ ಒಲೇಹ್ ಸೆನುØಬೋವ್ ಮಾತನಾಡಿ ರಷ್ಯಾ ಸೈನಿಕರ ದಾಳಿಯನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಲಾಗಿದೆ. ಹಲವಾರು ಮಂದಿ ರಷ್ಯಾ ಸೈನಿಕರನ್ನು ಸೆರೆ ಹಿಡಿಯಲಾಗಿದೆ ಮತ್ತು ಕೆಲವರು ಶರಣಾಗತರಾಗಿದ್ದಾರೆ ಎಂದು ಹೇಳಿದ್ದಾರೆ. ಎರಡೂ ಸೇನೆಗಳ ನಡುವೆ ಕದನದಿಂದಾಗಿ ವೃದ್ಧೆ ಅಸುನೀಗಿದ್ದಾರೆ.
Related Articles
Advertisement
ತೈಲ ಸ್ಥಾವರ, ಪೈಪ್‌ಲೈನ್ ಸ್ಫೋಟ:ಬಿರುಸಿನ ಹೋರಾಟ ನಡೆಯುತ್ತಿದ್ದಂತೆಯೇ ಆ ನಗರಕ್ಕೆ ಅನಿಲ ಪೂರೈಕೆ ಮಾಡುವ ಪೈಪ್‌ಲೈನ್ ಅನ್ನು ಸ್ಫೋಟಿಸಲಾಗಿದೆ. ರಷ್ಯಾ ಯೋಧರು ಈ ಕೃತ್ಯವೆಸಗಿದ್ದಾರೆ. ಇದರಿಂದಾಗಿ ಖಾರ್ಕಿವ್ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಿಗೆ ಪ್ರತಿಕೂಲ ಪರಿಣಾಮ ಉಂಟು ಮಾಡಲಿದೆ ಎಂದು ಎಚ್ಚರಿಕೆ ನೀಡಲಾಗಿದೆ. ಮತ್ತೊಂದೆಡೆ, ರಾಜಧಾನಿ ಕೀವ್‌ನ ವಿಮಾನ ನಿಲ್ದಾಣದ ಸಮೀಪದಲ್ಲಿರುವ ವ್ಯಾಸಿಲ್‌ಕೀವ್ ಎಂಬಲ್ಲಿರುವ ತೈಲ ಸ್ಥಾವರದ ಮೇಲೆ ಕೂಡ ಕ್ಷಿಪಣಿ ದಾಳಿ ನಡೆಸಲಾಗಿದೆ. ಇದರಿಂದಾಗಿ ಭಾರೀ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ರಷ್ಯಾಕ್ಕೆ “ಸ್ವಿಫ್ಟ್ ಹೊಡೆತ’
ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾ ವಿರುದ್ಧ ಮುಗಿ ಬಿದ್ದಿರುವ ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳು, ಆ ದೇಶದ ಅರ್ಥವ್ಯವಸ್ಥೆಗೆ ಮರ್ಮಾಘಾತ ನೀಡುವ ಯೋಜನೆ ರೂಪಿಸಿವೆ. ಅಂತಾರಾಷ್ಟ್ರೀಯ ಹಣಕಾಸು ಒಕ್ಕೂಟ ವ್ಯವಸ್ಥೆ, “ಸ್ವಿಫ್ಟ್’ ನಿಂದ ರಷ್ಯಾದ ಕೆಲವು ಬ್ಯಾಂಕ್‌ಗಳಿಗೆ ನಿಷೇಧ ಹೇರಲಾಗಿದೆ. ಇದರಿಂದಾಗಿ ರಷ್ಯಾದ ಕಂಪನಿಗಳಿಗೆ ಮತ್ತು ಶ್ರೀಮಂತರಿಗೆ ವಿದೇಶಗಳಲ್ಲಿ ವ್ಯಾಪಾರ ಮತ್ತು ವಾಣಿಜ್ಯಿಕ ವಹಿವಾಟು ನಡೆಸುವುದಕ್ಕೆ ಭಾರೀ ಪ್ರಮಾಣದಲ್ಲಿ ಅಡ್ಡಿ ಉಂಟಾಗಲಿದೆ. ಅಂತಾರಾಷ್ಟ್ರೀಯ ಕೋರ್ಟ್‌ಗೆ
ದೇಶದ ಮೇಲೆ ದಾಳಿ ನಡೆಸಿ ರಷ್ಯಾ ಸೇನೆ ನರಹತ್ಯೆ ಎಸಗಿದೆ ಎಂದು ಉಕ್ರೇನ್ ಆರೋಪಿಸಿ, ದ ಹೇಗ್‌ನಲ್ಲಿರುವ ಅಂತಾರಾಷ್ಟ್ರೀಯ ಕೋರ್ಟ್‌ಗೆ ದೂರು ನೀಡಿದೆ. ತಕ್ಷಣವೇ ಸೇನಾ ಕಾರ್ಯಾಚರಣೆ ಸ್ಥಗಿತಗೊಳಿಸುವಂತೆ ಆದೇಶ ನೀಡಬೇಕು ಎಂದು ಝೆಲೆನ್ಸ್ಕಿ ಒತ್ತಾಯಿಸಿದ್ದಾರೆ. 688 ಮಂದಿ ವಿದ್ಯಾರ್ಥಿಗಳ ಆಗಮನ
