Advertisement

ಅನುಭವ್ ಅಪಹರಣದ ಹಿಂದೆ ಹಲವು ಆಯಾಮ:ಪರಿಚಿತರಿಂದಲೇ ಅಪಹರಣ ಶಂಕೆ! ಏನಿದು ಬಿಟ್ ಕಾಯಿನ್ ರಹಸ್ಯ?

08:16 AM Dec 19, 2020 | keerthan |

ಬೆಳ್ತಂಗಡಿ: ಮನೆಯಂಗಳದಲ್ಲಿ ಆಟವಾಡುತ್ತಿದ್ದ ಉಜಿರೆಯ ಎಂಟು ವರ್ಷದ ಬಾಲಕನ ಅಪಹರಣ ಪ್ರಕರಣ ಕಡೆಗೂ ಸುಖಾಂತ್ಯ ಕಂಡಿದೆ. ಕಾರ್ಯಾಚರಣೆ ನಡೆಸಿದ ಪೊಲೀಸರು ಬಾಲಕನನ್ನು ಸುರಕ್ಷಿತವಾಗಿ ಮರಳಿ ತರುವಲ್ಲಿ ಸಫಲರಾಗಿದ್ದಾರೆ. ಜೊತೆಗೆ ಏಳು ಮಂದಿ ಆರೋಪಿಗಳನ್ನೂ ಸೆರೆಹಿಡಿಯಲಾಗಿದೆ.

Advertisement

ಏನಿದು ಪ್ರಕರಣ

ಉಜಿರೆ ಉದ್ಯಮಿ ರಥಬೀದಿ ನಿವಾಸಿ ಎ.ಕೆ.ಶಿವನ್ ಎಂಬುವರ ಮೊಮ್ಮಗ ಅನುಭವ್ (8) ವರ್ಷದ ಮಗುವನ್ನು ಗುರುವಾರ ಸಂಜೆ ಮನೆ ಮುಂಭಾಗದಿಂದ ದುಷ್ಕರ್ಮಿಗಳು ಕಾರಿನಲ್ಲಿ ಅಪಹರಣ ಮಾಡಿದ್ದರು. ಮನೆ ಮಂದಿ ನೋಡನೋಡುತ್ತಿದ್ದಂತೆ ಸಿನಿಮೀಯ ರೀತಿಯಲ್ಲಿ ಬಾಲಕನ ಅಪಹರಣ ನಡೆಸಲಾಗಿತ್ತು.

ಬಿಟ್ ಕಾಯಿನ್ ಬೇಡಿಕೆ

ಗುರುವಾರ ರಾತ್ರಿ ಮಗುವಿನ ತಾಯಿಗೆ ಕರೆ ಮಾಡಿದ್ದ ದುಷ್ಕರ್ಮಿಗಳು 100 ಬಿಟ್ ಕಾಯಿನ್ ಅಂದರೆ 17 ಕೋಟಿ ರೂ. ನೀಡುವಂತೆ ಬೇಡಿಕೆಯಿಟ್ಟಿದ್ದರು. ಶುಕ್ರವಾರ ಬಾಲಕನ ತಂದೆಗೆ ಮೊಬೈಲ್ ಸಂದೇಶ ಕಳುಹಿಸಿದ್ದ ಅಪಹರಣಕಾರರು 60 ಬಿಟ್ ಕಾಯಿನ್ ಅಂದರೆ 10 ಕೋಟಿ ರೂ. ನೀಡುವಂತೆ ಬೇಡಿಕೆ ಇರಿಸಿದ್ದರು.

Advertisement

ಏನಿದು ಬಿಟ್‌ ಕಾಯಿನ್‌?
ಅಪಹರಣಕಾರರು 17 ಕೋಟಿ ರೂ. ಮೌಲ್ಯದ ಬಿಟ್‌ ಕಾಯಿನ್‌ ನೀಡುವಂತೆ ಹೇಳಿರುವುದರಿಂದ ಬಿಟ್‌ ಕಾಯಿನ್‌ ಎಂದರೇನು ಎಂದು ಸಾರ್ವಜನಿಕರಲ್ಲಿ ಕುತೂಹಲ ಮೂಡಿದೆ. ಬಿಟ್‌ ಕಾಯಿನ್‌ ಡಿಜಿಟಲ್‌ ಹಣಕಾಸು ಅಥವಾ ಡಿಜಿಟಲ್‌ ಕರೆನ್ಸಿ ಆಗಿದೆ. 800ರಷ್ಟು ಇಂತಹ ಕ್ರಿಪ್ಟೋಕರೆನ್ಸಿ ಗಳಿವೆ. ಮಿಥ್ಯಾ ಹಣದ ಮೂಲಕ ಸುಲಭವಾಗಿ ತಮ್ಮ ಹಣಕಾಸಿನ ವ್ಯವಹಾರಗಳನ್ನು ವಿಶ್ವಮಟ್ಟದಲ್ಲಿ ನಡೆಸಲು ಇದು ಪೂರಕವಾಗಿದೆ. ಈ ವಹಿವಾಟು ಸರಕಾರದ ಅಧೀನದಲ್ಲಿಯೇ ಬ್ಯಾಂಕುಗಳ ಮುಖಾಂತರ ನಡೆಯುತ್ತದೆ. ನಮ್ಮ ದೇಶದ ವಿತ್ತ ಸಚಿವಾಲಯ ಹಾಗೂಆರ್‌ಬಿಐ ಸದ್ಯಕ್ಕೆ ಈ ಹಣಕ್ಕೆ ಭಾರತದಲ್ಲಿ ಸರಕಾರದ ಮಾನ್ಯತೆ ಇಲ್ಲ ಎಂದಿವೆ. ಹೀಗಿರುವಾಗ ಇಲ್ಲಿ ಬಿಟ್‌ ಕಾಯಿನ್‌ ವಿಚಾರ ಏಕೆ ಬಂತು ಎಂಬುದು ತನಿಖೆಯ ಬಳಿಕ ಸ್ಪಷ್ಟವಾಗಬೇಕಿದೆ.

