ಉಜಿರೆ: ಪ್ರಾಯೋಗಿಕ ಜ್ಞಾನವನ್ನು ಅನ್ವಯಿಸಿಕೊಳ್ಳುವ ಸಾಮರ್ಥ್ಯದೊಂದಿಗೆ ನಿರಂತರ ಕಲಿಕೆಯ ಶ್ರದ್ಧೆಯಿದ್ದರೆ ಕಲಾರಂಗದಲ್ಲಿ ವಿಭಿನ್ನವಾಗಿ ಗುರುತಿಸಿಕೊಂಡು ಸಾಧಿಸಲು ಸಾಧ್ಯವಾಗುತ್ತದೆ ಎಂದು ‘ಪಡ್ಡಾಯಿ’ ಸಿನಿಮಾ ಖ್ಯಾತಿಯ ನಟಿ ಬಿಂದುಶ್ರಿ ರಕ್ಷಿದಿ ಎ.ಯು ಹೇಳಿದರು.
ಉಜಿರೆಯ ಎಸ್ ಡಿಎಂ ಕಾಲೇಜಿನ ಸಿದ್ಧವನ ಗುರುಕುಲದಲ್ಲಿ ಎಸ್.ಡಿ.ಎಂ ಕಾಲೇಜಿನ ಬಿ.ವೋಕ್ ಡಿಜಿಟಲ್ ಮೀಡಿಯಾ – ಫಿಲ್ಮ್ ಮೇಕಿಂಗ್ ವಿಭಾಗವು ಆಯೋಜಿಸಿದ ಒಂದು ವಾರದ ‘ಅಭಿನಯ ಕಾರ್ಯಾಗಾರ’ದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಅತಿಥಿಯಾಗಿ ಮಾತನಾಡಿದರು.
ಒಬ್ಬ ಕಲಾವಿದನಿಗೆ ಪ್ರಾಯೋಗಿಕ ಜ್ಞಾನ ಅತ್ಯಗತ್ಯ. ನಿರಂತರ ಪ್ರಯತ್ನ ಮತ್ತು ಸೂಕ್ಷö್ಮ ಗಮನ ನಟರನ್ನು ಗಟ್ಟಿಗೊಳಿಸುತ್ತದೆ. ಅಷ್ಟೇ ಅಲ್ಲ, ರಂಗಭೂಮಿ ಬದುಕಿನ ವಿವಿಧ ಮಜಲುಗಳನ್ನು ಯಶಸ್ವಿಯಾಗಿ ನಿಭಾಯಿಸುವ ಭರವಸೆ ಮೂಡಿಸುತ್ತದೆ. ಬಿಕ್ಕಟ್ಟಿನ ಸಂದರ್ಭಗಳಲ್ಲೂ ವಿಚಲಿತಗೊಳ್ಳದೇ ಮುನ್ನಡೆಯುವ ಶಕ್ತಿ ನೀಡುತ್ತದೆ ಎಂದರು.
ಸಿನಿಮಾ ಎಂದರೆ ಕೇವಲ ಅಭಿನಯ ಮಾತ್ರವಲ್ಲ. ವಿವಿಧ ರೀತಿಯ ಕಲಿಕೆಯ ಸಾಧ್ಯತೆಗಳು ಸಿನಿಮಾ ಮತ್ತು ರಂಗಭೂಮಿ ವಲಯಗಳಲ್ಲಿರುತ್ತವೆ. ಇಂಥ ಕಲಿಕೆಯ ಅವಕಾಶವನ್ನು ಅಭಿನಯ ಕಾರ್ಯಾಗಾರ ಒದಗಿಸಿಕೊಡುತ್ತದೆ ಎಂದು ಹವ್ಯಾಸಿ ಕಲಾವಿದ ಸುಬ್ರಹ್ಮಣ್ಯ ಜಿ.ಭಟ್ ಹೇಳಿದರು.
ಕ್ರಿಯಾತ್ಮಕ ಜಗತ್ತಿನಲ್ಲಿ ಅತಿಯಾದ ಮಾತಿಗಿಂತ ಕೆಲಸಕ್ಕೇ ಹೆಚ್ಚಿನ ಆದ್ಯತೆ. ಅವಕಾಶಗಳನ್ನು ಸದುಪಯೋಗಪಡಿಸಿಕೊಂಡರೆ ಯಶಸ್ಸು ನಮ್ಮದಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿ.ವೋಕ್ ವಿಭಾಗದ ಮುಖ್ಯಸ್ಥ ಮಾಧವ ಹೊಳ್ಳ, ಕಾರ್ಯಗಾರ ಸಂಚಾಲಕಿ ಅಶ್ವಿನಿ ಜೈನ್, ನಟ ನವೀನ್ ಸಾಣೆಹಳ್ಳಿ ಹಾಗೂ ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿ ಮುರಾರಿ ವಂದಿಸಿ, ಗೌತಮ್ ಕಾರ್ಯಕ್ರಮ ನಿರೂಪಿಸಿದರು.