Advertisement

ಯುಜಿಡಿ ಕಾಮಗಾರಿ ಕಳಪೆ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

03:11 PM Oct 01, 2020 | sudhir |

ಬ್ಯಾಡಗಿ: ಪಟ್ಟಣದಲ್ಲಿ ನಡೆಯುತ್ತಿರುವ ಒಳಚರಂಡಿ(ಯುಜಿಡಿ) ಹಾಗೂ ನಿರಂತರ ಕುಡಿಯುವ ನೀರಿನ ಯೋಜನೆ ಕಾಮಗಾರಿ ಕಳಪೆಯಾಗಿದ್ದು, ಕೂಡಲೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ, ರಾಜ್ಯ ಮಾನವ ಹಕ್ಕುಗಳ ನಿರ್ಮೂಲನೆ ಹಾಗೂ ಭ್ರಷ್ಟಾಚಾರ ನಿರ್ಮೂಲನಾ ಸಮಿತಿ ಸದಸ್ಯರು ಪುರಸಭೆ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿಯ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಲಕ್ಷ್ಮೀ ಜಿಂಗಾಡೆ, ಮಳೆಗಾಲ ಆರಂಭವಾಗಿದ್ದು, ಒಳಚರಂಡಿ ಕಾಮಗಾರಿ ಅಪೂರ್ಣಗೊಂಡಿದೆ. ರಸ್ತೆಯಲ್ಲಿ ಉಂಟಾಗಿರುವ ತಗ್ಗು ಗುಂಡಿಗಳಿಂದ ಪಟ್ಟಣದ ನಿವಾಸಿಗಳು ಬೇಸತ್ತು ಹೋಗಿದ್ದಾರೆ. ಇಂತಹ ತಗ್ಗು ಗುಂಡಿಗಳಲ್ಲಿ ಬಿದ್ದು ಗಾಯಗೊಂಡು ನೋವು ಅನುಭವಿಸಿದವರಿಗೇನೂ ಕೊರತೆಯಿಲ್ಲ. ಇದಕ್ಕೆ ಯುಜಿಡಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ನಿರ್ಲಕ್ಷವೇ ಕಾರಣ ಎಂದು ಆರೋಪಿಸಿದರು.

ಅರ್ಧಕ್ಕಿಂತ ಹೆಚ್ಚು ಸಿಬ್ಬಂದಿ ಪಲಾಯನ: ಪಟ್ಟಣದಲ್ಲಿ ಕಳೆದ 4 ವರ್ಷಗಳ ಹಿಂದೆ ಆರಂಭವಾದ 66 ಕೋಟಿ ರೂ. ವೆಚ್ಚದ ಯುಜಿಡಿ ಕಾಮಗಾರಿ ಕುಂಟುತ್ತಲೇ ಸಾಗಿದೆ. ಅವಧಿ  ಮುಗಿದರೂ ಇನ್ನೂ ಗುತ್ತಿಗೆದಾರರು ಕಾಮಗಾರಿ ಪೂರ್ಣಗೊಳಿಸಿಲ್ಲ. ಗುತ್ತಿಗೆದಾರರ ಯಡವಟ್ಟುಗಳನ್ನು ಪ್ರಶ್ನಿಸುವವರೇ ಇಲ್ಲದಂತಾಗಿದೆ. ಪುರಸಭೆ ಅಧಿ ಕಾರಿಗಳಂತೂ ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಿದ್ದಾರೆ. ಇದರಿಂದ ಕಾಮಗಾರಿ ಪೂರ್ಣಗೊಳ್ಳುವ ಮುನ್ನವೇ ಗುತ್ತಿಗೆದಾರರು ಕೊರೊನಾ ನೆಪವೊಡ್ಡಿ ಅರ್ಧಕ್ಕಿಂತ ಹೆಚ್ಚು ಕೆಲಸಗಾರರನ್ನು ತೆಗೆದು ಹಾಕಿದ್ದಾರೆಂದು ದೂರಿದರು.

ಕಾಮಗಾರಿ ಕಳಪೆ: ಸಮಿತಿ ತಾಲೂಕು ಅಧ್ಯಕ್ಷ ಹನುಮಂತಪ್ಪ ಬುಡಪನಹಳ್ಳಿ ಮಾತನಾಡಿ, ಅಭಿವೃದ್ಧಿ ಕಾಮಗಾರಿಗಳು ಪಟ್ಟಣಕ್ಕೆ ಅವಶ್ಯಕ. ಅಂತಾರಾಷ್ಟ್ರೀಯ ಖ್ಯಾತಿಯ ಮೆಣಸಿನಕಾಯಿ ಮಾರುಕಟ್ಟೆ ಹೊಂದಿರುವ ಬ್ಯಾಡಗಿ ಪಟ್ಟಣವನ್ನು ನೈರ್ಮಲ್ಯವಾಗಿಸಲು 2016ರಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಯೋಜನೆಯಡಿ 64.49 ಕೋಟಿ ರೂ. ವೆಚ್ಚದಲ್ಲಿ ಯುಜಿಡಿ ಕಾಮಗಾರಿ ಆರಂಭವಾಗಿದೆ.

