Advertisement

ವನರಂಗದಲ್ಲಿ ಸಮೂಹ ಉಜಿರೆಯ ರಂಗೋತ್ಸವದ ವೈಭವ

01:01 AM Dec 27, 2019 | mahesh |

ಉಜಿರೆಯಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಯ ಕೊಡುಗೆಯಾಗಿ “ವನರಂಗ’ ಬಯಲು ರಂಗಮಂದಿರ ಲೋಕಾರ್ಪಣೆಗೊಂಡ ಸಂದರ್ಭದಲ್ಲಿ “ಸಮೂಹ ಉಜಿರೆ’ ಡಿ. 9 ರಿಂದ 12ರವರೆಗೆ ನಾಟಕೋತ್ಸವವನ್ನು ಆಯೋಜಿಸಿತ್ತು. ಮೊದಲ ಎರಡು ನಾಟಕಗಳು ಹೇಮಾವತಿ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಹಾಗೂ ನಂತರದ ಎರಡು ನಾಟಕಗಳು ಹೆಗ್ಗೊàಡಿನ ನೀನಾಸಂ ತಿರುಗಾಟದ ನಾಟಕಗಳಾಗಿ ವನರಂಗದಲ್ಲಿ ಪ್ರದರ್ಶನಗೊಂಡವು.

Advertisement

ಧರ್ಮಸ್ಥಳದ ರಂಗಶಿವ ಕಲಾ ಬಳಗದ ಹವ್ಯಾಸಿ ಕಲಾವಿದರು ಶಶಿರಾಜ್‌ ರಾವ್‌ ಕಾವೂರು ಅವರ ಕಥಾ ರಚನೆಯ “ಬರ್ಬರೀಕ’ ನಾಟಕ ಸುನಿಲ್‌ ಶೆಟ್ಟಿ ಕಲೊಪ್ಪ (ನೀನಾಸಂ) ನಿರ್ದೇಶನದಲ್ಲಿ ಸಮರ್ಥನ್‌ ಎಸ್‌. ರಾವ್‌ ಸಂಗೀತ ಸಂಯೋಜನೆಯಲ್ಲಿ ಮನೋಜ್ಞವಾಗಿ ಮೂಡಿಬಂತು. ಹವ್ಯಾಸಿ ಕಲಾವಿದರು ಪರಿಪಕ್ವ ಅಭಿನಯದಿಂದ ನಾಟಕದ ಮೌಲ್ಯ ವರ್ಧಿಸಿದ್ದಾರೆ.

ಉಜಿರೆಯ ಎಸ್‌ಡಿಎಂ ಕಲಾ ಬಳಗದ ಕಲಾವಿದರು ರಾಜೇಂದ್ರ ಕಾರಂತ ರಚಿಸಿ, ನೀನಾಸಂನ ಗೀತಾ ಸುಳ್ಯ ನಿರ್ದೇಶಿಸಿದ “ಮುದ್ದಣನ ಪ್ರಮೋಷನ್‌ ಪ್ರಸಂಗ’ ವಿಡಂಬನಾತ್ಮಕ ಹಾಸ್ಯ ನಾಟಕ ನಗೆಗಡಲಲ್ಲಿ ತೇಲಿಸಿತ್ತು. ಉದ್ಯೋಗದಲ್ಲಿ ಪ್ರಮೋಷನ್‌ ಗಿಟ್ಟಿಸಿಕೊಳ್ಳಲು ಪಡುವ ತಂತ್ರ-ಪ್ರತಿ ತಂತ್ರಗಳನ್ನು ರಂಗದಲ್ಲಿ ಮನೋಜ್ಞವಾಗಿ ಬಿಂಬಿಸಲಾಗಿದೆ. ಶಿಕ್ಷಕೇತರ ಸಿಬ್ಬಂದಿಗಳು ತಮ್ಮ ಪಾತ್ರಗಳಿಗೆ ನ್ಯಾಯ ದೊರಕಿಸಿಕೊಟ್ಟಿದ್ದಾರೆ.

