Advertisement

ಥೈರಾಯ್ಡ್ ಗ್ರಂಥಿ, ಒಣಕೆಮ್ಮು ಸಮಸ್ಯೆಗೆ ರಾಮಬಾಣ ಉಜ್ಜಾಯಿ ಪ್ರಾಣಾಯಾಮ

11:16 PM Jan 27, 2020 | Sriram |

ಥೈರಾಯ್ಡ್ ಗ್ರಂಥಿಯ ಸಮಸ್ಯೆ ಅನೇಕ ಮಹಿಳೆಯರನ್ನು ಕಾಡುತ್ತದೆ. ಜತೆಗೆ ಯಃಕಶ್ಚಿತ್‌ ಎನಿಸುವ ಒಣಕೆಮ್ಮು ಕೂಡ ಬಾಧಿಸುವುದುಂಟು. ಈ ಸಮಸ್ಯೆಗಳು ಎಷ್ಟೋ ಬಾರಿ ತಿಂಗಳುಗಳ ಕಾಲ ಕಾಡುತ್ತವೆ. ಜತೆಗೆ ಅಲರ್ಜಿಗಳಿಂದ ಆ್ಯಸಿಡಿಟಿಯ ವರೆಗೆ ಹತ್ತು ಹಲವಾರು ಸಮಸ್ಯೆಗಳು ಉಂಟಾಗುತ್ತವೆ. ಈ ಸಮಸ್ಯೆಗಳಿಗೆಲ್ಲ ರಾಮಬಾಣವಾಗಬಲ್ಲ ಉಜ್ಜಾಯಿ ಪ್ರಾಣಾಯಾಮ ಮಾಡುವ ಬಗೆ ಮತ್ತು ಅದರ ಪ್ರಯೋಜನಗಳನ್ನು ಇಲ್ಲಿ ವಿವರಿಸಲಾಗಿದೆ.

Advertisement

ಮಾಡುವ ವಿಧಾನ ಹೇಗೆ ?
ಸುಖಾಸನದಲ್ಲಿ ನೇರವಾಗಿ ಕುಳಿತುಕೊಳ್ಳಿ. ಒಂದು ನಿಮಿಷ ನಿಧಾನವಾಗಿ ಉಸಿರಾಡಿ ಮೈಮನಸ್ಸನ್ನು ಶಾಂತ ಗೊಳಿಸಿ. ಅನಂತರ ಮೂಗಿನ ಎರಡು ಹೊಳ್ಳೆಗಳಲ್ಲಿ ರೇಚಕ ಮಾಡಿ, ಆಮೇಲೆ ಪೂರಕ ಮಾಡಿ. ಈಗ ನಾಸಿಕ ಮುದ್ರೆಯಿಂದ ಎರಡು ಹೊಳ್ಳೆಗಳನ್ನು ಮುಚ್ಚಿ ಜಾಲಂಧರ ಬಂಧ ಮಾಡಿ. ಇದು ಪ್ರಾಣವಾಯು ಮೇಲೆ ಬರ ದಂತೆ ತಡೆಯುತ್ತದೆ. ಈಗ ತತ್‌ಕ್ಷಣ ಮೂಲಬಂಧ ಮಾಡಿ. ಇದನ್ನು ಅಂತರ ಕುಂಭಕ ಎಂದು ಕರೆಯಲಾಗುತ್ತದೆ.

