Advertisement

Ujire ರಾಷ್ಟ್ರೀಯ ವಿಚಾರ ಸಂಕಿರಣ: ಭಾಷಾಂತರಕಾರರಿಗೆ ರಾ. ಮನ್ನಣೆ ಅಗತ್ಯ: ಡಾ| ಹೆಗ್ಗಡೆ

12:46 AM Nov 23, 2023 | Team Udayavani |

ಬೆಳ್ತಂಗಡಿ: ಹೊಸ ಕೃತಿ ರಚನೆ ಮಾಡುವುದಕ್ಕೂ ಒಂದು ಕೃತಿಯನ್ನು ಇನ್ನೊಂದು ಭಾಷೆಗೆ ತರುವುದಕ್ಕೂ ವ್ಯತ್ಯಾಸವಿದೆ. ಆ ಕಾರ್ಯದಲ್ಲಿ ಆಳ ವಾದ ಅಧ್ಯಯನ, ಹುಡುಕಾಟ ಅಗತ್ಯವಾಗುತ್ತದೆ. ಹಾಗಾಗಿ ಭಾಷಾಂತರ ಕಾರರಿಗೆ ರಾಷ್ಟ್ರೀಯ ಮನ್ನಣೆ ಸಿಗುವುದು ಅಗತ್ಯ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ, ಎಸ್‌ಡಿಎಂ ಶಿಕ್ಷಣ ಸಂಸ್ಥೆ ಗಳ ಅಧ್ಯಕ್ಷರಾದ ಡಾ| ಡಿ. ವೀರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟರು.

Advertisement

ಹಂಪಿಯ ಕನ್ನಡ ವಿಶ್ವವಿದ್ಯಾ ನಿಲಯದ ಭಾಷಾಂತರ ಅಧ್ಯಯನ ವಿಭಾಗ ಮತ್ತು ಭಾಷಾಂತರ ಕೇಂದ್ರ ಹಾಗೂ ಶ್ರೀ ಕೆ.ಎಸ್‌. ವೀರಭದ್ರಪ್ಪ ದತ್ತಿನಿಧಿ ಮತ್ತು ಉಜಿರೆ ಎಸ್‌ಡಿಎಂ ಸ್ವಾಯತ್ತ ಕಾಲೇಜಿನ ಡಾ| ಹಾ.ಮಾ.ನಾ. ಸಂಶೋಧನ ಕೇಂದ್ರ ಮತ್ತು ಕನ್ನಡ ವಿಭಾಗದ ಜಂಟಿ ಆಶ್ರಯದಲ್ಲಿ ಕರ್ನಾಟಕ ಭಾಷಾಂತರಕಾರರ ಒಕ್ಕೂಟದ ಸಹಯೋಗದಲ್ಲಿ ಭಾಷಾಂತರಕಾರರ ಮೂರನೆಯ ಸಮಾವೇಶದ ಅಂಗವಾಗಿ ಉಜಿರೆಯ ಶ್ರೀ ಸಿದ್ಧವನ ಗುರುಕುಲದಲ್ಲಿ ಆಯೋಜಿಸಲಾದ ಕನ್ನಡ ಸಾಂಸ್ಕೃತಿಕ ಸಂವರ್ಧನೆ ಮತ್ತು ಭಾಷಾಂತರಕಾರರು ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.

ವಿಶೇಷ ಸಹನೆ, ಅನುಭವ, ಜೀವನಾನುಭವ ಬೇಡುವ ಭಾಷಾಂತರ ಕಾರ್ಯ ಸುಲಭವಲ್ಲ. ಅಂತಹ ಮಹತ್ವದ ಕಾರ್ಯಕ್ಕೆ ಮನ್ನಣೆ ಅಗತ್ಯ. ವಿಶ್ವವಿದ್ಯಾನಿಲಯಗಳಿಂದ ಅವರಿಗೆ ಗೌರವ ಸಿಗುವುದು ಉತ್ತಮ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಮೂಡುಬಿದಿರೆಯ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಮಾತನಾಡಿ, ಬಹುಸಂಸ್ಕೃತಿ ಮತ್ತು ಬಹುಭಾಷೆ ಭಾರತದ ಸತ್ವ ಮತ್ತು ಸಂಪತ್ತು. ಅದನ್ನು ಕಾಪಾಡುವಲ್ಲಿ ಭಾಷಾಂತರಕಾರರು ಮುಖ್ಯ ಪಾತ್ರ ವಹಿಸುತ್ತಾರೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ| ಸತೀಶ್ಚಂದ್ರ ಎಸ್‌. ಮಾತನಾಡಿ, ಭಾಷೆ, ಭಾಷಾಂತರ ಜನಜೀವನದ ಅವಿಭಾಜ್ಯ ಅಂಗ. ಭಾಷಾಂತರದ ಮೂಲಕ ಭಾಷೆ ಹಾಗೂ ಸಂಸ್ಕೃತಿಗಳು ಸಮೃದ್ಧಿ ಕಂಡಿವೆ ಎಂದು ತಿಳಿಸಿದರು.

ಕಾರ್ಯಕ್ರಮ ಸಂಯೋಜಕ, ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದ ಭಾಷಾಂತರ ಅಧ್ಯಯನ ವಿಭಾಗ ಮತ್ತು ಭಾಷಾಂತರ ಕೇಂದ್ರದ ಮುಖ್ಯಸ್ಥ ಡಾ| ಎ. ಮೋಹನ ಕುಂಟಾರು ಪ್ರಸ್ತಾವನೆಗೈದರು.

Advertisement

ಎಸ್‌ಡಿಎಂ ಕಾಲೇಜಿನ ಪ್ರಾಂಶುಪಾಲ ಡಾ| ಬಿ.ಎ. ಕುಮಾರ ಹೆಗ್ಡೆ ಸ್ವಾಗತಿಸಿ, ಕನ್ನಡ ವಿಭಾಗ ಮುಖ್ಯಸ್ಥೆ ಡಾ| ಬೋಜಮ್ಮ ಕೆ.ಎನ್‌. ಅವರು ವಂದಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next