Advertisement

ಚಂಪಾಷಷ್ಠಿ ಮಹೋತ್ಸವಕ್ಕೆ ಕುಕ್ಕೆ ಸುಬ್ರಹ್ಮಣ್ಯ ಸಜ್ಜು

11:40 PM Nov 28, 2019 | mahesh |

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿ ಡಿ. 1 ಮತ್ತು 2ರಂದು ನಡೆಯುವ ವಾರ್ಷಿಕ ಜಾತ್ರೆ ಚಂಪಾಷಷ್ಠಿ ಮಹೋತ್ಸವಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿವೆ. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌ ಸಿದ್ಧತೆಗಳನ್ನು ಪರಿಶೀಲಿಸಿ ಮಾರ್ಗದರ್ಶನಗಳನ್ನು ನೀಡಿದರೆ, ಕ್ಷೇತ್ರದ ಆಡಳಿತಾಧಿಕಾರಿಯೂ ಆಗಿರುವ ಅಪರ ಜಿಲ್ಲಾಧಿಕಾರಿ ರೂಪಾ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.

Advertisement

ಸಂಬಂಧಿಸಿದ ಎಲ್ಲ ಇಲಾಖೆಗಳೂ ಪೂರ್ವ ಸಿದ್ಧತೆಗಳನ್ನು ಮಾಡಿಕೊಂಡಿವೆ. ಕುಮಾರಧಾರೆಯಿಂದ ದೇವಸ್ಥಾನದ ತನಕ ಬೀದಿ ಮಡೆಸ್ನಾನ (ಉರುಳು ಸೇವೆ) ಆರಂಭಗೊಂಡಿದ್ದು. ಬೆಳಗ್ಗೆ ಮತ್ತು ಸಂಜೆ ಭಕ್ತರು ಹರಕೆ ಪೂರೈಸುತ್ತಿದ್ದಾರೆ. ಸೇವಾರ್ಥಿಗಳ ಸುರಕ್ಷೆಗಾಗಿ ಅಲ್ಲಲ್ಲಿ ಸೂಚನ ಫಲಕಗಳನ್ನು ಅಳವಡಿಸುವ ಮೂಲಕ ವಾಹನಗಳನ್ನು ನಿಧಾನವಾಗಿ ಎಚ್ಚರದಿಂದ ಚಲಾಯಿಸುವಂತೆ ಸೂಚಿಸಲಾಗಿದೆ. ರಾತ್ರಿ ಹೊತ್ತು ಬೀದಿಗಳಲ್ಲಿ ಹ್ಯಾಲೋಜಿನ್‌ ದೀಪ ವ್ಯವಸ್ಥೆ ಕಲ್ಪಿಸಲಾಗಿದೆ. ಹೆಚ್ಚುವರಿ, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ಭೋಜನ ವ್ಯವಸ್ಥೆ, ಸ್ವಯಂಸೇವಕರು ಇತ್ಯಾದಿ ಎಲ್ಲ ವ್ಯವಸ್ಥೆಗಳು ಪೂರ್ಣಗೊಂಡಿವೆ.

ಬೀದಿ ಮಡೆಸ್ನಾನ ನಡೆಸುವ ವೇಳೆ ಭಕ್ತರಿಗೆ ತೊಂದರೆಯಾಗದಂತೆ ಎಚ್ಚರ ವಹಿಸಲು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌ ಸೂಚಿಸಿದ್ದಾರೆ.

ರಿಕ್ಷಾ ಚಾಲಕರಿಗೆ ಮನವಿ
ಪಾದಚಾರಿಗಳಿಗೆ ಮತ್ತು ಉರುಳು ಸೇವೆ ಸಲ್ಲಿಸುವವರಿಗೆ ಅನುಕೂಲವಾಗಲು ಅಟೋ ರಿಕ್ಷಾಗಳು ನಗರದೊಳಗಡೆ ಬಾಡಿಗೆ ನಡೆಸದೆ ಸಹಕರಿಸುವಂತೆ ಸುಬ್ರಹ್ಮಣ್ಯ ಪಿಎಸ್‌ಐ ಓಮನ ಮನವಿ ಮಾಡಿದ್ದಾರೆ.

