Advertisement

ಉಜಳಂಬದಲ್ಲಿಂದು ಸಿಎಂ ಗ್ರಾಮ ವಾಸ

10:24 AM Jun 27, 2019 | Naveen |

ವೀರಾರೆಡ್ಡಿ ಆರ್‌.ಎಸ್‌.
ಬಸವಕಲ್ಯಾಣ:
ಸಿಎಂ ಎಚ್.ಡಿ. ಕುಮಾರಸ್ವಾಮಿ ಗುರುವಾರ ಗ್ರಾಮ ವಾಸ್ತವ್ಯ ಮಾಡಲಿರುವ ಗಡಿ ತಾಲೂಕಿನ ಕುಗ್ರಾಮ ಉಜಳಂಬ ಗ್ರಾಮ ಮದುಮಗಳಂತೆ ಸಿಂಗಾರವಾಗಿದೆ. ಪ್ರಥಮ ಬಾರಿಗೆ ಆಗಮಿಸುತ್ತಿರುವ ಸಿಎಂ ಸ್ವಾಗತಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಹಾರಾಷ್ಟ್ರ ಗಡಿಗೆ ಅಂಟಿಕೊಂಡಿರುವ ಮತ್ತು ಕನ್ನಡವೇ ಗೊತ್ತಿಲ್ಲದ ಉಜಳಂಬ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮಾಡುತ್ತಿರುವುದು ವಿಶೇಷವಾಗಿದೆ.

Advertisement

ಗ್ರಾಮ ರಚನೆ ಆದಾಗಿನಿಂದಲು ಉಜಳಂಬ ಅಭಿವೃದ್ಧಿ ಕಂಡಿಲ್ಲ. ಹಲವು ವರ್ಷಗಳಿಂದ ಈಡೇರದ ಗ್ರಾಮಸ್ಥರ ಬೇಡಿಕೆಗಳು ಸಿಎಂ ವಾಸ್ತವ್ಯ ಮೂಲಕ ಕೆಲವು ದಿನದೊಳಗೆ ಅಭಿವೃದ್ಧಿಯಾಗಿರುವುದು ಎಲ್ಲಿಲ್ಲದ ಖುಷಿ ಮೂಡಿಸಿದೆ.

ಸಿಎಂ ವಾಸ್ತವ್ಯ ಮಾಡುವ ಸರ್ಕಾರಿ ಶಾಲೆ ಆವರಣದಲ್ಲಿ ಶಿಥಿಲಾವಸ್ಥೆಯಲ್ಲಿದ್ದ 12 ಕೋಣೆಗಳನ್ನು ನೆಲಸಮ ಮಾಡಿ ಅವಶ್ಯಕತೆಗೆ ತಕ್ಕಂತೆ ಹೊಸ ಕೋಣೆ ನಿರ್ಮಿಸಲಾಗುತ್ತಿದೆ. ಕೆಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ನಿರಂತರ ಜ್ಯೋತಿ ಯೋಜನೆಯಡಿ ಮನೆ-ಮನೆಗೆ ವಿದ್ಯುತ್‌ ಸಂಪರ್ಕ ಕಲ್ಪಿಸುವ ಕಾಮಗಾರಿ ಭರದಿಂದ ನಡೆದಿದೆ ಹಾಗೂ ಕುಡಿಯುವ ನೀರಿನ ಮತ್ತು ಚರಂಡಿ ಸಮಸ್ಯೆ ಸಹ ಬಗೆಹರಿಸಲಾಗಿದೆ. ಗ್ರಾಪಂ, ಪ್ರಾಥಮಿಕ ಆರೋಗ್ಯ ಕೇಂದ್ರ, ಶಾಲೆ ಹಾಗೂ ಅಂಗನವಾಡಿ ಕೇಂದ್ರಗಳನ್ನು ಅಚ್ಚುಕಟ್ಟಾಗಿ ಸ್ವಚ್ಛಗೊಳಿಸಿ ಬಣ್ಣ ಹಚ್ಚಿ ವಿದ್ಯುತ್‌ ದೀಪಗಳಿಂದ ಅಲಂಕಾರ ಮಾಡಲಾಗಿದೆ.