ಉಕ್ರೇನ್‌ನಲ್ಲಿ ಅತಂತ್ರರಾಗಿರುವ 13 ಸಾವಿರ ವಿದ್ಯಾರ್ಥಿಗಳ ಪೈಕಿ ಭಾನುವಾರ 688 ಮಂದಿ ವಿದ್ಯಾರ್ಥಿಗಳು ಸ್ವದೇಶಕ್ಕೆ ವಾಪಸಾಗಿದ್ದಾರೆ. “ಆಪರೇಷನ್ ಗಂಗಾ’ದ ಅನ್ವಯ ರೊಮೇನಿಯಾ ರಾಜಧಾನಿ ಬುಕಾರೆಸ್ಟ್‌ನಿಂದ, ಹಂಗೇರಿ ರಾಜಧಾನಿ ಬುಡಾಫೆಸ್ಟ್‌ನಿಂದ ಏರ್ ಇಂಡಿಯಾದ ಮೂರು ವಿಮಾನಗಳಲ್ಲಿ ಮರಳಿದ್ದಾರೆ. ಇದುವರೆಗೆ ಒಟ್ಟು 907 ಮಂದಿ ವಿದ್ಯಾರ್ಥಿಗಳು ದೇಶಕ್ಕೆ ಆಗಮಿಸಿದಂತಾಗಿದೆ. ಶನಿವಾರ ಮೊದಲ ವಿಮಾನ ಮುಂಬೈಗೆ ಆಗಮಿಸಿತ್ತು. ಸಮರಾಂಗಣದಲ್ಲಿ
4,300- ಹತರಾಗಿರುವ ರಷ್ಯಾ ಯೋಧರು
146- ಯುದ್ಧಟ್ಯಾಂಕ್‌ಗಳು
27- ವಿಮಾನಗಳು
26- ಹೆಲಿಕಾಪ್ಟರ್‌ಗಳು
3,68,000- ಉಕ್ರೇನ್ ನಿರಾಶ್ರಿತರು
1,50,000- ಪೋಲೆಂಡ್ ಒಂದಕ್ಕೇ ತೆರಳಿದ ಉಕ್ರೇನ್ ನಿರಾಶ್ರಿತರು
240- ಅಸುನೀಗಿರುವ ಉಕ್ರೇನ್ ನಾಗರಿಕರು ಅಣ್ವಸ್ತ್ರ ಪ್ರಯೋಗಿಸುವರೇ ಪುಟಿನ್?
ಮತ್ತೊಂದು ಹಿರೋಶಿಮಾ ಮತ್ತು ನಾಗಸಾಕಿ ದುರಂತ ಸಂಭವಿಸಲಿದೆಯೋ? ಹೀಗೊಂದು ಆತಂಕ ಜಗತ್ತಿಗೆ ಕಾಡಲಾರಂಭಿಸಿದೆ. ಉಕ್ರೇನ್ ವಿರುದ್ಧದ ಕಾಳಗದಲ್ಲಿ ತಮ್ಮ ದೇಶದ ಅಣ್ವಸ್ತ್ರ ಪಡೆಯನ್ನು ಸನ್ನದ್ಧ ಸ್ಥಿತಿಯಲ್ಲಿ ಇರುವಂತೆ ಭಾನುವಾರ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿರುವುದೇ ಈ ಬೆಳವಣಿಗೆಗೆ ಕಾರಣ. ಮಾಸ್ಕೋದಲ್ಲಿ ಸೇನೆಯ ಹಿರಿಯ ಅಧಿಕಾರಿಗಳ ಜತೆಗೆ ಸಭೆ ನಡೆಸಿ ಮಾತನಾಡಿದ ಪುಟಿನ್, ಯಾವುದೇ ಪರಿಸ್ಥಿತಿಯನ್ನು ಎದುರಿಸಲೂ ಅಣ್ವಸ್ತ್ರ ಪಡೆಗಳು ಸಿದ್ಧರಾಗಿರಬೇಕು. ಅದಕ್ಕಾಗಿ ಆ ಪಡೆಯ ಮುಖ್ಯಸ್ಥರು ಸದಾ ಸಿದ್ಧತೆಯಲ್ಲಿರಬೇಕು ಎಂದು ಆದೇಶ ನೀಡಿದ್ದಾರೆ. ಇದರ ಜತೆಗೆ ನ್ಯಾಟೋ ರಾಷ್ಟ್ರಗಳು ಪ್ರಚೋದನಾತ್ಮಕ ಹೇಳಿಕೆ ನೀಡುತ್ತಿದ್ದಾರೆ ಎಂದು ಪುಟಿನ್ ಸಭೆಯಲ್ಲಿ ಆರೋಪಿಸಿದ್ದಾರೆ. ಜತೆಗೆ ದೇಶದ ವಿರುದ್ಧ ಆರ್ಥಿಕ ದಿಗ್ಬಂಧನಗಳನ್ನು ವಿಧಿಸುತ್ತಿದ್ದಾರೆ ಎಂದರು. ಪುಟಿನ್ ಹೇಳಿಕೆ ಹಿನ್ನೆಲೆಯಲ್ಲಿ ಬುಧವಾರ ಮಹತ್ವದ ಸಭೆ ನಡೆಯಲಿದೆ.