ಆದರೆ, ಪ್ರಗತಿಯ ಲ್ಲಿರುವ ಕಾಮಗಾರಿ ಉದ್ಘಾಟನೆಗೂ ಮುನ್ನವೇ ಹೊಸದೊಂದು ಸಮಸ್ಯೆ ಸೃಷ್ಟಿಯಾಗಿರುವುದರಲ್ಲಿ ಸಂಶಯವಿಲ್ಲ ಎಂದರು.

Advertisement

ಯುಜಿಡಿಯವರ ಕೈಯಲ್ಲಿದೆ ಜನರ ಜೀವ: ಪಟ್ಟಣದಲ್ಲಿರುವ ಅತ್ಯಂತ ಚಿಕ್ಕದಾದ ರಸ್ತೆಗಳಲ್ಲೂ ಸಹ ಯುಜಿಡಿ ಕಾಮಗಾರಿ ಆರಂಭವಾಗಿದೆ. ವೇಗ ಮಿತಿಯಿಲ್ಲದೇ ಸಂಚರಿಸುವ ವಾಹನ ಸವಾರರು ಗುಂಡಿಗಳ ಬಗ್ಗೆ ಗಮನ ಕೊಡದೇ ಹೋದರೆ ಕಥೆ ಮಗಿಯಿತು. ಮಳೆಗಾಲದಲ್ಲಂತೂ ರಸ್ತೆ ಮೇಲೆ ಬಿದ್ದಿರುವ ಮಣ್ಣು ಕೆಸರಾಗಿ ಪರಿವರ್ತನೆಯಾಗಿದ್ದು, ಇದರಿಂದ ದ್ವಿಚಕ್ರ ವಾಹನ ಸವಾರರಿಗೆ ಅಪಾಯ ಕಟ್ಟಿಟ್ಟ ಬುತ್ತಿ. ಆದರೆ, ಎಲ್ಲ ರಸ್ತೆಗಳಲ್ಲೂ ಮಣ್ಣಿನ ಗುಡ್ಡೆಗಳು ಮಾತ್ರ ಹಾಗೆಯೇ ಇವೆ. ಈ ಬಗ್ಗೆ ಗಮನ ಹರಿಸಬೇಕಾದ ಯುಜಿಡಿ ಅ ಧಿಕಾರಿಗಳು ಮಾತ್ರ ಎಚ್ಚೆತ್ತುಕೊಂಡಿಲ್ಲ ಎಂದು ಆರೋಪಿಸಿದರು.

ಕಾಮಗಾರಿ ಬಿಲ್‌ ತಡೆಹಿಡಿಯಿರಿ: ಮುಖ್ಯರಸ್ತೆ ಅಗಲೀಕರಣ ಕಾಮಗಾರಿ ವಿಳಂಬವಾಗಿದ್ದರಿಂದ ಎರಡೂ ಕಡೆಗಳಲ್ಲಿ ಚರಂಡಿಗಳಿಲ್ಲ. ಆದರೆ, ಯುಜಿಡಿ ಕಾಮಗಾರಿ ಆರಂಭಿಸದಿರುವುದು ವಿಪರ್ಯಾಸದ ಸಂಗತಿ. ಮಳೆಗಾಲದಲ್ಲಿ ಮುಖ್ಯರಸ್ತೆ ಜಲಾವೃತಗೊಂಡು ನಡುಗಡ್ಡೆಯಂತಾಗಲಿದೆ. ಬೃಹತ್‌ ವಾಹನ ಸಂಚರಿಸಿದಾಗ ಅಂಗಡಿಯೊಳಕ್ಕೆ ನೀರು ನುಗ್ಗುತ್ತಿದೆ. ಇಷ್ಟಾದರೂ ಅಧಿಕಾರಿಗಳು ತಾತ್ಕಾಲಿಕ ಪರಿಹಾರ ಕಂಡುಕೊಳ್ಳದಿರುವುದು ವಿಪರ್ಯಾಸದ ಸಂಗತಿಯಾಗಿದೆ. ಹಾಗಾಗಿ, ಕೂಡಲೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮತ್ತು ಗುಣಮಟ್ಟದ ಕಾಮಗಾರಿ ನಡೆಸುವವರೆಗೂ ಸಂಬಂಧಿಸಿದ ಬಿಲ್‌ ಗಳನ್ನು ಪಾಸ್‌ ಮಾಡದಂತೆ ಆಗ್ರಹಿಸಿ ಪುರಸಭೆ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಹ್ಮದ್‌ ರಫೀಕ್ ಆಡೂರ, ಗಣೇಶ ಪಾತ್ರೋಟಿ, ಈರಣ್ಣ ಬಡಿಗೇರ, ಕರಬಸಪ್ಪ ನವಲೆ, ವಿಷ್ಣು ಜಿಂಗಾಡೆ, ಮಂಜುಳಾ ಬಣಕಾರ, ಉಸ್ಮಾನ ಎರೇಶೀಮಿ, ಲೋಹಿತ್‌ ಉಜನಿ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next