ಬಿಗಿ ಭದ್ರತೆ
ಭದ್ರತೆಗಾಗಿ ದೇವಸ್ಥಾನದ ಒಳ ಹೊರಗೆ ಈಗಾಗಲೇ 90 ಕೆಮರಾಗಳಿದ್ದು, ಹೆಚ್ಚುವರಿ ಯಾಗಿ 67 ಕೆಮರಾಗಳನ್ನು ಅಳವಡಿಸಲಾಗುತ್ತಿದೆ. ಕುಮಾರಧಾರೆಯ ಬಳಿ ಪೊಲೀಸ್‌ ಇಲಾಖೆ ಸಿಸಿ ಕೆಮರಾಗಳನ್ನು ಅಳವಡಿಸಿದೆ. ಹೆಚ್ಚುವರಿ ಪೊಲೀಸರನ್ನು ನಿಯೋ ಜಿಸಲು ಸೂಚಿಸಲಾಗಿದೆ.

Advertisement

ಪಾರ್ಕಿಂಗ್‌ ಸೌಲಭ್ಯ; ಉಚಿತ ಬಸ್‌
ಪಂಜ, ಕಡಬ ಧರ್ಮಸ್ಥಳ, ಗುಂಡ್ಯ ಮಾರ್ಗವಾಗಿ ಮತ್ತು ಧರ್ಮಸ್ಥಳ ಮಾರ್ಗವಾಗಿ ಬರುವ ಬಸ್‌ಗಳಿಗೆ ಕುಮಾರಧಾರೆಯ ಬಳಿ ನಿಲುಗಡೆಗೆ ವ್ಯವಸ್ಥೆ ಮಾಡಿದ್ದು ಅಲ್ಲಿಂದ ದೇವಸ್ಥಾನದ ವರೆಗೆ ಉಚಿತ ಬಸ್‌ ಇರುತ್ತದೆ. ಲಘು ವಾಹನಗಳಿಗೆ ಕುಮಾರಧಾರಾ ಹೆಲಿಪ್ಯಾಡ್‌ ಮೈದಾನ, ಜೂ. ಕಾಲೇಜು ಮೈದಾನದಲ್ಲಿ, ದ್ವಿಚಕ್ರ ವಾಹನಗಳಿಗೆ ಸೀನಿಯರ್‌ ಕಾಲೇಜು, ಪೊಲೀಸ್‌ ಕವಾಯತು ಮೈದಾನದಲ್ಲಿ, ಸುಳ್ಯ ಕಡೆಯಿಂದ ಬರುವ ಬಸ್‌ಗಳಿಗೆ ಸವಾರಿ ಮಂಟಪದ ಬಳಿ ಮತ್ತು ಇತರ ಲಘು ವಾಹನಗಳಿಗೆ ಇಂಜಾಡಿ ಬಳಿ ನಿಲುಗಡೆ ವ್ಯವಸ್ಥೆ ಕಲ್ಪಿಸಲಾಗಿದೆ.

ಜಾತ್ರೆಯ ಯಶಸ್ವಿ ನಿರ್ವಹಣೆಗೆ ಸರ್ವ ಸಿದ್ಧತೆಗಳಾಗಿವೆ. ಭಕ್ತರ ಅನುಕೂಲತೆಗೆ ಆದ್ಯತೆ ನೀಡಿದ್ದೇವೆ. ವಿವಿಧ ಇಲಾಖೆಗಳ ಜತೆಗೆ ಸಾರ್ವಜನಿಕರ ಸಹಕಾರವೂ ಅಗತ್ಯ.
– ರೂಪಾ, ಅಪರ ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next