Advertisement
ಪ್ರಸಾದ್ ವಿರುದ್ಧ ಮತ್ತೆ ರಾಹುಲ್ ಕಿಡಿ: ಏತನ್ಮಧ್ಯೆ, ಕೇಂಬ್ರಿಡ್ಜ್ ಅನಾಲಿಟಿಕಾ ಜತೆ ತಮ್ಮ ನಂಟಿದೆಯೆಂದು ಆರೋಪಿಸಿದ್ದ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ವಿರುದ್ಧ ಪುನಃ ಕಿಡಿ ಕಾರಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಪ್ರಸಾದ್ ಅವರು ತಮ್ಮ ಇಲಾಖೆಯ ಲೋಪ ದೋಷಗಳನ್ನು ಮೊದಲು ತಿದ್ದಿಕೊಳ್ಳಲಿ ಎಂದಿದ್ದಾರೆ. ನ್ಯಾಯಾಧೀಶರ ಕೊರತೆಯಿಂದಾಗಿ ಸುಪ್ರೀಂ ಕೋರ್ಟ್ ಸೇರಿದಂತೆ ದೇಶದ ನಾನಾ ನ್ಯಾಯಾಲಯಗಳಲ್ಲಿ ಸಾವಿರಾರು ಪ್ರಕರಣಗಳು ಇತ್ಯರ್ಥವಾಗದೇ ವರ್ಷಗಳಿಂದ ಉಳಿದಿದ್ದು, ಸಚಿವರು ಇಂಥ ಗಂಭೀರ ವಿಚಾರಗಳನ್ನು ಮೊದಲು ಸರಿಪಡಿಸಲಿ ಎಂದು ಟೀಕಿಸಿದ್ದಾರೆ.
ಹೆಸರಾಂತ ಆಟೋ ಮೊಬೈಲ್ ಸಂಸ್ಥೆ “ಟೆಸ್ಲಾ’ ಹಾಗೂ ಖಾಸಗಿ ರಾಕೆಟ್ ತಯಾರಿಕಾ ಸಂಸ್ಥೆ “ಸ್ಪೇಸ್ ಎಕ್ಸ್’ ಕಂಪೆನಿಗಳ ಮಾಲೀಕ, ಬಿಲಿಯನೇರ್ ಉದ್ಯಮಿ ಎಲಾನ್ ಮಸ್ಕ್ ತಮ್ಮ ಕಂಪೆನಿಗಳ ಫೇಸ್‌ಬುಕ್ ಪುಟಗಳನ್ನು ರದ್ದು ಮಾಡಿದ್ದಾರೆ. ಅನಾಲಿಟಿಕಾ ಹಗರಣ ಬಯಲಾದ ಬೆನ್ನಲ್ಲೇ, ತಮ್ಮ ಕಂಪೆನಿಗಳ ಅಧಿಕೃತ ಫೇಸ್‌ಬುಕ್ ಪುಟ ರದ್ದು ಪಡಿಸಲು ಯಾರಾದರೂ ಕೋರಿದರೆ ಅದನ್ನು ಸಾಕಾರಗೊಳಿ ಸುವುದಾಗಿ ಹೇಳಿದ್ದರು. ಇತ್ತೀಚೆಗೆ, ವ್ಯಕ್ತಿ ಯೊಬ್ಬ ಪುಟ ರದ್ದುಗೊಳಿಸುವಂತೆ ಮಸ್ಕ್ಗೆ ಟ್ವೀಟ್ ಮಾಡಿದ್ದ. ಹಾಗಾಗಿ, ಕೊಟ್ಟ ಮಾತಿನಂತೆ ಈ ಪುಟಗಳನ್ನು ರದ್ದು ಮಾಡಿದ್ದಾರೆ ಮಸ್ಕ್. ಇದರಿಂದ ಸುಮಾರು 50 ಲಕ್ಷ ಫಾಲೋವರ್‌ಗಳನ್ನು ಅವರು ಕಳೆದುಕೊಂಡಿದ್ದಾರೆ. 28 ಲಕ್ಷ ಕೋಟಿ ನಷ್ಟ: ಕೇಂಬ್ರಿಡ್ಜ್ ಅನಾಲಿಟಿಕಾದಿಂದಾಗಿ, ಫೇಸ್‌ಬುಕ್ ಸಮೂಹ ಸಂಸ್ಥೆಗಳಿಗೆ ಕಳೆದೊಂದು ವಾರದಿಂದ ಈವರೆಗೆ ಜಾಗತಿಕ ಷೇರು ಮಾರುಕಟ್ಟೆಯಲ್ಲಿ ಬರೋಬ್ಬರಿ 28.33 ಲಕ್ಷ ಕೋಟಿ ರೂ. ನಷ್ಟವಾಗಿದೆ ಎಂದು ಮೂಲಗಳು ತಿಳಿಸಿವೆ.