Advertisement

ಉಜ್ಜಯಿನಿಯ ಮರುಳ ಸಿದ್ದೇಶ್ವರ ರಥೋತ್ಸವ

02:56 PM May 10, 2019 | Naveen |

ಕೊಟ್ಟೂರು: ಪಂಚಪೀಠಗಳಲ್ಲಿ ಒಂದಾದ ಶ್ರೀಮದ್‌ ಉಜ್ಜಯಿನಿ ಸದ್ಧರ್ಮ ಪೀಠದ ಆರಾಧ್ಯ ದೈವ ಶ್ರೀ ಮರುಳಸಿದ್ದೇಶ್ವರಸ್ವಾಮಿ ಮಹಾರಥೋತ್ಸವ ಗುರುವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು. ರಥೋತ್ಸವದ ಅಂಗವಾಗಿ ಬೆಳಗ್ಗೆಯಿಂದ ಶ್ರೀಮರುಳುಸಿದ್ದೇಶ್ವರಸ್ವಾಮಿಗೆ ವಿವಿಧ ರೀತಿಯ ಅಭಿಷೇಕ, ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ಹರಕೆ ತೀರಿಸಿದರು.

Advertisement

ರಥೋತ್ಸವಕ್ಕೂ ಮುನ್ನ ಶ್ರೀಸ್ವಾಮಿಯ ಉತ್ಸವ ಮೂರ್ತಿಯನ್ನು ಅಡ್ಡಪಲ್ಲಕ್ಕಿಯಲ್ಲಿ ತಂದು ರಥಕ್ಕೆ ಪ್ರದಕ್ಷಿಣೆ ಬಂದು ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ನಂತರ ಸ್ವಾಮಿಯ ಪಟಾಕ್ಷಿ ಹರಾಜು ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಮಹಾರಾಷ್ಟ್ರದ ಸಂತೋಷ ಮಿಟಗೇರಿ ಎಂಬುವವರು 2,01,001 ರೂ. ಹರಾಜು ಕೂಗಿ ಸ್ವಾಮಿಯ ಪಟಾಕ್ಷಿಯನ್ನು ಪಡೆದರು. ಸಂಜೆ 5.45ರ ಸುಮಾರಿಗೆ ಶ್ರೀಮರುಳಸಿದ್ದೇಶ್ವರಸ್ವಾಮಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಸಾವಿರಾರು ಭಕ್ತರು ರಥ ಎಳೆದು ಕೃತಾರ್ಥರಾದರು. ನಂದಿಕೋಲು, ಸಮಾಳ, ಮಂಗಳವಾದ್ಯ, ಡೊಳ್ಳು ಕುಣಿತಗಳು ರಥೋತ್ಸವಕ್ಕೆ ಮೆರಗು ತಂದವು. ಪಾದಗಟ್ಟೆ ವರೆಗೆ ಸಾಗಿದ ತೇರು ಸಂಜೆ 7 ಗಂಟೆ ಸುಮಾರಿಗೆ ತೇರುಗಡ್ಡೆ ಬಳಿ ನೆಲೆ ನಿಂತಿತು. ರಥೋತ್ಸವದ ವೇಳೆ ಭಕ್ತರು ತೇರು ಗಾಲಿಗೆ ತೆಂಗಿನಕಾಯಿಯನ್ನು ಹೊಡೆದು, ಬಾಳೆಹಣ್ಣು, ಉತ್ತುತ್ತಿ ಎಸೆಯುವ ಮೂಲಕ ಭಕ್ತಿ ಸಮರ್ಪಿಸಿದರು. ನಂತರ ಶ್ರೀಸ್ವಾಮಿ ಉತ್ಸವ ಮೂರ್ತಿಯನ್ನು ಮದಾಲ್ಸಿ ಮಾಡುವ ಮೂಲಕ ಅಡ್ಡಪಲ್ಲಕ್ಕಿಯಲ್ಲಿ ದೇವಸ್ಥಾನಕ್ಕೆ ಕರೆದೊಯ್ಯಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next