ಬೆಂಗಳೂರು: ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಲಿಮಿಟೆಡ್, 2024-25ನೇ ಹಣಕಾಸು ವರ್ಷದ ಸೆಪ್ಟೆಂಬರ್ 30ಕ್ಕೆ ಕೊನೆಗೊಂಡ 2ನೇ ತ್ರೈಮಾಸಿಕದ ತನ್ನ ಹಣಕಾಸು ಸಾಧನೆ ಪ್ರಕಟಿಸಿದ್ದು, 461 ಕೋಟಿ ರೂ ಗಳಷ್ಟು ಕಾರ್ಯಾಚರಣೆ ಲಾಭ ಮತ್ತು 233 ಕೋಟಿ ರೂ ಗಳಷ್ಟು ನಿವ್ವಳ ಲಾಭ ಗಳಿಸಿದೆ.
ಈ ಅವಧಿಯಲ್ಲಿನ ಠೇವಣಿ ಮೊತ್ತವು 34,070 ಕೋಟಿ ರೂ ಗಳಿಗೆ ಹೆಚ್ಚಳಗೊಂಡಿದ್ದು, ವರ್ಷದಿಂದ ವರ್ಷಕ್ಕೆ ಶೇ 17ರಷ್ಟು ಮತ್ತು ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಶೇ 5ರಷ್ಟು ಏರಿಕೆ ಕಂಡಿದೆ. ಒಟ್ಟು ಸಾಲದ ಪ್ರಮಾಣವು 30,344 ಕೋಟಿ ರೂ ಗೆ ತಲುಪಿದ್ದು, ವರ್ಷದಿಂದ ವರ್ಷಕ್ಕೆ ಶೇ 14ರಷ್ಟು ಮತ್ತು ಹಿಂದಿನ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ 1ರಷ್ಟು ಹೆಚ್ಚಳ ದಾಖಲಿಸಿದೆ.
ಚಾಲ್ತಿ ಖಾತೆ ಮತ್ತು ಉಳಿತಾಯ ಖಾತೆ (ಸಿಎಎಸ್‌ಎ) ಮೊತ್ತ 8,832 ಕೋಟಿ ರೂ ಗಳಷ್ಟಾಗಿದ್ದು, ವರ್ಷದಿಂದ ವರ್ಷಕ್ಕೆ ಶೇ 26ರಷ್ಟು ಹೆಚ್ಚಳಗೊಂಡಿದೆ. ನಿರ್ದಿಷ್ಟ ಅವಧಿಯ ರಿಟೇಲ್ ಠೇವಣಿಗಳ ಮೊತ್ತವು 15,914 ಕೋಟಿ ರೂ ಗೆ ತಲುಪಿದ್ದು, ವರ್ಷದಿಂದ ವರ್ಷಕ್ಕೆ ಶೇ 35ರಷ್ಟು ಏರಿಕೆ ದಾಖಲಿಸಿದೆ. 2ನೇ ತ್ರೈಮಾಸಿಕದಲ್ಲಿನ ನಿವ್ವಳ ಬಡ್ಡಿ ವರಮಾನವು 944 ಕೋಟಿ ರೂ ಗಳಷ್ಟಾಗಿದ್ದು, ವರ್ಷದಿಂದ ವರ್ಷಕ್ಕೆ ಶೇ 15ರಷ್ಟು ಹೆಚ್ಚಳ ಸಾಧಿಸಿದೆ.
ಈ ತ್ರೈಮಾಸಿಕದಲ್ಲಿನ ಸಾಲ ನೀಡಿಕೆ ಪ್ರಮಾಣವು 5,376 ಕೋಟಿ ರೂ ಗಳಷ್ಟಾಗಿದ್ದು ಹಿಂದಿನ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ 2ರಷ್ಟು ಹೆಚ್ಚಳ ದಾಖಲಿಸಿದೆ. ವರ್ಷದಿಂದ ವರ್ಷಕ್ಕೆ ಶೇ 6ರಷ್ಟು ಕಡಿಮೆಯಾಗಿದೆ.
ಮೊದಲ ತ್ರೈಮಾಸಿಕದಲ್ಲಿನ ಶೇ 2.3 ರಷ್ಟು ಒಟ್ಟು ವಸೂಲಾಗದ ಸಾಲಕ್ಕೆ (ಜಿ-ಎನ್‌ಪಿಎ) ಹೋಲಿಸಿದರೆ 2ನೇ ತ್ರೈಮಾಸಿಕದಲ್ಲಿನ ʼಜಿ-ಎನ್‌ಪಿಎʼ ಶೇ 2.5ರಷ್ಟು ಮತ್ತು ನಿವ್ವಳ ವಸೂಲಾಗದ ಸಾಲದ ಪ್ರಮಾಣವು (ಎನ್-ಎನ್‌ಪಿಎ) ಶೇ 0.4 ರಿಂದ ಶೇ 0.6ಕ್ಕೆ ತಲುಪಿದೆ. ಈ ಅವಧಿಯಲ್ಲಿನ ವಜಾ ಮೊತ್ತವು 140 ಕೋಟಿ ರೂ ಗಳಷ್ಟಾಗಿದೆ. ಬ್ಯಾಂಕ್ ಗಳಿಸಿರುವ ನಿವ್ವಳ ಬಡ್ಡಿಯು (ಎನ್‌ಐಎಂ) ಶೇ 9.2ರಷ್ಟು ಏರಿಕೆ ಕಂಡಿದೆ ಎಂದು ಬ್ಯಾಂಕ್ ಪ್ರಕಟಣೆ ತಿಳಿಸಿದೆ