ತುಮಕೂರು: (ಗ್ರಾಮಾಂತರ): ಕಲ್ಪತರು ನಾಡು ತುಮಕೂರು ಜಿಲ್ಲೆಗೆ ಜೀವನಾಡಿಯಾಗಿರುವ ಹೇಮೆಗೆ ತುಮಕೂರು ನಗರದ ವಾರ್ಡ್‌ಗಳೇ ಕಂಟಕವಾಗಿ ಪರಿಣಮಿಸಿವೆ. ಹೌದು, ತುಮಕೂರು ನಗರದ ವಾರ್ಡ್ ಗಳಿಂದ ಉತ್ಪತ್ತಿಯಾಗುವ ಯುಜಿಡಿ ಮತ್ತು ಕಲುಷಿತ ನೀರು ಕುಣಿಗಲ್ ಭಾಗಕ್ಕೆ ಹಾದುಹೋಗಿರುವ ಹೇಮಾವತಿ ಒಡಲಿದೆ ಸೇರುತ್ತಿದ್ದು, ಕುಣಿಗಲ್ ಭಾಗದ ಜನತೆಯ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಅಪಾಯ ಎದುರಾಗಿದೆ.
ಹೇಮಾವತಿ ಒಡಲಿಗೆ ಚರಂಡಿ, ಯುಜಿಡಿ ನೀರು: ತುಮಕೂರು ನಗರದ ರಿಂಗ್ ರಸ್ತೆಯ ಹಿಂಭಾಗದಲ್ಲಿ ಯುಜಿಡಿ ಪ್ಲಾಂಟ್ ಬಳಿ ಒಂದೆಡೆ ಯುಜಿಡಿ ನೀರು ಹಾಗೂ ಮತ್ತೂಂದೆಡೆ ಕಲುಷಿತ ನೀರು ಸೇರುತ್ತಿದೆ. ಯುಜಿಡಿ ಪ್ಲಾಂಟ್ ಬಳಿ ರೈಲು ಹಳಿ ಹಾದು ಹೋಗಿದ್ದು, ರೈಲು ಹಳಿಯ ಒಂದು ಭಾಗದಲ್ಲಿ ಕೊಳಚೆ ನೀರು ಹಾದುಹೋಗುವ ಚಾನೆಲ್ ಇದೆ. ಇನ್ನೊಂದು ಭಾಗದಲ್ಲಿ ಯುಜಿಡಿ ಪ್ಲಾಂಟ್ ಇದೆ. ಕುಣಿಗಲ್ ಭಾಗಕ್ಕೆ ಹಾದುಹೋಗಿರುವ ಚಾನೆಲ್ ಮೇಲ್ಭಾಗದಲ್ಲಿ ಚರಂಡಿ ನೀರು ಹೋಗುವ ಚಾನೆಲ್ ನಿಂದ ಕೆಳಭಾಗದಲ್ಲಿ ಹಾದು ಹೋಗಿರುವ ಹೇಮಾವತಿ ಚಾನೆಲ್‌ಗೆ ಕೊಳಚೆ ನೀರು ಧುಮ್ಮಿಕ್ಕುತ್ತಿದೆ. ಇತ್ತ ಯುಜಿಡಿ ಪ್ಲಾಂಟ್ ನಿಂದಲೂ ಸಹ ಯುಜಿಡಿ ನೀರು ಸೋರಿಕೆಯಾಗಿ ನೇರವಾಗಿ ಹೇಮಾವತಿ ಒಡಲಿಗೆ ಸೇರುತ್ತಿದೆ.
ಶಾಸಕರೇ ಎಚ್ಚರ: ತುಮಕೂರಿನಿಂದ ಕುಣಿಗಲ್ ಕಡೆ ಹರಿಯುವ ಹೇಮಾವತಿ ನಾಲೆಗೆ ತುಮಕೂರಿನ ಭೀಮಸಂದ್ರ ಸಮೀಪದ ರಿಂಗ್ ರಸ್ತೆಯಲ್ಲಿ ಹಾದುಹೋಗಿರುವ ನಾಲೆಗೆ ಚರಂಡಿ, ಯುಜಿಡಿ ನೀರು ಹರಿದು ಸೇರುತ್ತಿದೆ. ಕುಣಿಗಲ್ ಭಾಗಕ್ಕೆ ಹಾದು ಹೋಗುವ ಚಾನೆಲ್‌ಗೆ ಯುಜಿಡಿ ಮತ್ತೆ ಕೊಳಚೆ ನೀರು ಸೇರುತ್ತಿರುವ ಪರಿಣಾಮ ಈ ಭಾಗದ ಹೇಮೆ ನೀರನ್ನು ಅವಲಂಬಿಸಿರುವ ಕೆರೆಗಳಿಗೆ ಕಂಟಕವಾಗಿದ್ದು, ಈ ನೀರನ್ನು ಬಳಸುತ್ತಿರುವ ಜನರಿಗೆ ಆತಂಕ ಎದುರಾಗಿದೆ. ಹಾಗಾಗಿ ಮುಂದೆ ಎದುರಾಗಬಹುದಾದ ಕಂಟಕವನ್ನು ತಪ್ಪಿಸುವ ನಿಟ್ಟಿನಲ್ಲಿ ಕುಣಿಗಲ್ ಶಾಸಕ ಡಾ.ರಂಗನಾಥ್ ಅವರು ಎಚ್ಚೆತ್ತುಕೊಂಡು ಕ್ರಮವಹಿಸಿ ಯುಜಿಡಿ ಮತ್ತು ಕಲುಷಿತ ನೀರು ಹೇಮೆಗೆ ಸಂಪರ್ಕವಾಗುವುದನ್ನು ತಪ್ಪಿಸಬೇಕಾಗಿದೆ.
