ಬೆಳ್ತಂಗಡಿ: ಉಜಿರೆ ನಿವಾಸಿ ಎಂಟು ವರ್ಷದ ಮಗುವಿನ ಅಪಹರಣ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ತನಿಖೆ ಇನ್ನಷ್ಟು ಚುರುಕುಗೊಂಡಿದ್ದು, ಅಪಹರಣ ಪ್ರಕರಣ ಬೇಧಿಸಲು ನಾಲ್ಕು ತಂಡಗಳನ್ನು ರಚನೆ ಮಾಡಲಾಗಿದೆ ಎಂದು ಎಸ್ ಪಿ ಲಕ್ಷ್ಮೀಪ್ರಸಾದ್ ಹೇಳಿದರು.
ಅಪಹರಣಕ್ಕೆ ಒಳಗಾದ ಬಾಲಕನ ಮನೆಗೆ ಭೇಟಿ ನೀಡಿದ ಅವರು ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಪ್ರಕರಣದ ತನಿಖೆಗ ನಾಲ್ಕು ತಂಡಗಳನ್ನು ರಚನೆ ಮಾಡಲಾಗಿದೆ. ಅಪಹರಣಕಾರರು ಬಿಟ್ ಕಾಯಿನ್ ಯಾಕೆ ಕೇಳುತ್ತಿದ್ದಾರೆ ಎಂಬ ಕುರಿತು ತನಿಖೆ ಮುಂದುವರೆಸಲಾಗಿದೆ. ಆರೋಪಿಗಳು ಮನೆಮಂದಿಯ ಬಗ್ಗೆ ಬಲ್ಲವರೇ ಆಗಿರುವ ಸಾಧ್ಯತೆ ಕುರಿತು ಅನುಮಾನವಿದೆ ಎಂದರು.
ಇದನ್ನೂ ಓದಿ:ಉಜಿರೆ ಮಗು ಕಿಡ್ನಾಪ್ ಫಾಲೋಅಪ್: 17 ಕೋಟಿ ಬದಲು 10 ಕೋಟಿ ರೂ. ಬೇಡಿಕೆಯಿಟ್ಟ ಅಪಹರಣಕಾರರು
ಬಾಲಕನ ಮನೆಗೆ ಭೇಟಿ ನೀಡಿದ ಎಸ್.ಪಿ.ಲಕ್ಷ್ಮೀಪ್ರಸಾದ್ ಮನೆಮಂದಿಯೊಂದಿಗೆ ಸುದೀರ್ಘ ಮಾತುಕತೆ ನಡೆಸಿದರು. ಬಾಲಕ ಅಪಹರಣದ ಕುರಿತು ಹೆಚ್ಚಿನ ವಿಚಾರಣೆ ನಡೆಸಿದ ಅವರು, ಅಪಹರಣಕಾರರು ಪೋಷಕರೊಂದಿಗೆ ಮೆಸೇಜ್ ನಡೆಸುತ್ತಿರುವ ಕುರಿತು ಮಾಹಿತಿ ಪಡೆದರು.
ಬಂಟ್ವಾಳ ಡಿವೈಎಸ್.ಪಿ ವೆಲೆಂಟೈನ್ ಡಿಸೋಜ, ಬೆಳ್ತಂಗಡಿ ವೃತ್ತನಿರೀಕ್ಷಕ ಸಂದೇಶ್ ಪಿ.ಜಿ., ಉಪನಿರೀಕ್ಷಕ ನಂದಕುಮಾರ್, ಸಿಬಂದಿಗಳು ಇದ್ದರು.
ಉಜಿರೆ ಉದ್ಯಮಿ ರಥಬೀದಿ ನಿವಾಸಿ ಎ.ಕೆ.ಶಿವನ್ ಎಂಬುವರ ಮೊಮ್ಮಗ ಅನುಭವ್ (8) ವರ್ಷದ ಮಗುವನ್ನು ಗುರುವಾರ ಸಂಜೆ ಅಪಹರಣ ಮಾಡಲಾಗಿತ್ತು. ಮನೆ ಮುಂಭಾಗದಲ್ಲಿ ಆಟವಾಡುತ್ತಿದ್ದ ವೇಳೆ ಅಪರಿಚಿತರು ಕಾರಿನಲ್ಲಿ ಅಪಹರಣ ಮಾಡಿದ್ದರು.
ನಂತರ ಬಾಲಕನ ತಾಯಿಗೆ ಕರೆಮಾಡಿ 100 ಬಿಟ್ ಕಾಯಿನ್ ಅಂದರೆ 17 ಕೋಟಿ ರೂ. ನೀಡಲು ಬೇಡಿಕೆಯಿರಿಸಿದ್ದರು. ಇಂದು ಬಾಲಕನ ತಂದೆಯ ಜೊತೆಗೆ ಚಾಟಿಂಗ್ ನಡೆಸಿದ ಅಪಹರಣಕಾರರು ಹತ್ತು ಕೋಟಿ ರೂ. ನೀಡಲು ಬೇಡಿಕೆಯಿರಿಸಿದ್ದಾರೆ.