Advertisement

ಉಜಿರೆ ಪ್ರಕರಣ: ಕಿಡ್ನಾಪರ್ಸ್ ಗೆ ಏಳು ಲಕ್ಷ ರೂ. ಗೆ ಸುಪಾರಿ, ಪ್ರಮುಖ ಆರೋಪಿಗಾಗಿ ಶೋಧ

05:31 PM Dec 19, 2020 | keerthan |

ಮಂಗಳೂರು: ಉಜಿರೆಯ ಎಂಟು ವರ್ಷದ ಬಾಲಕನ ಅಪಹರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದು, ಇವರಿಗೆ ಕೃತ್ಯವೆಸಗಲು ಸುಪಾರಿ ನೀಡಿದ ಆರೋಪಿಯ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ‌ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್ ಹೇಳಿದರು.

Advertisement

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಉಜಿರೆ ಬಾಲಕ ಅಭಿನವ್ ಅಪಹರಣ, ಆರೋಪಿಗಳ ಬಂಧನದ ಕುರಿತು ಮಾಹಿತಿ ನೀಡಿದರು.

ಮಂಡ್ಯದ ರಂಜಿತ್ (22), ಹನುಮಂತ್ (21), ಮೈಸೂರಿನ ಗಂಗಾಧರ (25) ಮತ್ತು ಬೆಂಗಳೂರಿನ ಕಮಲ್ (22) ಪ್ರಮುಖ ಆರೋಪಿಗಳು. ಮಂಜುನಾಥ ಎಂಬಾತನ (24)ನ ನೆರವಿನಿಂದ ಕೋಲಾರದ ಮಹೇಶ್ (26) ಮನೆಯಲ್ಲಿ ಮಗುವನ್ನು ಇಟ್ಟಿದ್ದರು ಎಂದರು.

ಬಾಲಕನ ಅಪಹರಣ ಪ್ರಕರಣ ಸಂಬಂಧ ಕೋಲಾರದಲ್ಲಿ ಬಾಲಕ ಪತ್ತೆಯಾಗಿದ್ದಾನೆ. ಸದ್ಯ ಆರು ಮಂದಿ ಆರೋಪಿಗಳನ್ನು ಕೋಲಾರದಲ್ಲಿ ಬಂಧಿಸಿದ್ದೇವೆ. ಈ‌ ಆರು ಜನರು ಅಪಹರಣ ಮಾಡಿದ್ದು ಆದರೆ ಇವರಿಗೆ ಅನ್ಯ ವ್ಯಕ್ತಿಯಿಂದ ಸುಪಾರಿ ನೀಡಲಾಗಿದೆ ಎಂದರು.

ಹೊರಗಿನ ವ್ಯಕ್ತಿಗಳು ಈ ಕುಟುಂಬದ ಬಗ್ಗೆ ವಿಚಾರಿಸುತ್ತಿದ್ದ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಅದರ ಆಧಾರದಲ್ಲೂ ನಾವು ಪತ್ತೆ ಕಾರ್ಯ ಆರಂಭಿಸಿದ್ದೆವು. ನಮ್ಮ ನಾಲ್ಕು ತಂಡ ಹಾಸನ, ಬೆಂಗಳೂರು, ಮೂಡಿಗೆರೆ ಮತ್ತು ಮಧುಗಿರಿಯಲ್ಲಿ ಕಾರ್ಯಾಚರಣೆ ನಡೆಸಿದೆ. ಇದರಲ್ಲಿ ಮಧುಗಿರಿಯಲ್ಲಿ ನಮಗೆ ಒಂದಷ್ಟು ಸುಳಿವು ಸಿಕ್ಕಿತ್ತು ಎಂದು ಕಾರ್ಯಾಚರಣೆಯ ಮಾಹಿತಿ ನೀಡಿದರು.

Advertisement

ಬಂಧಿತ ಆರೋಪಿಗಳಲ್ಲಿ ನಾಲ್ಕು ಜನರಿಗೆ ಹೊರಗಿನ ವ್ಯಕ್ತಿ ಏಳು ಲಕ್ಷ ಕೊಡುವುದಾಗಿ ಸುಪಾರಿ ಕೊಟ್ಟಿದ್ದರು. ಆತ ಈ ಕುಟುಂಬದ ಪರಿಚಯಸ್ಥ ಎಂಬ ಬಗ್ಗೆ ಮಾಹಿತಿಯಿದೆ. ಆತನ ಮಾಹಿತಿ ಲಭ್ಯವಾಗಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ. ಸುಪಾರಿ ನೀಡಿದ ವ್ಯಕ್ತಿ ಸಿಕ್ಕ ಬಳಿಕ ಅಪಹರಣದ ಸ್ಪಷ್ಟ ಉದ್ದೇಶ ಗೊತ್ತಾಗಲಿದೆ ಎಂದರು.

ಬಾಲಕನ ತಂದೆ ಕಳೆದ ಮೂರು ನಾಲ್ಕು ವರ್ಷಗಳ ಹಿಂದೆ ಬಿಟ್ ಕಾಯಿನ್ ನಲ್ಲಿ ಹೂಡಿಕೆ ಮಾಡಿದ್ದರು. ಅದನ್ನ ಸ್ವತಃ ಅವರೇ ತನಿಖೆ ವೇಳೆ ಒಪ್ಪಿಕೊಂಡಿದ್ದಾರೆ. ಆದರೆ ಅದರ ಮೌಲ್ಯ ಕುಸಿದಾಗ ಬಿಟ್ ಕಾಯಿನ್ ಮಾರಾಟ ಮಾಡಿದ್ದಾರೆ ಅಂದಿದ್ದಾರೆ ಎಂದು ಎಸ್ ಪಿ ಮಾಹಿತಿ ನೀಡಿದರು.

ಬಂಧಿತ ನಾಲ್ವರು ಮತ್ತು ನೆರವು ನೀಡಿದ ಇಬ್ಬರಿಗೆ ಈ ಕುಟುಂಬದ ಪರಿಚಯವಿಲ್ಲ. ಆದರೆ ಇವರಿಗೆ ಸುಪಾರಿ ಕೊಟ್ಟ ಮೂರನೇ ವ್ಯಕ್ತಿ ಕುಟುಂಬಕ್ಕೆ ಪರಿಚಯಸ್ಥನಾಗಿದ್ದ. ಅಪಹರಣಕಾರರು ಡಿ.7ರಿಂದ ನಿರಂತರವಾಗಿ ಕುಟುಂಬದ ಚಲನವಲನ ವೀಕ್ಷಿಸಿದ್ದಾರೆ. ಬಾಲಕನನ್ನು ಅಪಹರಿಸಿದ ಬಳಿಕ ಸುಳ್ಯ, ಮಡಿಕೇರಿ, ಮಂಡ್ಯ ಮೂಲಕ ಕೋಲಾರ ತಲುಪಿದ್ದಾರೆ. ಈ ದಾರಿ ಮಧ್ಯೆ ಅವರು ಬೇರೆ ಯಾವ ಜಾಗದಲ್ಲೂ ತಂಗಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next