Advertisement

ಉಜಿರೆ; ನದಿಯಲ್ಲಿ ವಿಸರ್ಜಿಸಿದ್ದ ಮೂರ್ತಿ ಮರಳಿ ಪ್ರತಿಷ್ಠಾಪನೆ

02:55 PM Dec 19, 2022 | Team Udayavani |

ಬೆಳ್ತಂಗಡಿ: ವರ್ಷಗಳ ಹಿಂದೆ ಉಜಿರೆ ಗ್ರಾಮದ ಪೆರ್ಲದ ಪುರಾತನ ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ನವೀಕರಣ ವೇಳೆ ನದಿಯಲ್ಲಿ ವಿಸರ್ಜಿಸಿದ್ದ ಹಳೆ ಮೂರ್ತಿಯನ್ನು ಈಗ ಮತ್ತೆ ಹುಡುಕಿ ತಂದು ಪ್ರತಿಷ್ಠಾಪಿಸಲು ಮುಂದಾಗಿರುವ ಘಟನೆ ನಡೆದಿದೆ.

Advertisement

ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ನವೀಕರಣಕ್ಕಾಗಿ ಕಳೆದ ವರ್ಷ ಡಿಸೆಂಬರ್‌ನಲ್ಲಿ ದೈವಜ್ಞರಿಂದ ಅಷ್ಟಮಂಗಲ ಪ್ರಶ್ನೆ ಇಡಲಾಗಿತ್ತು. ಈವೇಳೆ ದೇವಸ್ಥಾನದಲ್ಲಿ ಪೂಜಿಸುತ್ತಿದ್ದ ಶ್ರೀ ಲಕ್ಷ್ಮೀ ಜನಾರ್ದನ ದೇವರ ಹಳೆ ಮೂರ್ತಿಯನ್ನು ನಿಡಿಗಲ್‌ ನೇತ್ರಾವತಿ ನದಿಯಲ್ಲಿ ವಿಸರ್ಜಿಸಿ ಬಾಲಾಲಯದಲ್ಲಿ ಬೇರೊಂದು ಮೂರ್ತಿಯನ್ನು ಸ್ಥಾಪಿಸಲಾಗಿತ್ತು.

ಆದರೆ ಪ್ರಸಕ್ತ ಡಿ. 8 ಮತ್ತು 9 ಹಾಗೂ 15 ಮತ್ತು 16ರಂದು ದೈವಜ್ಞರಾದ ನೆಲ್ಯಾಡಿಯ ಶ್ರೀಧರ ಗೋರೆಯವರ ನೇತೃತ್ವದಲ್ಲಿ ಕ್ಷೇತ್ರದಲ್ಲಿ ಅಷ್ಟಮಂಗಲ ಪ್ರಶ್ನೆ ನಡೆದಿದೆ. ಈ ಸಂದರ್ಭ ನದಿಯಲ್ಲಿ ವಿಸರ್ಜಿಸಿದ ಮೊದಲು ಪೂಜಿಸುತ್ತಿದ್ದ ಮೂರ್ತಿಯನ್ನೇ ಪ್ರತಿಷ್ಠಾಪನೆ ಮಾಡಬೇಕು ಎಂದು ತಿಳಿಸಿ, ಡಿ. 18ರಂದು ಹುಡುಕಿದರೆ ವಿಸರ್ಜನೆ ಮಾಡಿದ ಪರಿಸರದಲ್ಲಿ ಮೂರ್ತಿ ಸಿಗುತ್ತದೆ ಎಂದು ತಿಳಿಸಿದ್ದರು.

ಆ ಪ್ರಕಾರ ಹುಡುಕಿದಾಗ ಅದೇ ಮೂರ್ತಿ ನಿಡಿಗಲ್‌ ಕಿಂಡಿ ಅಣೆಕಟ್ಟಿನ ಸಮೀಪ ಪತ್ತೆಯಾಗಿದೆ. ಇದೇ ದೇವಸ್ಥಾನಕ್ಕೆ ಸಂಬಂಧಪಟ್ಟಂತೆ ಇತ್ತೀಚೆಗೆ ಅವರು ತಿಳಿಸಿದ ದೇವಸ್ಥಾನದ ಪರಿಸರ ಜಾಗದಲ್ಲಿ ಅಗೆದಾಗ ಮಣ್ಣಿನಡಿಯಲ್ಲಿ ಪುರಾತನ ಶಿವಲಿಂಗ ಕೂಡ ಪತ್ತೆಯಾಗಿತ್ತು. ಇದೀಗ ನದಿಯಲ್ಲಿ ವಿಸರ್ಜಿಸಲಾಗಿದ್ದ ದೇವರ ಮೂರ್ತಿಯನ್ನು ದೈವಜ್ಞರ ಆಜ್ಞೆಯಂತೆ ಮತ್ತೆ ಹುಡುಕಿ ದೇವಸ್ಥಾನಕ್ಕೆ ತರಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next