ಬೆಳ್ತಂಗಡಿ: ಕಲಾವಿದರು ಮತ್ತು ಸಹೃದಯಿಗಳಿದ್ದಾಗ ಕಲಾಪ್ರಕಾರಗಳು ಜೀವಂತವಾಗಿ ಉಳಿಯಬಲ್ಲವು. ಕುವೆಂಪು, ಕಾರಂತರಂಥ ಮಹಾಕವಿಗಳು ಯುವ ಪೀಳಿಗೆಯ ಮನದಲ್ಲಿ ಉಳಿಯುಂತಾಗಲು ಸಾಂಸ್ಕೃತಿಕ ಕಲಾವೈಭವದ ರುಚಿ ಮುಟ್ಟಿಸುವ ಕೆಲಸವಾಗಬೇಕಿದೆ. ಅದಕ್ಕಾಗಿ ಡಾ| ವೀರೇಂದ್ರ ಹೆಗ್ಗಡೆಯವರು ವನರಂಗವನ್ನು ಸಮಾಜಕ್ಕೆ ಅರ್ಪಿಸಿದ್ದಾರೆ ಎಂದು ಧರ್ಮಸ್ಥಳದ ಹೇಮಾವತಿ ವೀ. ಹೆಗ್ಗಡೆ ಹೇಳಿದರು.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಯ ವತಿಯಿಂದ ಸೋಮವಾರ ಸಂಜೆ ಉಜಿರೆ ಕಾಲೇಜು ಕ್ರೀಡಾಂಗಣ ಬಳಿ ನಿರ್ಮಾನಗೊಂಡ ವನರಂಗ ಬಯಲು ರಂಗಮಂದಿರವನ್ನು ಉದ್ಘಾಟಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಡಾ| ವೀರೇಂದ್ರ ಹೆಗ್ಗಡೆ ಮಾತನಾಡಿ, ವಿದ್ಯಾ ಕ್ಷೇತ್ರದಲ್ಲಿ ನಾವಿಂದು ಸಾಂಸ್ಕೃತಿ ಕತೆಗೆ ಮಹತ್ವ ಕೊಡಬೇಕಾಗಿದೆ. ಶಿಕ್ಷಣವು ಸಂಸ್ಕಾರ ಕೊಡುವ ಕೆಲಸ ಮಾಡಬೇಕು, ಕಲಾ ನೈಪುಣ್ಯ ಒದಗಿಸುವಂಥದ್ದಾಗಬೇಕು ಎಂದರು.
ಹೇಮಾವತಿ ಹೆಗ್ಗಡೆ ಅವರ ಅಪೇಕ್ಷೆಯಂತೆ ಬಯಲು ರಂಗಮಂದಿರ ಮೂಡಿಬಂದಿದೆ. ಪೂಜ್ಯ ಮಂಜಯ್ಯ ಹೆಗ್ಗಡೆ ಸ್ವತಃ ಕಲಾವಿದರು, ತಂದೆ ರತ್ನವರ್ಮ ಹೆಗ್ಗಡೆ ಯಕ್ಷಗಾನ, ನಾಟಕಗಳಲ್ಲಿ ಬಹಳಷ್ಟು ಅಭಿರುಚಿ ಹೊಂದಿದ್ದರು. ಅವರ ಕನಸಿನಂತೆ ಮುಂದಿನ ದಿನಗಳಲ್ಲಿ ಈ ರಂಗಮಂದಿರವು ನಿತ್ಯವೂ ಕಲಾ ಬಳಕೆಗೆ ಯೋಗ್ಯವಾಗಲಿದೆ ಎಂದರು.
ಶಾಸಕ ಹರೀಶ್ ಪೂಂಜ ಮುಖ್ಯ ಅತಿಥಿಯಾಗಿ ದ್ದರು. ಉಜಿರೆ ಗ್ರಾ.ಪಂ. ಅಧ್ಯಕ್ಷ ಶ್ರೀಧರ ಪೂಜಾರಿ, ಡಿ.ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು. ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಎಸ್. ಪ್ರಭಾಕರ್, ಕಾರ್ಯದರ್ಶಿ ಡಾ| ಬಿ. ಯಶೋವರ್ಮ ಸ್ವಾಗತಿಸಿದರು. ಬಿ. ಸೋಮಶೇಖರ್ ಶೆಟ್ಟಿ ವಂದಿಸಿ
ದರು. ಡಾ| ಬಿ.ಎ. ಕುಮಾರ ಹೆಗ್ಡೆ ನಿರೂಪಿಸಿದರು.