ನೀನಾಸಂ ನಾಟಕಗಳು
ಮೊದಲ ದಿನ ನೀನಾಸಂ ಕಲಾವಿದರು ಐತಿಹಾಸಿಕ ಕಥಾನಕ ಹಾಗೂ ಎರಡನೇ ದಿನ ಪೌರಾಣಿಕ ಕಥೆಯನ್ನು ರಂಗದಲ್ಲಿ ಪರಿಣಾಮಕಾರಿಯಾಗಿ ಅಭಿವ್ಯಕ್ತಗೊಳಿಸಿದ್ದಾರೆ. ವಿಜಯನಗರ ಸಾಮ್ರಾಜ್ಯದಲ್ಲಿ ರಾಷ್ಟ್ರೀಯತೆಯ ಸಂಘರ್ಷ ಹಾಗೂ ಧರ್ಮಗಳ ತಿಕ್ಕಾಟದಲ್ಲಿ ಚಕ್ರವರ್ತಿ ಕೃಷ್ಣ ದೇವರಾಯನ ಅಳಿಯ ರಾಮರಾಯ ರಕ್ಕಸ-ತಂಗಡಗಿ ಕದನದಲ್ಲಿ ಹತನಾಗುತ್ತಾನೆ. ಮುಸ್ಲಿಂ ತುಂಡರಸರು, ಬಿಜಾಪುರದ ಸುಲ್ತಾನ್‌ ಆದಿಲ್‌ ಶಾಹ ಆಡಳಿತ ನಿಯಂತ್ರಣದಲ್ಲಿ ಒಂದಾಗುತ್ತಾರೆ. ಸಾಮ್ರಾಜ್ಯವು ಸ್ಥಳೀಯರು ಹಾಗೂ ಹೊರಗಿನವರಿಂದ ಕೊಳ್ಳೆ ಹೊಡೆಯಲ್ಪಟ್ಟು ನಾಮಾವಶೇಷವಾಗುವ ಕಥಾವಸ್ತುವೇ “ರಾಕ್ಷಸ-ತಂಗಡಿ’ ನಾಟಕ. ಗಿರೀಶ್‌ ಕಾರ್ನಾಡ್‌ ರಚನೆಯ ನಾಟಕವನ್ನು ಬಿ.ಆರ್‌. ವೆಂಕಟರಮಣ ಐತಾಳ್‌ ನಿರ್ದೇಶಿಸಿದ್ದಾರೆ. ಮಂಜುನಾಥ ಎಚ್‌. (ರಾಮರಾಯ), ಸಂತೋಷ್‌ ಕುಮಾರ್‌ (ಆಲಿ ಆದಿಲ್‌ಶಾಹ) ಮತ್ತಿತರರ ಪಾತ್ರ ನಿರ್ವಹಣೆ ಅಚ್ಚುಕಟ್ಟಾಗಿ ಪ್ರದರ್ಶಿಸಲ್ಪಟ್ಟಿತು. ಇತಿಹಾಸದ ಪುಟಗಳನ್ನು ನಾಟಕ ಯಥಾವತ್ತಾಗಿ ನೆನಪಿಸಿದೆ.

