ಕೇಂದ್ರ ಸರಕಾರ ಉಜ್ವಲ ಯೋಜನೆಯಡಿ ಅಡುಗೆ ಅನಿಲ ಸಂಪರ್ಕ ಪಡೆದ ಫಲಾನುಭವಿಗಳಿಗೆ ನೀಡುತ್ತಿರುವ ಎಲ್‌ಪಿಜಿ ಸಿಲಿಂಡರ್ ಮೇಲಣ ಸಬ್ಸಿಡಿಯನ್ನು 300 ರೂ.ಗಳಿಗೆ ಹೆಚ್ಚಿಸಿದೆ. ಈ ವರ್ಷಾಂತ್ಯದಲ್ಲಿ ದೇಶದ ಐದು ರಾಜ್ಯಗಳ ವಿಧಾನಸಭೆಗಳಿಗೆ ಚುನಾವಣೆ ನಡೆಯಲಿದ್ದು, ಚುನಾವಣ ವೇಳಾಪಟ್ಟಿ ಘೋಷಣೆಗೆ ದಿನಗಣನೆ ಆರಂಭಗೊಂಡಿರುವಂತೆಯೇ ಕೇಂದ್ರ ಸರಕಾರದಿಂದ ಈ ಮಹತ್ತರ ನಿರ್ಧಾರ ಹೊರಬಿದ್ದಿದೆ.
ಬಡ ಮತ್ತು ಗುಡ್ಡಗಾಡು ಪ್ರದೇಶಗಳ ಕುಟುಂಬಗಳಿಗಾಗಿಯೇ ಸರಕಾರ ಉಜ್ವಲ ಯೋಜನೆಯಡಿ ಅಡುಗೆ ಅನಿಲ ಸಂಪರ್ಕವನ್ನು ಒದಗಿಸುವ ಯೋಜನೆಯನ್ನು ಜಾರಿಗೊಳಿಸಿತ್ತು. ಈ ಯೋಜನೆಯ ಫಲಾನುಭವಿಗಳಿಗೆ ಸರಕಾರ ಪ್ರತೀ ವರ್ಷ 12 ಎಲ್‌ಪಿಜಿ ಸಿಲಿಂಡರ್‌ಗಳನ್ನು ಸಬ್ಸಿಡಿ ಬೆಲೆಯಲ್ಲಿ ನೀಡುತ್ತಿದೆ. ಆಗಸ್ಟ್ ಅಂತ್ಯದಲ್ಲಿ ಕೇಂದ್ರ ಸರಕಾರ ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ 200 ರೂ. ಕಡಿತ ಮಾಡಿದ ಪರಿಣಾಮ 14.2 ಕೆ.ಜಿ. ಸಿಲಿಂಡರ್ ಬೆಲೆ 903 ರೂ.ಗಳಿಗೆ ಇಳಿಕೆಯಾಗಿತ್ತು. ಇದೇ ವೇಳೆ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಸಬ್ಸಿಡಿ ಸಹಿತ ಎಲ್‌ಪಿಜಿ ಸಿಲಿಂಡರ್ ಬೆಲೆ 703 ರೂ.ಗಳಿಗೆ ಕಡಿಮೆಯಾಗಿತ್ತು. ಈಗ ಮತ್ತೆ ಸರಕಾರ ಸಬ್ಸಿಡಿಯನ್ನು 100 ರೂ.ಗಳಷ್ಟು ಹೆಚ್ಚಿಸಿರುವುದರಿಂದ ಸಬ್ಸಿಡಿ ಸಹಿತ ಎಲ್‌ಪಿಜಿ ಸಿಲಿಂಡರ್ ಬೆಲೆ 603 ರೂ.ಗಳಿಗೆ ಇಳಿಕೆಯಾಗಿದೆ. ಸರಕಾರದ ಈ ನಿರ್ಧಾರದಿಂದ ದೇಶಾದ್ಯಂತದ 9.6 ಕೋಟಿ ಬಡ ಕುಟುಂಬಗಳಿಗೆ ಪ್ರಯೋಜನವಾಗಲಿದೆ.
ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಜನಸಾಮಾನ್ಯರಿಗೆ ಎಲ್‌ಪಿಜಿ ಬೆಲೆಯಲ್ಲಿನ ಭಾರೀ ಹೆಚ್ಚಳ ಬಲುದೊಡ್ಡ ಹೊರೆಯಾಗಿ ಪರಿಣಮಿಸಿತ್ತು. ಈ ಸಂಬಂಧ ವಿಪಕ್ಷಗಳಾದಿಯಾಗಿ ದೇಶಾದ್ಯಂತ ಜನರಿಂದ ಆಕ್ರೋಶ ವ್ಯಕ್ತವಾದಾಗ ಎಚ್ಚೆತ್ತ ಸರಕಾರ ಆಗಸ್ಟ್ ತಿಂಗಳ ಕೊನೆಯಲ್ಲಿ ಎಲ್‌ಪಿಜಿ ಸಬ್ಸಿಡಿಯನ್ನು ಪುನರಾರಂಭಿಸುವುದಾಗಿ ಘೋಷಿಸುವ ಮೂಲಕ ಜನರನ್ನು ಸಮಾಧಾನಿಸುವ ಪ್ರಯತ್ನ ನಡೆಸಿತ್ತು. ಈಗ ಮತ್ತೆ ಸಬ್ಸಿಡಿ ಮೊತ್ತವನ್ನು 100 ರೂ. ಹೆಚ್ಚಿಸುವ ಮೂಲಕ ಜನರನ್ನು ತನ್ನತ್ತ ಸೆಳೆಯುವ ಪ್ರಯತ್ನಕ್ಕೆ ಕೇಂದ್ರ ಸರಕಾರ ಮುಂದಾಗಿದೆ. ನಿರೀಕ್ಷೆಯಂತೆಯೇ ಸರಕಾರದ ವಿರುದ್ಧ ಹರಿಹಾಯ್ದಿರುವ ವಿಪಕ್ಷಗಳು, ಚುನಾವಣೆ ಸಮೀಪಿಸಿದಾಗ ಸರಕಾರಕ್ಕೆ ಬಡಜನರ ನೆನಪಾಗತೊಡಗಿದೆ ಎಂದು ಟೀಕಿಸಿವೆ.
ಈ ವರ್ಷಾಂತ್ಯದಲ್ಲಿ ನಡೆಯಲಿರುವ ದೇಶದ ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯ ಸೆಮಿಫೈನಲ್ ಹಣಾಹಣಿ ಎಂದೇ ಬಿಂಬಿತವಾಗಿದೆ. ವಿಧಾನಸಭೆ ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ ವಿಪಕ್ಷಗಳು ತಾವು ಅಧಿಕಾರಕ್ಕೇರಿದಲ್ಲಿ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು 500 ರೂ.ಗಳಿಗೆ ಸೀಮಿತಗೊಳಿಸುವ ವಾಗ್ಧಾನವನ್ನೂ ನೀಡಿವೆ. ಈ ಎಲ್ಲ ಬೆಳವಣಿಗೆಗಳ ನಡುವೆಯೇ ಕೇಂದ್ರ ಸರಕಾರ ಉಜ್ವಲ ಫಲಾನುಭವಿಗಳ ಎಲ್‌ಪಿಜಿ ಸಿಲಿಂಡರ್ ಮೇಲಿನ ಸಬ್ಸಿಡಿ ಮೊತ್ತವನ್ನು ಹೆಚ್ಚಿಸಿದೆ. ರಾಜಕೀಯ ಪಕ್ಷಗಳ ತಂತ್ರಗಾರಿಕೆಗಳೇನೇ ಇರಲಿ, ಕೇಂದ್ರ ಸರಕಾರದ ಈ ನಿರ್ಧಾರದಿಂದ ಬಡ ಜನಸಾಮಾನ್ಯರಿಗೆ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ಇಳಿಕೆಯಿಂದ ಬಹಳಷ್ಟು ಪ್ರಯೋಜನವಾಗಲಿದೆ. ಚುನಾವಣೆಯ ನೆಪದಲ್ಲಾದರೂ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಇಳಿಕೆ ಮಾಡಿರುವುದು ಮುಂಬರುವ ಹಬ್ಬಗಳ ಋತುವಿಗೆ ಕೇಂದ್ರ ಸರಕಾರ ಬಡಜನರಿಗೆ ನೀಡಿದ ಕೊಡುಗೆಯೇ ಸರಿ. ಹಾಗೆಯೇ, ಅರಿಶಿನ ಬೆಳೆಗಾರರ ಹಿತಾಸಕ್ತಿಗಾಗಿ ಬಹುದಿನಗಳ ಬೇಡಿಕೆಯಾದ ಅರಿಸಿನ ಮಂಡಳಿಯನ್ನು ರಚಿಸಿರುವುದೂ ಸ್ವಾಗತಾರ್ಹವೇ ಆಗಿದೆ.