Advertisement
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಅಭಿವೃದ್ಧಿ ಸಹಕಾರ ಮತ್ತು ಮೇಲ್ವಿಚಾರಣಾ ಸಮಿತಿ (ದಿಶಾ) ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
Related Articles
Advertisement
ಕೇವಲ 8 ಸಾವಿರ ಎಕರೆಯಲ್ಲಿ ಸ್ಥಾಪಿಸಿರುವ ಜಿಂದಾಲ್ ಸಂಸ್ಥೆಯಲ್ಲಿ 32 ಸಾವಿರ ಜನರು ನೇರವಾಗಿ ಉದ್ಯೋಗ ಮಾಡುತ್ತಿದ್ದಾರೆ. ಗುತ್ತಿಗೆ ಆಧಾರದಲ್ಲಿ ಸಾಕಷ್ಟು ಜನರು ಕೆಲಸ ಮಾಡುತ್ತಿದ್ದಾರೆ. ಇನ್ನು 10 ಸಾವಿರ ಎಕರೆಯಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಿದ್ದರೆ ಎಷ್ಟು ಸಾವಿರ ಜನರಿಗೆ ಉದ್ಯೋಗ ಕೊಡಬಹುದಾಗಿತ್ತು. ಹಾಗಾಗಿ ಕೂಡಲೇ ಸಂಬಂಧಪಟ್ಟ ಕಂಪನಿಗಳಿಗೆ ನೋಟಿಸ್ ನೀಡಿ ಮುಂದಿನ ಕ್ರಮ ಕೈಗೊಳ್ಳಬೇಕು. ಕಂಪನಿಗಳು ಜಮೀನುಗಳಲ್ಲಿ ಕೈಗಾರಿಕೆ ಸ್ಥಾಪಿಸಿ, ರೈತರ ಮಕ್ಕಳಿಗೆ ಉದ್ಯೋಗ ಕೊಡಬೇಕು. ಇಲ್ಲದಿದ್ದಲ್ಲಿ ರೈತರಿಗೆ ಜಮೀನು ವಾಪಸ್ ನೀಡಬೇಕು. ಮುಂದಿನ ಸಭೆಯೊಳಗೆ ಕಂಪನಿಗಳ ವಿರುದ್ಧ ಕೈಗೊಂಡಿರುವ ಕ್ರಮಗಳ ಬಗ್ಗೆ ಸಮಗ್ರ ವರದಿ ನೀಡಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಇನ್ನು ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ಶೇ.80 ರಷ್ಟು ಅನುದಾನ ಬಳಸಿಕೊಂಡು ಫುಡ್ ಪಾರ್ಕ್ ನಿರ್ಮಿಸುವ ಕುರಿತು ಚರ್ಚಿಸಿದರು. ಈ ಬಗ್ಗೆ ಡಿಪಿಎಆರ್ ಸಿದ್ಧಪಡಿಸಲು ಪ್ರಸ್ತಾವನೆ ಸಲ್ಲಿಸಿದರೆ ಸಂಸದರ ನಿಧಿಯಲ್ಲಿ ಅನುದಾನ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದರು.