ಸಮಸ್ಯೆಯಾಗುತ್ತಿತ್ತು: ಭಾರಿ ಮಳೆ ಬಂದಾಗ ಕೊಳಚೆ ನೀರು ಚಾನೆಲ್‌ಗೆ ಸೇರಿ ಸಮಸ್ಯೆಯಾಗುತ್ತಿತ್ತು. ತುಮಕೂರಿನಲ್ಲಿ ಭಾರೀ ಮಳೆಯಿಂದಾಗಿ ನಗರದ ಚರಂಡಿ ನೀರು ಮಳೆಯ ಆರ್ಭಟದಿಂದ ಹರಿದು ಹೋಗಿ ಕುಡಿಯುವ ನೀರಿನ ಹೇಮಾವತಿ ನಾಲೆಗಳನ್ನು ಸೇರುತ್ತಿದ್ದು, ಇದರ ಪರಿಣಾಮ ನಾಲೆಯಿಂದ ಸುತ್ತಮುತ್ತಲ ಕೆರೆಗಳ ಒಡಲನ್ನೂ ಸಹ ಸೇರುತ್ತಿದ್ದ ಘಟನೆ ನಡೆದಿದೆ. ಆದರೆ ಈಗ ನೇರವಾಗಿ ಕಲುಷಿತ ನೀರು ನಾಲೆ ಸೇರುತ್ತಿದ್ದೆ.
ಅಧಿಕಾರಿಗಳ ಮೌನ : ಹೇಮಾವತಿ ಒಡಲಿಗೆ ಯುಜಿಡಿ, ಕಲುಷಿತ ನೀರು ಕಳೆದ ಏಳೆಂಟು ತಿಂಗಳಿಂದ ಸೇರುತ್ತಿದ್ದರೂ ಅಧಿಕಾರಿಗಳು ಮೌನವನ್ನು ವಹಿಸಿದ್ದಾರೆ. ಅಲ್ಲದೇ, ಇದು ಪಾಲಿಕೆಯ ಅಧಿಕಾರಿಗಳು ಮತ್ತು ಹೇಮಾವತಿ ನಾಲಾ ಅಧಿಕಾರಿಗಳ ನಿರ್ಲಕ್ಷ್ಯವಾಗಿದೆ ಎಂಬುದು ಸ್ಥಳೀಯರು ತಮ್ಮ ಆಕ್ರೋಶವನ್ನೂ ಹೊರ ಹಾಕುತ್ತಿದ್ದಾರೆ.
ಅಧಿಕಾರಿಗಳು ಹೆಚ್ಚು ಮುತುವರ್ಜಿ ವಹಿಸಬೇಕು: ಸಾರ್ವಜನಿಕರಿಂದ ಆಕ್ರೋಶ ಕೇಳಿಬಂದ ಬೆನ್ನಲ್ಲೇ ಇಂದು ಪಾಲಿಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಲುಷಿತ ಮತ್ತು ಯುಜಿಡಿ ನೀರು ಹೇಮಾವತಿ ನಾಲೆಗೆ ಹೋಗುತ್ತಿರುವುದುನ್ನು ಸರಿಪಡಿಸಲು ಮುಂದಾಗಿದ್ದಾರೆ. ಆದರೆ, ಹೇಮಾವತಿ ಇಲಾಖಾಧಿಕಾರಿಗಳು ಈ ಬಗ್ಗೆ ಹೆಚ್ಚು ಮುತುವರ್ಜಿ ವಹಿಸುವುದು ಅತ್ಯಗತ್ಯವಾಗಿದೆ.
ಹೇಮಾವತಿ ನಾಲೆಗೆ ಸೋರಿಕೆಯಾಗುತ್ತಿರುವುದು ಕೊಳಚೆ, ಯುಜಿಡಿ ನೀರಲ್ಲ. ಕಲುಷಿತ ನೀರು. ಈಗಾಗಲೇ ನಾವು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸೋರಿಕೆಯನ್ನು ತಡೆಗಟ್ಟುವುದಕ್ಕೆ ಕ್ರಮ ವಹಿಸಿದ್ದೇವೆ. ಈಗಾಗಲೇ ಸೋರಿಕೆ ಜಾಗಕ್ಕೆ ಕಾಂಕ್ರಿಟ್ ಹಾಕಲಾಗುತ್ತಿದೆ.
– ಅಭಿಷೇಕ್, ಎಇಇ, ತುಮಕೂರು ಮಹಾನಗರ ಪಾಲಿಕೆ
– ಗಿರೀಶ ಎಸ್.ಕಲ್ಗುಡಿ