ಇದೇ ಸ್ಥಿತಿಯಲ್ಲಿ ಹತ್ತು ಸೆಕೆಂಡುಗಳ ಕಾಲ ಇರಿ. ಆಮೇಲೆ ಜಾಲಂಧರ ಬಂಧ ವನ್ನು ಬಿಟ್ಟು ಎಡಗಡೆಯ ಮೂಗಿನ ಹೊಳ್ಳೆಯಿಂದ ಉಸಿರನ್ನು ಬಿಡಿ. ತತ್‌ಕ್ಷಣ ಉಡ್ಡೀಯಾನ ಬಂಧ ಮಾಡಿ. ಪುನಃ ಮೂಗಿನ ಎರಡೂ ಹೊಳ್ಳೆಗಳಿಂದ ಉಸಿರು ತೆಗೆದುಕೊಂಡು ಮೂಗು ಮುಚ್ಚಿ. ಜಾಲಂಧರ ಬಂಧ ಮಾಡಿ ತತ್‌ಕ್ಷಣ ಮೂಲಬಂಧ ಮಾಡಿ. ಈ ಸ್ಥಿತಿಯಲ್ಲಿ ಹತ್ತು ಸೆಕೆಂಡುಗಳ ಕಾಲ ಇರಿ. ಆಮೇಲೆ ಜಾಲಂಧರ ಬಂಧ ತ್ಯಜಿಸಿ ಎಡಗಡೆಯ ಹೊಳ್ಳೆಯಿಂದ ಉಸಿರು ಬಿಡಿ.

ಇದರ ಪ್ರಯೋಜನಗಳು
– ದೇಹದ ಒಳಗಡೆ ಉಷ್ಣತೆ ಹೆಚ್ಚಾಗುವುದರಿಂದ ಬಿಗಿಯಾದ ಸ್ನಾಯುಗಳನ್ನು ಸಡಿಲವಾಗಿಸುತ್ತದೆ. ಇದರಿಂದ ಸ್ಟ್ರೆಚ್‌ ಮಾಡುವಾಗ ದೇಹಕ್ಕೆ ಅನುಕೂಲವಾಗುವುದು. ಅಲ್ಲದೆ ಶ್ವಾಸವನ್ನು ಜೋರಾಗಿ ತೆಗೆದುಕೊಂಡು ಹೊರಹಾಕುವುದರಿಂದ ದೇಹದಲ್ಲಿರುವ ಕಶ್ಮಲಗಳು ಹೊರಗೆ ಹೋಗುತ್ತವೆ. ಇದು ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ ಹಾಗೂ ಸವಿನಿದ್ದೆ ಬರುವಂತೆ ಮಾಡುತ್ತದೆ. ಬಿಪಿ, ಥೈರಾಯ್ಡ್ ಸಮಸ್ಯೆ ಇರುವವರು ಈ ಆಸನ ಮಾಡುವುದು ಒಳ್ಳೆಯದು.
– ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ. ಇದರಲ್ಲಿ ಹೆಚ್ಚು ಪ್ರಾಣ (ಗಾಳಿ)ವನ್ನು ಒಳಗೆ ತೆಗೆದುಕೊಳ್ಳುವುದರಿಂದ ಹೃದಯದ ಆರೋಗ್ಯ ಹೆಚ್ಚಿಸುತ್ತದೆ. ತಲೆಸುತ್ತು, ಸುಸ್ತು ಕಡಿಮೆಯಾಗಿ ದೇಹದಲ್ಲಿ ಲವಲವಿಕೆ ತುಂಬುವುದು.
– ಮಾನಸಿಕ ಒತ್ತಡ, ಕಿರಿಕಿರಿ, ಖನ್ನತೆ ಇವುಗಳನ್ನು ಹೊರದಬ್ಬಿ ಮನಸ್ಸನ್ನು ಶಾಂತವಾಗಿಸುವುದು.ಈ ಪ್ರಾಣಾಯಾಮ ಮಾಡುವುದರಿಂದ ದೇಹ ಮತ್ತ ಮನಸ್ಸು ವರ್ತಮಾನದಲ್ಲಿ ಹೆಚ್ಚು ನೆಲೆಸುವುದರಿಂದ ಮನಸ್ಸಿನ ಏಕಾಗ್ರತೆ ವೃದ್ಧಿಸುವುದು. ಇತ್ಯಾದಿ.

Advertisement

Udayavani is now on Telegram. Click here to join our channel and stay updated with the latest news.

Next