ಬೃಹತ್‌ ಪೆಂಡಾಲ್ ನಿರ್ಮಾಣ: ಮಳೆ ಬಂದರೂ ಸಾರ್ವಜನಿಕರಿಗೆ ಹಾಗೂ ಕಾರ್ಯಕ್ರಮಕ್ಕೆ ಯಾವುದೇ ತೊಂದರೆಯಾಗದಂತೆ ಬೃಹತ್‌ ಪೆಂಡಾಲ್ ನಿರ್ಮಿಸಲಾಗಿದೆ. ಅಹವಾಲು ಸ್ವೀಕರಿಸುವ ಜತೆಗೆ ಸಭೆ ನಡೆಯಲಿದೆ. ಸುಮಾರು 5 ಸಾವಿರಕ್ಕೂ ಅಧಿಕ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರು ಹಾಗೂ ಅಂಗವಿಕಲರಿಗೆ ಮನವಿ ಸಲ್ಲಿಸಲು ಪ್ರತ್ಯೇಕ 10 ಕೌಂಟರ್‌ ವ್ಯವಸ್ಥೆ ಮಾಡಲಾಗಿದೆ. ಸರ್ಕಾರಿ ಶಾಲೆ ಪ್ರವೇಶದ ಬಾಗಿಲು ಎದುರು ಗಣ್ಯರು, ಅಧಿಕಾರಿಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.

ಗ್ರಾಮಸ್ಥರ ಬೇಡಿಕೆ ಘೋಷಣೆ: ಸಹಕಾರ ಸಚಿವ ಬಂಡೆಪ್ಪ ಖಾಶೆಂಪುರ ಸಿಎಂ ಬರುವ ಮುನ್ನವೇ ಗ್ರಾಮೀಣ ಸಂತೆಗಾಗಿ 1 ಕೋಟಿ ರೂ. ಮಂಜೂರು ಮಾಡಿದ್ದಾರೆ ಹಾಗೂ ಸಿಎಂ ಎಚ್‌ಡಿಕೆ ಅವರಿಂದಲೇ ಪಿಕೆಪಿಎಸ್‌ ಉದ್ಘಾಟನೆ ಮಾಡಿಸಲಾಗುವುದು ಎಂದು ಈಗಾಗಲೇ ಭರವಸೆ ನೀಡಿದ್ದಾರೆ.

Advertisement

ಊಟದ ವ್ಯವಸ್ಥೆ: ಮುಖ್ಯಮಂತ್ರಿ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಬಂದವರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಮುಖ್ಯ ವೇದಿಕೆ ಪಕ್ಕದಲ್ಲಿ ಕುಡಿಯುವ ನೀರು ಹಾಗೂ ಊಟದ ವ್ಯವಸ್ಥೆ ಮಾಡಲಾಗಿದೆ. ಅದಕ್ಕಾಗಿಯೇ ಪ್ರತ್ಯೇಕ ಪೆಂಡಾಲ್ ಹಾಕಲಾಗಿದೆ. ಉಜಳಂಬ ಗ್ರಾಮದಲ್ಲಿ 413 ಜನ ರೈತರಿದ್ದಾರೆ. ರೈತರ ಖಾತೆಯಲ್ಲಿ ಈಗಾಗಲೇ 1.36 ಕೋಟಿ ರೂ. ಬೆಳೆ ಸಾಲ ಜಮಾ ಮಾಡಲಾಗಿದೆ. ಉಳಿದ 167 ರೈತರ 55 ಲಕ್ಷ ರೂ. ಸಾಲ ಮನ್ನಾ ಮಾಡುತ್ತಾರೆ ಎಂಬ ನಿರೀಕ್ಷೆಯಲ್ಲಿ ಇದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next