ಪೊಲೀಸರ ಶೋಧ

ಅಪಹರಣದ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ತಂಡ ರಚಿಸಿ ತನಿಖೆ ಕೈಗೆತ್ತಿಕೊಂಡಿದ್ದರು. ಮುಂಡಾಜೆ ಹಾಗೂ ಕೊಟ್ಟಿಗೆಹಾರದಲ್ಲಿ ನಾಕಾಬಂದಿ ವಿಧಿಸಲಾಗಿತ್ತು. ಅಪಹರಣಕಾರರ ಮೊಬೈಲ್ ನೆಟ್ವರ್ಕ್ ಆಧರಿಸಿಯೂ ಹುಡುಕಾಟ ಆರಂಭವಾಗಿತ್ತು.

ಪರಿಚಿತರಿಂದಲೇ ಕೃತ್ಯ ಶಂಕೆ

ಬಾಲಕನ ತಂದೆ ಬಿಜೋಯ್ ಅವರ ವ್ಯವಹಾರಗಳ ಮಾಹಿತಿ ಇರುವವರೇ ಈ ಕೃತ್ಯ ನಡೆಸಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಕುಟುಂಬಕ್ಕೆ ಪರಿಚಯ ಇರುವವರೆ ಕೆಲವು ದಿನಗಳಿಂದ ಸ್ಕೆಚ್ ಹಾಕಿ, ಬಾಲಕನ ಚಲನವಲನಗಳನ್ನು ಗಮನಿಸಿ ಅಪಹರಣ ಮಾಡಿದ್ದಾರೆ ಎನ್ನಲಾಗಿದೆ.

ಎಸ್ ಪಿ ಭೇಟಿ

ಶುಕ್ರವಾರ ದ.ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ ಲಕ್ಷ್ಮೀ ಪ್ರಸಾದ್ ಅವರು ಬಾಲಕನ ಮನೆಗೆ ಭೇಟಿ ನೀಡಿ ಮಾಹಿತಿ ಕಲೆಹಾಕಿದ್ದರು.

ಕೋಲಾರದಲ್ಲಿ ಸೆರೆ

ಬಾಲಕ ಅನುಭವ್ ನನ್ನು ಕೋಲಾರದಲ್ಲಿ ರಕ್ಷಿಸಲಾಗಿದೆ. ಸ್ಥಳೀಯ ಪೊಲೀಸರ ನೆರವಿನಿಂದ, ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ., ಉಪನಿರೀಕ್ಷಕ ನಂದಕುಮಾರ್, ಧರ್ಮಸ್ಥಳ ಠಾಣೆ ಉಪನಿರೀಕ್ಷಕ ಪವನ್ ಕುಮಾರ್ ತಂಡವು ವಿಶೇಷ ಕಾರ್ಯಾಚರಣೆ ನಡೆಸಿ ಕೋಲಾರದ ಮಾಸ್ತಿ ಠಾಣಾ ವ್ಯಾಪ್ತಿಯಲ್ಲಿ ಮಗುವನ್ನು ಸುರಕ್ಷಿತವಾಗಿ ಮರಳಿ ಪಡೆದಿದ್ದಾರೆ. ಇದೇ ವೇಳೆ ಏಳು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.

ಘಟನೆ ನಡೆದ 48 ಗಂಟೆಗಳೊಳಗೆ ಪೊಲೀಸರು ಪ್ರಕರಣ ಬೇಧಿಸಿದ್ದಾರೆ. ಆರೋಪಿಗಳನ್ನು ಕೋಲಾರ ಪೊಲೀಸ್ ಠಾಣೆಗೆ ಕರೆದೊಯ್ದು ಬಳಿಕ ಬೆಳ್ತಂಗಡಿ ಠಾಣೆಗೆ ಕರೆತರಲಾಗುತ್ತಿದೆ.

ಅಂತೂ ಕಳೆದೆರಡು ದಿನಗಳಿಂದ ಕರಾವಳಿ ಭಾಗದಲ್ಲಿ ಭಾರಿ ಸಂಚಲನ ಮೂಡಿಸಿದ್ದ ಬಾಲಕನ ಕಿಡ್ನಾಪ್ ಪ್ರಕರಣ ಸುಖಾಂತ್ಯ ಕಂಡಿದೆ. ಅಪಹರಣದ ಹಿಂದಿನ ಕಾರಣಗಳು ಇನ್ನಷ್ಟೇ ಬೆಳಕಿಗೆ ಬರಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next