ಮಹಾಭಾರತ, ಕುಮಾರವ್ಯಾಸ ಭಾರತ, ಪಂಪ ಭಾರತ ಹಾಗೂ ಅಮೃತ ಸೋಮೇಶ್ವರರ ಕೃತಿಗಳನ್ನು ಸಮ್ಮಿಲನಗೊಳಿಸಿ ನಿರೂಪಿಸಿದ ಕರ್ಣನ ಜೀವನ ವೃತ್ತಾಂತದ “ಕರ್ಣ ಸಾಂಗತ್ಯ’ ವಿಶ್ಲೇಷಣಾತ್ಮಕವಾಗಿ ರೂಪಿತಗೊಂಡಿದೆ. ಭಾಗವತರ ಮೂಲಕ ಕಥಾ ಭಾಗದ ತುಣುಕುಗಳು ಒಂದೊಂದಾಗಿ ಕಾವ್ಯಮಯವಾಗಿ ತೆರೆದುಕೊಳ್ಳುತ್ತದೆ. ಕರ್ಣನ ವ್ಯಕ್ತಿತ್ವದ ವಿವಿಧ ಮಜಲುಗಳು, ಅವನ ಮಾನಸಿಕ ತಾಕಲಾಟ, ತೊಳಲಾಟ ಕುಂತಿಯೊಂದಿಗೆ ನಡೆಸುವ ಸಂವಾದ, ಗುರುಗಳಿಂದ ಪಡೆಯುವ ಶಸ್ತ್ರಾಭ್ಯಾಸ, ಗುರುಶಾಪ, ಕರ್ಣಾರ್ಜುನ ಯುದ್ಧದಲ್ಲಿ ಕೃಷ್ಣನ ಕುತಂತ್ರ, ಕಡೆಗೆ ಕೃಷ್ಣನೇ ವಟುವಾಗಿ ದಾನ ಬೇಡಿ ಅಮೃತಕಲಶವನ್ನೇ ಪಡೆದು ಕರ್ಣಾವಸಾನಗೊಳ್ಳುವ ಕಥನ ವಿಭಿನ್ನ ಮಜಲುಗಳಲ್ಲಿ ತೆರೆದುಕೊಳ್ಳುತ್ತದೆ. “ಆರು ಸರಿಯೈ ಕರ್ಣ ನಿನಗೆ’, “ದ್ರೌಪದಿಯ ಸೀರೆಯೊಳ್‌ ನಿನ್ನ ರುಜು ಇತ್ತೇ ಕರ್ಣ?’, “ತೊಟ್ಟ ಬಾಣ ಮತ್ತೆ ತೊಡೆ’ ಎಂಬ ಕುಂತಿಗೆ ಕೊಟ್ಟ ಮಾತು “ಮಮಕಾರಗಳ ಕವಚ ಕಳೆಯಬೇಕು’ ಎಂಬ ಕೃಷ್ಣನ ಮಾತುಗಳು ಚಿಂತಿಸುವಂತೆ ಮಾಡಿವೆ. ಕರ್ಣನ ಬದುಕಿನ ಕಾವ್ಯ ಕಥನ ಸಾಂಗತ್ಯದ ರಂಗ ಕೃತಿಯಲ್ಲಿ ಯಥಾವತ್ತಾಗಿ ಪಡಿಮೂಡಿದೆ. ಗಣೇಶ ಮಂದರ್ತಿಯವರ ನಿರ್ದೇಶನ ರೂಪಕದ ಸಾರ್ಥಕ್ಯಕ್ಕೆ ಕಾರಣವಾಗಿದೆ. ಮಂಜುನಾಥ ಎಚ್‌. (ಭಾಗವತ), ಉಜ್ವಲ್‌ ಯು.ವಿ. (ಅರ್ಜುನ), ಪ್ರಶಾಂತ ಶೆಟ್ಟಿ (ಕರ್ಣ), ಸಂತೋಷ ಕುಮಾರ್‌ ಮಳ್ಳಿ (ಕೃಷ್ಣ), ಸಲ್ಮಾ ದಂಡಿನ್‌ (ಕುಂತಿ), ಸುಮಧುರ ರಾವ್‌ (ದ್ರೌಪದಿ) ಗಮನ ಸೆಳೆಯುತ್ತಾರೆ. ರವಿಕುಮಾರ್‌ ಬೆಣ್ಣೆಯವರ ಸಂಗೀತ ಹೃದ್ಯವಾಗಿತ್ತು. ಚಂದನ್‌ ಅವರ ಬೆಳಕು, ದೇವೆಂದ್ರ ಬಡಿಗೇರ್‌ ಅವರ ಸಂಗೀತ ನಾಟಕದ ಯಶಸ್ಸಿಗೆ ಪೂರಕವಾಗಿತ್ತು.

Advertisement

ಸಾಂತೂರು ಶ್ರೀನಿವಾಸ ತಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next