ಪುರಾತತ್ವ ಇಲಾಖೆ ಅಧಿಕಾರಿಗೆ ತರಾಟೆ: ಇದಕ್ಕೂ ಮುನ್ನ ಮೊದಲ ಸಭೆಯಾಗಿದ್ದರಿಂದ ಅಧಿಕಾರಿಗಳನ್ನು ಪರಿಚಯಿಸಿಕೊಂಡ ಉಗ್ರಪ್ಪ, ಕೇಂದ್ರ ಪುರಾತತ್ವ ಮತ್ತು ಸರ್ವೇಕ್ಷಣ ಇಲಾಖೆಯ ಅಧಿಕಾರಿ ಸೋಮ್ಲಾನಾಯ್ಕ ಅವರನ್ನು ತರಾಟೆಗೆ ತೆಗೆದುಕೊಂಡರು. ಸರ್ವೇಕ್ಷಣ ಇಲಾಖೆ ವ್ಯಾಪ್ತಿಯಲ್ಲಿ ಜಿಲ್ಲೆಯಲ್ಲಿ ಎಷ್ಟು ಸ್ಮಾರಕಗಳಿವೆ. ಜಿಲ್ಲೆಯ ಆದಾಯ ಎಷ್ಟಿದೆ. ಅದು ಎಲ್ಲಿ ಹೋಗುತ್ತೆ. ಬಳ್ಳಾರಿ ಕೋಟೆ ಸಂಕ್ಷಣೆಯಲ್ಲಿ ನಿಮ್ಮ ಪಾತ್ರವೇನು? ಕೋಟೆಯ ದ್ವಾರಬಾಗಿಲು ಅಭಿವೃದ್ಧಿ ಮಾಡೋರು ಯಾರು? ಯಾವ ಯಾವ ಕ್ರಮ ಕೈಗೊಂಡಿದ್ದೀರಿ? ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸೋಮ್ಲಾನಾಯ್ಕ, ಹಂಪಿಗೆ ಪ್ರವಾಸಿಗಳಿಂದ ಬರುವ ಆದಾಯ ಕೇಂದ್ರ ಸರ್ಕಾರದ ಸಚಿವಾಲಯ ಖಾತೆಗೆ ಜಮೆ ಮಾಡಲಾಗುತ್ತದೆ ಎಂದಾಗ ಸೊಮ್ಮು ಒಕ್ಕಡಿದಿ, ಸೋಕೊಕ್ಕಡಿದಿ ಎಂದು ವ್ಯಂಗ್ಯವಾಡಿದರು.
ಪ್ರತಿಕ್ರಿಯಿಸಿದ ಸೋಮ್ಲಾನಾಯ್ಕ, ಕಳೆದ ವರ್ಷ ಕೇಂದ್ರ ಸರ್ಕಾರದಿಂದ 6.5 ಕೋಟಿ ರೂ. ಅನುದಾನ ಬಂದಿದೆ. 3 ಕೋಟಿ ರೂ. ಕಾರ್ಮಿಕರಿಗೆ ವೇತನ ನೀಡಲಾಗುತ್ತದೆ. 1.5 ಕೋಟಿ ರೂ.ಗಳಲ್ಲಿ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಉಳಿದ 2 ಕೋಟಿ ರೂ. ಬಳಕೆ ಮಾಡಿಲ್ಲ. ಪ್ರತಿವರ್ಷ ಹಂಪಿಗೆ 10 ರಿಂದ 12 ಸಾವಿರ ಪ್ರವಾಸಿಗರು ಬರುತ್ತಾರೆ ಎಂದು ಮಾಹಿತಿ ನೀಡಿದರು.
ಇದಕ್ಕೆ ಮಧ್ಯೆ ಪ್ರವೇಶಿಸಿದ ಉಗ್ರಪ್ಪ, ನಿಮ್ಮವರೇ ನೀಡಿದ ವರದಿಯಲ್ಲಿ ವರ್ಷಕ್ಕೆ ಭಾರತೀಯರು ಸೇರಿದಂತೆ 10 ರಿಂದ 12 ಲಕ್ಷ ಪ್ರವಾಸಿಗರು ಬರುತ್ತಾರೆ ಎಂದಿದೆ. ನೀವು ಸರಿಯಾದ ಮಾಹಿತಿ ನೀಡುತ್ತಿಲ್ಲ ಎಂದು ಉಗ್ರಪ್ಪ ಅಸಮಾಧಾನ ವ್ಯಕ್ತಪಡಿಸಿದರು.
ನಂತರ ಲೋಕೋಪಯೋಗಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸೇರಿದಂತೆ ಇನ್ನಿತರೆ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು.
ಜಿಲ್ಲಾಧಿಕಾರಿ ಡಾ| ರಾಮ್ ಪ್ರಸಾತ್ ಮನೋಹರ್, ಜಿಪಂ ಸಿಇಒ ಡಾ| ಕೆ.ವಿ.ರಾಜೇಂದ್ರ, ಜಿಪಂ ಅಧ್ಯಕ್ಷೆ ಸಿ.ಭಾರತಿ, ಪ್ರಭಾರಿ ಎಸಿ ನಂದಿನಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.